ಈ ವರ್ಷದ ಆರಂಭದಲ್ಲಿ ನಡೆದ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ (Karnataka Assembly election) ಕಾಂಗ್ರೆಸ್ ಪಕ್ಷದ ತಂತ್ರಗಾರಿಕೆ ಉಸ್ತುವಾರಿ, ಅದ್ಭುತ ಜಯಕ್ಕೆ ಕಾರಣವಾಗಿದ್ದ ಸುನಿಲ್ ಕನುಗೋಲು (Sunil Kanugolu) ಅವರು ತೆಲಂಗಾಣದಲ್ಲೂ (Telangana Election 2023) ತಮ್ಮ ಜಾದೂ ಮಾಡಿದ್ದಾರೆ. ಕರ್ನಾಟಕದ ಚುನಾವಣೆ ವೇಳೆ, ʻ40 ಪರ್ಸೆಂಟ್ ಸರ್ಕಾರʼ ಮತ್ತು ʻಪೇ ಸಿಎಂʼ ಕ್ಯಾಂಪೇನ್‌ಗಳ ಮೂಲಕ ಬಿಜೆಪಿ ವಿರುದ್ಧ ಜನಾಭಿಪ್ರಾಯ ರೂಪಿಸಿ, ಅದು ಕಾಂಗ್ರೆಸ್ ಪರವಾದ ಹವಾ ಸೃಷ್ಟಿಸುವಲ್ಲಿ ಕಾರಣವಾಗಿದ್ದರು. ತೆಲಂಗಾಣದಲ್ಲೂ ಸುನಿಲ್ ತಮ್ಮ ಅದೇ ರಾಜಕೀಯ ನಿಪುಣ ತಂತ್ರಗಾರಿಕೆ ಹೆಣೆದ ಪರಿಣಾಮ, ಹತ್ತು ವರ್ಷಗಳಿಂದ ಅಧಿಕಾರದಲ್ಲಿದ್ದ ಕೆಸಿಆರ್(KCR) ಭಾರತ ರಾಷ್ಟ್ರ ಸಮಿತಿ (Bharat Rashtra Samiti – BRS) ಈಗ ಸೋಲುತ್ತಿದ್ದು, ಕಾಂಗ್ರೆಸ್ ಜಯಭೇರಿ ಬಾರಿಸುತ್ತಿದೆ.
ನಾಲ್ಕು ರಾಜ್ಯಗಳ ಚುನಾವಣೆ ಫಲಿತಾಂಶದ ಕುತೂಹಲಕರ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ
ವಿಶೇಷ ಎಂದರೆ, ಇದೇ ಸುನಿಲ್ ಕನುಗೋಲು ಅವರನ್ನು ಎರಡು ವರ್ಷಗಳ ಹಿಂದೆ, ಕೆ ಚಂದ್ರಶೇಖರ್ ರಾವ್ ತಮ್ಮ ಫಾರ್ಮ್ ಹೌಸ್‌ಗೆ ಆಹ್ವಾನಿಸಿ, ತಮ್ಮ ಪರವಾಗಿ ಚುನಾವಣೆ ನಿರ್ವಹಣೆ ಮಾಡುವಂತೆ ಕೇಳಿಕೊಂಡಿದ್ದರು. ಕನುಗೋಲು ಅವರು ಆಗಷ್ಟೇ ತಮಿಳುನಾಡಿನಲ್ಲಿ ಡಿಎಂಕೆ ಪರವಾಗಿ ತಂತ್ರಗಾರಿಕೆ ಪೂರೈಸಿ, ಆ ಪಕ್ಷಯ ಯಶಸ್ಸಿಗೆ ಕಾರಣವಾಗಿದ್ದರು. ಈ ವೇಳೆ, ಕೆಸಿಆರ್ ಮತ್ತು ಕನುಗೋಲು ಮಧ್ಯೆ ಒಂದು ದಿನದವರೆಗೆ ಮೀಟಿಂಗ್ ನಡೆಯಿತು. ಅಂತಿಮವಾಗಿ ಕೆಸಿಆರ್ ಜತೆ ಕೆಲಸ ಮಾಡಲು ಕನುಗೋಲು ನಿರಾಕರಿಸಿದರು. ಅದಾದ ಕೆಲವು ದಿನಗಳಲ್ಲಿ ಎಲ್ಲರಿಗೂ ಶಾಕಿಂಗ್ ಸುದ್ದಿ ಕಾದಿತ್ತು. ಸುನಿಲ್ ಕನುಗೋಲು ಅವರು, ಎಐಸಿಸಿ ಚುನಾವಣಾ ತಂತ್ರಗಾರಿಕೆ ಸಮಿತಿಯ ಚೇರ್ಮನ್ ಆಗಿ ನೇಮಕಕೊಂಡಿದ್ದರು! ಈಗ ಅದೇ ಸುನಿಲ್ ಕನುಗೋಲು ಅವರು ಈಗ ಕೆಸಿಆರ್ ಅವರಿಗೆ ಸೋಲಿನ ರುಚಿ ತೋರಿಸಿದ್ದಾರೆ! ಬಹುಶಃ ಇವತ್ತಿನ ರಿಸಲ್ಟ್ ನೋಡಿ, ಸುನಿಲ್ ಅವರನ್ನು ನೇಮಕ ಮಾಡಿಕೊಳ್ಳದೇ ಹೋದದ್ದು ತಪ್ಪಾಯ್ತು ಎಂದು ಕೆಸಿಆರ್ ಮನಸ್ಸಿನಲ್ಲಿ ಭಾವಿಸುತ್ತಿರಬಹುದು. ಕೆಸಿಆರ್ ಅವರು ಇತ್ತೀಚಿನ ದಿನಗಳಲ್ಲಿ ಕೈಗೊಂಡು ಅತಿ ದೊಡ್ಡ ತಪ್ಪು ನಿರ್ಧಾರವೂ ಆಗಿರುವ ಸಾಧ್ಯತೆ ಇದೆ.
ಏಳೆಂಟು ತಿಂಗಳ ಮುಂಚೆ ಹೋಲಿಸಿದರೆ ತೆಲಂಗಾಣ ಕಾಂಗ್ರೆಸ್‌ನಲ್ಲಿ ಅಂಥ ಭರವಸೆಗಳು ಯಾವವು ಇರಲಿಲ್ಲ. ಕಾಂಗ್ರೆಸ್ ಪಕ್ಷವು ಪಾತಾಳ ಕಂಡಿತ್ತು. ಇರುವ ನಾಯಕರ ಮಧ್ಯೆ ಹೊಂದಾಣಿಕೆ ಇರಲಿಲ್ಲ. ಕಚ್ಚಾಟ ಮಿತಿಮೀರಿತ್ತು. ಈ ಎಲ್ಲ ಸವಾಲುಗಳನ್ನು ಮೀರುವುದು ಸುನಿಲ್ ಅವರಿಗೆ ಮೊದಲ ಟಾಸ್ಕ್ ಆಗಿತ್ತು. ರಾಹುಲ್ ಗಾಂಧಿ ಸೇರಿದಂತೆ ಪಕ್ಷದ ಮುಖಂಡರು ಕೂಡ ಸುನಿಲ್ ಅವರಿಗೆ ಫುಲ್ ಫ್ರೀ ಹ್ಯಾಂಡ್ ನೀಡಿದ್ದರು. ಹಾಗಾಗಿ, ಕೆಸಿಆರ್ ಸೋಲಿಗೆ ಏನೆಲ್ಲ ಮಾಡಬೇಕಿತ್ತೋ ಆ ಎಲ್ಲ ತಂತ್ರಗಾರಿಕೆಯನ್ನು ಅವರು ಹೆಣೆದರು. ಅಂತಿಮವಾಗಿ ರಿಸಲ್ಟ್ ಅವರ ಮುಂದಿದೆ. ಇಲ್ಲದಿದ್ದರೆ, ತೆಲಂಗಾಣದಲ್ಲಿ ಭಾರತೀಯ ಜನತಾ ಪಾರ್ಟಿ ಕಾಂಗ್ರೆಸ್ ಪಕ್ಷವನ್ನು ಮೂರನೇ ಸ್ಥಾನಕ್ಕೆ ತಳ್ಳುವ ಎಲ್ಲ ಸಾಧ್ಯತೆಗಳಿದ್ದವು.
ಮೊದಲು ಮನೆ ಗಟ್ಟಿ ಮಾಡಿದರು…
ತೆಲಂಗಾಣ ಕಾಂಗ್ರೆಸ್ ಪಕ್ಷದ ಪರಿಸ್ಥಿತಿಯನ್ನು ಮೊದಲಿಗೆ ಅಧ್ಯಯನ ಮಾಡಿದ ಕನುಗೋಲು, ಎದುರಾಳಿ ಪಕ್ಷಗಳ ವಿರುದ್ಧ ತಂತ್ರಗಾರಿಕೆ ಹೆಣೆಯುವ ಮೊದಲು ಕಾಂಗ್ರೆಸ್ ಪಕ್ಷದ ಬೇಸ್ ಅನ್ನು ಸರಿಪಡಿಸುವ ಅವಶ್ಯಕತೆಯನ್ನು ಮನಗಂಡರು. ಕರ್ನಾಟಕದಲ್ಲೂ ಅವರು ಇದೇ ತಂತ್ರಗಾರಿಕೆ ಅನುಸರಿಸಿದ್ದರು. ಬಳಿಕ, ಕೆಸಿಆರ್ ವಿರುದ್ದ ಜನಾಭಿಪ್ರಾಯದ ಕಥನವನ್ನು ರೂಪಿಸಲು ಆರಂಭಿಸಿದರು. ಈ ಹಂತದಲ್ಲಿ ಕನುಗೋಲು ವಿರುದ್ಧ ಕೆಸಿಆರ್ ಕ್ಷುದ್ರರಾದರು. ಅಲ್ಲದೇ, ಹೈದ್ರಾಬಾದ್‌ನಲ್ಲಿದ್ದ ಕನುಗೋಲು ಕಚೇರಿ ಮೇಲೆ ಪೊಲೀಸರಿಂದ ದಾಳಿ ಮಾಡಿಸಿದರು. ಕಚೇರಿಯನ್ನು ಸೀಜ್ ಮಾಡಿದರು. ಅಷ್ಟೇ ಅಲ್ಲದೇ ಕನುಗೋಲು ಅವರನ್ನು ಪೊಲೀಸರು ವಿಚಾರಣೆ ಕೂಡ ಮಾಡಿದರು. ಕೊನೆಗೆ ಹೈದ್ರಾಬಾದ್‌ನಲ್ಲಿ ಹೊರ ಕಚೇರಿ ತೆರೆದು, ಕನುಗೋಲು ತಮ್ಮ ಕೆಲಸ ಆರಂಭಿಸಬೇಕಾಯಿತು.
ಪ್ರಚಾರದಿಂದ ದೂರ ಈ ಸುನಿಲ್
ಸುನಿಲ್ ಅವರು ಕಾರ್ಯ ವೈಖರಿಯೂ ವಿಶಿಷ್ಟವಾಗಿದೆ. ಅವರದ್ದೇ ಆದ ಶೈಲಿಯನ್ನು ಕಾರ್ಯನಿರ್ವಹಿಸುತ್ತಾರೆ. ಮಾಧ್ಯಮಗಳಿಂದ ದೂರ. ಮಿತ ಭಾಷಿ, ಹುಡುಕಿದರೂ ಅವರ ಒಂದು ಫೋಟೋ ಕೂಡ ಸಿಗಲ್ಲ. ಪ್ರಚಾರದಿಂದ ಬಹುದೂರು. ಅಂಥ ವ್ಯಕ್ತಿ ಈಗ ಕಾಂಗ್ರೆಸ್‌ನ ಅತ್ಯಂತ ಪ್ರಭಾವಿ ವ್ಯಕ್ತಿಗಳಲ್ಲಿ ಒಬ್ಬರಾಗಿ ಹೊರಹೊಮ್ಮಿದ್ದಾರೆ. ರಾಹುಲ್ ಗಾಂಧಿ ಅವರಿಗೆ ಚುನಾವಣಾ ವಿಷಯಗಳಿಗೆ ಸಂಬಂಧಿಸಿದಂತೆ ನೇರವಾಗಿ ಸಲಹೆ ನೀಡುವಷ್ಟರ ಮಟ್ಟಿಗೆ ಬೆಳೆದಿದ್ದಾರೆ. ವಿಶೇಷ ಎಂದರೆ, ಇವರು ನಿರಹಂಕಾರಿ. ಯಾವುದೇ ಹಮ್ಮು ಬಿಮ್ಮುಗಳಿಲ್ಲ.
ತೆಲಂಗಾಣದಲ್ಲಿ ಕನುಗೋಲು ಮಾಡಿದ ಜಾದೂ ಏನು?
ಖಂಡಿತವಾಗಿಯೂ ರಾಜಕೀಯ ತಂತ್ರಗಾರಿಕೆ ನಿಪುಣನಾಗಿ ಕರ್ನಾಟಕ ಚುನಾವಣೆ ಸುನಿಲ್ ಅವರಿಗೆ ಕಷ್ಟವಾಗಿತ್ತು. ಆದರೆ, ಕರ್ನಾಟಕಕ್ಕಿಂತಲೂ ಕಷ್ಟ ಪರಿಸ್ಥಿತಿ ತೆಲಂಗಾಣದಲ್ಲಿತ್ತು. ಸವಾಲುಗಳನ್ನು ಇಷ್ಟ ಪಡುವ ಕನುಗೋಲು ಅವರು ನಿಧಾನವಾಗಿ ಒಂದೊಂದೇ ತಂತ್ರಗಾರಿಕೆ ಹೆಣೆದು, ಕಾಂಗ್ರೆಸ್‌ಗೆ ಜಯ ತಂದುಕೊಡುವಲ್ಲಿ ಕಾರಣರಾದರು.
ತೆಲಂಗಾಣದಲ್ಲಿ ಕಾಂಗ್ರೆಸ್ ಗೆಲ್ಲಬೇಕಿದ್ದರೆ, ಭಾರತೀಯ ಜನತಾ ಪಾರ್ಟಿ ಮತ ಪ್ರಮಾಣವನ್ನು ಏರದಂತೆ ನೋಡಿಕೊಳ್ಳಬೇಕಿತ್ತು. ಬಿಜೆಪಿ ವೋಟ್ ಶೇರ್ ಹೆಚ್ಚಾದಷ್ಟು ಬಿಆರ್‌ಎಸ್ ಗೆಲುವಿನ ಹಾದಿ ಸಲೀಲು ಎಂಬುದು ಅವರಿಗೆ ಗೊತ್ತಿತ್ತು. ಹಾಗಾಗಿ, ರಾಜ್ಯದಲ್ಲಿ ಬಿಜೆಪಿಯ ಪ್ರಭಾವವನ್ನು ಸಿಮೀತಿಗೊಳಿಸುವ ಪ್ರಯತ್ನ ಮಾಡಿದರು. ಮತ್ತೊಂದೆಡೆ, ತೆಲಂಗಾಣದಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸದಂತೆ ವೈಎಸ್ಆರ್ ಅವರ ಪುತ್ರಿ ವೈಎಸ್ ಶರ್ಮಿಳಾ ಅವರ ಮನವೊಲಿಸುವಲ್ಲಿ ಯಶಸ್ವಿಯಾದರು. ತಮ್ಮನ್ನು ಬಂಧಿಸಲು ಪ್ರಯತ್ನಿಸಿದ್ದ ಕೆಸಿಆರ್ ವಿರುದ್ದ ಸೇಡು ತೀರಿಸಿಕೊಳ್ಳಲು ಶರ್ಮಿಳಾ ಅವರು ಪಣ ತೊಟ್ಟಿದ್ದರು. ಮತ್ತೊಂದೆಡೆ, ಟಿಡಿಪಿ ಮುಖ್ಯಸ್ಥ ಎನ್ ಚಂದ್ರಬಾಬು ನಾಯ್ಡು ಕೂಡ ತೆಲಂಗಾಣದಲ್ಲಿ ಸ್ಪರ್ಧೆಯಿಂದ ಹಿಂದೆ ಸರಿದಿದ್ದು, ಕಾಂಗ್ರೆಸ್ ಕೆಲಸ ಮತ್ತಷ್ಟು ಸುಲಭವಾಯಿತು. ಮತ ವಿಭಜನೆಯನ್ನು ತಡೆದೆ ಕಾಂಗ್ರೆಸ್ ವರ್ಸಸ್ ಕೆಸಿಆರ್ ಸ್ಪರ್ಧೆಯ ಕಥನವನ್ನು ಸೆಟ್ ಮಾಡುವಲ್ಲಿ ಯಶಸ್ವಿಯಾದರು. ಅವರ ಈ ಎಲ್ಲ ತಂತ್ರಗಳು ಕಾಂಗ್ರೆಸ್‌ಗೆ ತೆಲಂಗಾಣದಲ್ಲಿ ಬಂಪರ್ ಲಾಭವನ್ನು ತಂದುಕೊಟ್ಟಿವೆ.
ಸುನೀಲ್ ಕನುಗೋಲು ಬಗ್ಗೆ ಈ ವಿಷಯ ಗೊತ್ತೇ?
ಮ್ಯಾನೇಜ್‌ಮೆಂಟ್ ಕನ್ಸಲ್ಟೆಂಟ್ ಕಂಪನಿ ಮೆಕೆನ್ಸಿಯ ಸಲಹೆಗಾರರಾಗಿದ್ದ 42 ವರ್ಷದ ಸುನೀಲ್ ಕನುಗೋಲು ನಮ್ಮ ಬಳ್ಳಾರಿಯವರು. ಆದರೆ ಓದಿದ್ದು, ಬೆಳೆದಿದ್ದು ಎಲ್ಲ ಚೆನ್ನೈನಲ್ಲಿ. ಬಳ್ಳಾರಿಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿದ ಅವರ ಕುಟುಂಬ ಚೆನ್ನೈಗೆ ಸ್ಥಳಾಂತರಗೊಂಡಿತ್ತು. ಅಲ್ಲಿ ಓದಿದ ಅವರು ಉನ್ನತ ವ್ಯಾಸಾಂಗಕ್ಕಾಗಿ ಅಮೆರಿಕಕ್ಕೆ ಹೋಗಿದ್ದರು. ಎಂಜಿನಿಯರಿಂಗ್ ಓದಿರುವ ಅವರು, ಫೈನಾನ್ಸ್ ವಿಷಯದಲ್ಲಿ ಎಂಎಸ್ಸಿ ಮಾಡಿದ್ದಾರೆ. ಅಲ್ಲದೆ ಎಂಬಿಎ ಪದವಿಯನ್ನೂ ಪಡೆದುಕೊಂಡಿದ್ದಾರೆ. 20̈09ರಲ್ಲಿ ಅಮೆರಿಕದಿಂದ ಹಿಂದಿರುಗಿದ ಅವರು 2014ರ ಲೋಕಸಭಾ ಚುನಾವಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಎಸ್‌ಆರ್ ಇಂಡಿಪೆಡೆಂಟ್ ಫಿಷರೀಸ್ ಪ್ರವೇಟ್ ಲಿಮಿಟೆಡ್, ಎಸ್‌ಆರ್ ನ್ಯೂಟ್ರೋ ಫುಡ್ಸ್ ಪ್ರೈವೇಟ್ ಲಿಮಿಟೆಡ್ ಮತ್ತು ಬ್ರೈನ್ ಸ್ಟ್ರೋಮ್ ಇನೋವೇಷನ್ ಅಂಡ್ ರಿಸರ್ಚ್ ಪ್ರವೇಟ್ ಲಿಮಿಟೆಡ್ (BSIR) ಕಂಪನಿಗಳ ನಿರ್ದೇಶಕರಾಗಿದ್ದಾರೆ.
ಉತ್ತರ ಪ್ರದೇಶದಲ್ಲಿ ಬಿಜೆಪಿ ಪರ ತಂತ್ರಗಾರಿಕೆ
2017ರಲ್ಲಿ ಉತ್ತರ ಪ್ರದೇಶದಲ್ಲಿ ಬಿಜೆಪಿ ಗೆಲ್ಲಲು ಇವರು ನಡೆಸಿದ ತಂತ್ರಗಾರಿಕೆಯ ಪಾಲೂ ಇದೆ ಎಂದು ಹೇಳಲಾಗುತ್ತಿದೆ. ರಾಜಕೀಯ ತಂತ್ರಗಾರಿಕೆಯಲ್ಲಿ ಒಂದು ದಶಕಕ್ಕೂ ಹೆಚ್ಚಿನ ಅನುಭವ ಹೊಂದಿರುವ ಸುನೀಲ್ ಕನುಗೋಲು ಈಗಾಗಲೇ 14 ಚುನಾವಣೆಗಳಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಗುಜರಾತ್‌ನಿಂದ ಹಿಡಿದು ಹಲವು ಚುನಾವಣೆಗಳಲ್ಲಿ ಬಿಜೆಪಿ ಗೆದ್ದಿದ್ದು ಇವರ ನೆರವಿನಿಂದಲೇ.
ಆರಂಭದಲ್ಲಿ ಬಿಜೆಪಿ ಜತೆಗಿದ್ದರು ಕನುಗೋಲು
ಬಿಜೆಪಿಯ ʻʻಅಸೋಸಿಯೇಷನ್ ಬಿಲಿಯನ್ ಮೈಂಡ್ʼʼ (ಎಬಿಎಂ)ನ ಮುಖ್ಯಸ್ಥರಾಗಿದ್ದ ಸುನೀಲ್ ಕನುಗೋಲು ಪಕ್ಷದ ಐಟಿ ಸೆಲ್ ವ್ಯವಸ್ಥಿತ ಕ್ಯಾಂಪೇನ್ ನಡೆಸುವಂತೆ ನೋಡಿಕೊಳ್ಳುತ್ತಿದ್ದರು. ರಾಜ್ಯದಲ್ಲಿ ಕಳೆದ ಚುನಾವಣೆಯಲ್ಲಿ ಅವರು ಬಿಜೆಪಿ ಪರವಾಗಿ ಕೆಲಸ ಮಾಡಿದ್ದರು. ಕಳೆದ ಚುನಾವಣೆಗೂ ಮೋದಲು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಪರಿವರ್ತನಾ ಯಾತ್ರೆಯ ಸಮಾರೋಪದಲ್ಲಿ 6 ಸಾವಿರ ಐಟಿ ಕಾರ್ಯಕರ್ತರು ಕೆಲಸ ಮಾಡುವಂತೆ ಅವರು ನೋಡಿಕೊಂಡಿದ್ದರು! ಹೀಗಾಗಿ ಬಿಜೆಪಿಯ ತಂತ್ರಗಾರಿಕೆಯನ್ನು ಅವರು ಚೆನ್ನಾಗಿ ಅರ್ಥಮಾಡಿಕೊಳ್ಳಬಲ್ಲರು, ಊಹಿಸಬಲ್ಲರು.
ಚೆನ್ನೈನ್ ನಿವಾಸಿಯಾಗಿರುವುದರಿಂದ ತಮಿಳುನಾಡಿನ ರಾಜಕೀಯ ಪಕ್ಷಗಳೊಂದಿಗೆ ಒಳ್ಳೆಯ ಸಂಬಂಧ ಹೊಂದಿದ್ದಾರೆ. ಡಿಎಂಕೆ, ಎಐಡಿಎಂಕೆ ಪಕ್ಷಗಳ ಪರವಾಗಿಯೂ ಕೆಲಸ ಮಾಡಿದ್ದಾರೆ. ತಮಿಳುನಾಡು ಮುಖ್ಯಮಂತ್ರಿಯಾಗಿರುವ ಸ್ಟಾಲಿನ್‌ಗೆ ರಾಜಕೀಯ ಇಮೇಜ್ ಕಟ್ಟಿಕೊಟ್ಟ, 2016ರ Namakku Naame ಕ್ಯಾಂಪೇನ್‌ನ ಅನ್ನು ಇವರೇ ರೂಪಿಸಿದ್ದರು. ಕಳೆದ ವರ್ಷದ ಮಾರ್ಚ್‌ನಲ್ಲಿ ಕಾಂಗ್ರೆಸ್ ಸೇರಿದ್ದ ಇವರು ರಾಹುಲ್ ಗಾಂಧಿಗೆ ಮಾರ್ಗದರ್ಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ʻಭಾರತ್ ಜೋಡೋ ಯಾತ್ರೆʼʼಯ ರೂವಾರಿಗಳಲ್ಲಿ ಇವರೂ ಒಬ್ಬರು.
ನಾಲ್ಕು ರಾಜ್ಯಗಳ ಚುನಾವಣೆ ಫಲಿತಾಂಶದ ಕುತೂಹಲಕರ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ