Site icon Vistara News

ಕೈಗೆ ಬೈ: ಹಿರಿಯ ಕಾಂಗ್ರೆಸ್‌ ನಾಯಕ ಸುನಿಲ್‌ ಜಾಖಡ್‌ ಪಕ್ಷತ್ಯಾಗ

ಸುನಿಲ್‌ ಜಾಖಡ್‌

ಕಾಂಗ್ರೆಸ್‌ ನಾಯಕ ಸುನಿಲ್‌ ಜಾಖಡ್‌

ಹೊಸದಿಲ್ಲಿ: ಇತ್ತ ರಾಜಸ್ಥಾನದ ಉದಯಪುರದಲ್ಲಿ ಕಾಂಗ್ರೆಸ್‌ ಚಿಂತನಾ ಶಿಬಿರ ನಡೆಯುತ್ತಿರುವಂತೆಯೇ ಅತ್ತ ಪಂಜಾಬ್‌ ಕಾಂಗ್ರೆಸ್‌ನ ಮಾಜಿ ಮುಖ್ಯಸ್ಥ ಸುನಿಲ್‌ ಜಾಖಡ್‌ ಪಕ್ಷ ತೊರೆದಿದ್ದಾರೆ. ಪಕ್ಷ ವಿರೋಧಿ ಚಟುವಟಿಕೆಗಳ ಆರೋಪದಲ್ಲಿ ಹೈಕಮಾಂಡ್‌ನ ಅವಕೃಪೆಗೆ ಒಳಗಾಗಿದ್ದ ಸುನಿಲ್‌ ಜಾಖಡ್‌ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ್ದಾರೆ. ಮುಂಜಾನೆಯಷ್ಟೇ ಅವರು ತಮ್ಮ ಸಾಮಾಜಿಕ ಜಾಲತಾಣದ ಎಲ್ಲ ಹ್ಯಾಂಡಲ್‌ಗಳಿಂದ ಕಾಂಗ್ರೆಸ್‌ ಪಕ್ಷದ ಉಲ್ಲೇಖಗಳನ್ನು ತೆಗೆದುಹಾಕುವ ಮೂಲಕ ಮಹತ್ವದ ಹೆಜ್ಜೆಯ ಬಗ್ಗೆ ಮುನ್ಸೂಚನೆ ನೀಡಿದ್ದರು.

ಪಕ್ಷದ ನಿಷ್ಠಾವಂತ ನಾಯಕರೂ, ರಾಹುಲ್‌ ಗಾಂಧಿ ಅವರ ಅತ್ಯಾಪ್ತರೂ ಆಗಿದ್ದ ಸುನಿಲ್‌ ಜಾಖಡ್‌ ಅವರನ್ನು ಎರಡು ವಾರದ ಹಿಂದೆ ಪಕ್ಷದ ಎಲ್ಲ ಹುದ್ದೆಗಳಿಂದ ಕಿತ್ತು ಹಾಕಲಾಗಿತ್ತು. ಪಕ್ಷದ ಶಿಸ್ತು ಸಮಿತಿಯ ಆದೇಶದಂತೆ ಅವರನ್ನು ಮುಂದಿನ ಎರಡು ವರ್ಷಗಳ ಅವಧಿಗೆ ಯಾವುದೇ ಜವಾಬ್ದಾರಿಗೆ ಏರಿಸುವಂತಿರಲಿಲ್ಲ. ತಮ್ಮ ಮೇಲೆ ಪಕ್ಷ ವಿರೋಧಿ ಚಟುವಟಿಕೆ ಆರೋಪ ಹೊರಿಸಿದ್ದರಿಂದ ಜಾಖಡ್‌ ಬೇಸರಗೊಂಡಿದ್ದರು.

ದಿಲ್‌ ಕಿ ಬಾತ್‌ ಬಳಿಕ..
ಶನಿವಾರ ಮುಂಜಾನೆ ʻದಿಲ್‌ ಕಿ ಬಾತ್‌ʼ ಶೀರ್ಷಿಕೆಯಡಿ ಫೇಸ್‌ ಬುಕ್‌ನಲ್ಲಿ ಲೈವ್‌ ಬಂದಿದ್ದರು. ಬಳಿಕ ಸಾಮಾಜಿಕ ಜಾಲತಾಣದ ಎಲ್ಲ ಹ್ಯಾಂಡಲ್‌ಗಳಿಂದ ಕಾಂಗ್ರೆಸ್‌ ಎಂಬ ಪದವನ್ನು ಕಿತ್ತು ಹಾಕಿದ್ದರು. ಬಳಿಕ ರಾಜೀನಾಮೆ ಘೋಷಿಸಿದರು.

ಪಂಜಾಬ್‌ ಮುಖ್ಯಮಂತ್ರಿ ಸ್ಥಾನದಿಂದ ಕ್ಯಾಪ್ಟನ್‌ ಅಮರೀಂದರ್‌ ಸಿಂಗ್‌ ಅವರನ್ನು ಕಿತ್ತು ಹಾಕಿದ ಬಳಿಕ ಹೊಸಬರನ್ನು ನೇಮಿಸುವಾಗ ಕಾಂಗ್ರೆಸ್‌ ಹೈಕಮಾಂಡ್‌ ಪಂಜಾಬಿನ ಯಾವುದೋ ನಾಯಕನ ಮಾತು ಕೇಳಿತ್ತು ಎಂದು ಆರೋಪಿಸಿದ್ದರು. ತಮ್ಮ ಕುಟುಂಬ ಐವತ್ತು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದರೂ ಪಕ್ಷ ವಿರೋಧಿ ಚಟುವಟಿಕೆ ಹೆಸರಿನಲ್ಲಿ ಪಕ್ಷದ ಎಲ್ಲ ಹುದ್ದೆಗಳಿಂದ ಕಿತ್ತು ಹಾಕಿದ್ದು ನೋವುಂಟು ಮಾಡಿದೆ ಎಂದು ಹೇಳಿದ್ದಾರೆ.

ಬಿಜೆಪಿಯಿಂದ ಭಯದ ವಾತಾವರಣ ಸೃಷ್ಟಿ, ಕಾಂಗ್ರೆಸ್‌ ಚಿಂತನಾ ಶಿಬಿರದಲ್ಲಿ ಸೋನಿಯಾ

ಚನ್ನಿ ಅವರು ಹೊರೆ ಎಂದಿದ್ದರು
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷವು ಆಮ್‌ ಆದ್ಮಿ ಪಾರ್ಟಿ ಎದುರು ಹೀನಾಯವಾಗಿ ಸೋತಾಗ ಸುನಿಲ್‌ ಜಾಖಡ್‌ ಅವರು ಮಾಜಿ ಮುಖ್ಯಮಂತ್ರಿ ಚನ್ನಿ ಅವರು ಪಕ್ಷಕ್ಕೆ ಒಂದು ಹೊರೆ ಎಂದು ಬಣ್ಣಿಸಿದ್ದರು. ʻʻಸೋಲಿಗೆ ಹೈಕಮಾಂಡ್‌ ಕಾರಣವಲ್ಲ. ಚನ್ನಿ ಅವರ ದುರಾಸೆಯಿಂದಾಗಿಯೇ ಪಕ್ಷ ಸೋತಿದೆʼ ಎಂದು ಕಳೆದ ಮಾರ್ಚ್‌ನಲ್ಲಿ ಅವರು ಟ್ವೀಟ್‌ ಮಾಡಿದ್ದರು.

ಈ ನಡುವೆ ಸುನಿಲ್‌ ಜಾಖಡ್‌ ಅವರು ಚನ್ನಿ ಅವರ ವಿರುದ್ದ ಆಕ್ಷೇಪಾರ್ಹ ಪದಗಳನ್ನು ಬಳಸಿರುವುದರಿಂದ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಮಂತ್ರಿ ರಾಜ್‌ ಕುಮಾರ್‌ ವೆರ್ಕಾ ಆಗ್ರಹಿಸಿದ್ದರು. ಚನ್ನಿ ಅವರು ಪರಿಶಿಷ್ಟ ಜಾತಿಗೆ ಸೇರಿರುವುದರಿಂದ ಜಾಖಡ್‌ ಅವರ ಹೇಳಿಕೆಯನ್ನು ಈ ನಿಟ್ಟಿನಲ್ಲಿ ಗಂಭೀರವಾಗಿ ಪರಿಗಣಿಸಬೇಕು ಎಂದು ವಾದಿಸಿದ್ದರು. ಆದರೆ, ಈ ಆರೋಪಗಳನ್ನು ತಿರಸ್ಕರಿಸಿದ್ದ ಜಾಖಡ್‌, ತನ್ನ ಹೇಳಿಕೆಯನ್ನು ತಿರುಚಲಾಗಿದೆ ಎಂದು ಹೇಳಿದ್ದರು.

ಹಿಂದೂ ಎಂಬ ಕಾರಣಕ್ಕೆ ಸಿಎಂ ಮಾಡಲಿಲ್ಲ

ಕ್ಯಾಪ್ಟನ್‌ ಅಮರಿಂದರ್‌ ಸಿಂಗ್‌ ಅವರನ್ನು ಮುಖ್ಯಮಂತ್ರಿ ಹುದ್ದೆಯಿಂದ ಇಳಿಸಿದ ಬಳಿಕ ಸುನಿಲ್‌ ಜಾಖಡ್‌ ಅವರು ಈ ಹುದ್ದೆಯ ಪ್ರಧಾನ ಆಕಾಂಕ್ಷಿಗಳಲ್ಲಿ ಒಬ್ಬರಾಗಿದ್ದರು. ಆದರೆ, ಪಕ್ಷದ ಹಿರಿಯ ನಾಯಕಿಯಾಗಿರುವ ಅಂಬಿಕಾ ಸೋನಿ ಅವರು ಜಾಖಡ್‌ ಅವರು ಬೇಡ, ಪಂಜಾಬ್‌ನಲ್ಲಿ ಏನಿದ್ದರೂ ಸಿಕ್ಖರನ್ನೇ ಸಿಎಂ ಮಾಡಬೇಕು ಎಂಬ ವಾದವನ್ನು ಮುಂದಿಟ್ಟಿದ್ದರಿಂದ ಅವರ ಆಸೆಗೆ ತಣ್ಣೀರು ಬಿದ್ದಿತ್ತು. ತಾನೊಬ್ಬ ಹಿಂದೂ ಆಗಿರುವ ಕಾರಣಕ್ಕೆ ತನಗೆ ಮುಖ್ಯಮಂತ್ರಿ ಹುದ್ದೆ ನೀಡಲಿಲ್ಲ ಸುನಿಲ್‌ ಜಾಖಡ್‌ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು. ಈ ಎಲ್ಲ ಕಾರಣಗಳು ಅಂತಿಮವಾಗಿ ಸುನಿಲ್‌ ಜಾಖಡ್‌ ರಾಜೀನಾಮೆ ಪ್ರಕರಣದಲ್ಲಿ ಅಂತ್ಯಗೊಂಡಿದೆ.

ಸುನಿಲ್‌ ಜಾಖಡ್‌ ಅವರು ಈ ಹಿಂದೆ ಕಾಂಗ್ರೆಸ್‌ ಸರಕಾರದಲ್ಲಿ ಕೃಷಿ ಸಚಿವರಾಗಿದ್ದ ಬಲರಾಂ ಜಾಖಡ್‌ ಅವರ ಪುತ್ರ.

ಕಾಂಗ್ರೆಸ್‌ ಪಾರ್ಟಿ ಮುಳುಗುತ್ತಿರುವಾಗ ನೇಪಾಳದಲ್ಲಿ ʼಪಾರ್ಟಿʼ ಮಾಡುತ್ತಿದ್ದರು ರಾಹುಲ್‌ ಗಾಂಧಿ !

Exit mobile version