Site icon Vistara News

Viral Video | ಯಂತ್ರಕ್ಕಿಂತಲೂ ವೇಗವಾಗಿ ಟಿಕೆಟ್‌ ಕೊಡುವ ರೈಲ್ವೆ ಉದ್ಯೋಗಿ !

Superfast Indian Railways Employee

ಮುಂಬಯಿ: ಅತಿ ಚುರುಕಾಗಿ ಕೆಲಸ ಮಾಡುವವರನ್ನು ಯಂತ್ರಕ್ಕೆ ಹೋಲಿಸುವುದುಂಟು. ಆದರೆ ರೈಲ್ವೆ ಉದ್ಯೋಗಿಯೊಬ್ಬರು ಯಂತ್ರಕ್ಕಿಂತ ಚುರುಕಾಗಿ ಕೆಲಸ ಮಾಡಿ ಜನರ ಗಮನ ಸೆಳೆದಿದ್ದಾರೆ.

ಭಾರತೀಯ ರೈಲ್ವೆಯ ನಿಲ್ದಾಣವೊಂದರಲ್ಲಿ ತೆಗೆದ ಈ ರೈಲ್ವೆ ಉದ್ಯೋಗಿಯ ವಿಡಿಯೋ ವೈರಲ್‌ ಆಗಿದೆ. ಇದರಲ್ಲಿ ವಯಸ್ಕ ಉದ್ಯೋಗಿಯೊಬ್ಬರು ಟಿಕೆಟ್‌ ಯಂತ್ರದ ಬಳಿ ಜನರಿಗೆ ಟಿಕೆಟ್‌ ಮುದ್ರಿಸಿಕೊಡುತ್ತಿದ್ದಾರೆ. ಆದರೆ ಅವರ ಮಿಂಚಿನ ವೇಗದ ಮುಂದೆ ಟಿಕೆಟ್‌ ಯಂತ್ರವೇ ನಿಧಾನ ಎನಿಸುತ್ತದೆ! ಈ ಉದ್ಯೋಗಿಯ ವೇಗ ಮತ್ತು ಕಾರ್ಯಕ್ಷಮತೆಯನ್ನು ಮೆಚ್ಚದಿರಲು ಸಾಧ್ಯವೇ ಇಲ್ಲ.

ಯಾವುದೇ ಗೊಂದಲ, ಗಡಿಬಿಡಿಯಿಲ್ಲದೆ ಸುಲಭದಲ್ಲಿ ಈ ವೇಗವನ್ನು ಅವರು ಸಾಧಿಸಿಕೊಂಡಂತೆ ನೋಡುಗರಿಗೆ ಭಾಸವಾಗುತ್ತದೆ. ಒಬ್ಬ ಪ್ರಯಾಣಿಕರಿಂದ ಹಣ ತೆಗೆದುಕೊಂಡು, ಮತ್ತೊಬ್ಬರಲ್ಲಿ ಪ್ರಯಾಣದ ವಿವರ ಕೇಳಿ, ಒಂದಾದ ಮೇಲೊಂದು ಮಾಹಿತಿಯನ್ನು ಪಟಪಟನೆ ಪರದೆಯ ಮೇಲೆ ಒತ್ತುತ್ತಾ ಅವರವರಿಗೆ ಬೇಕಾದಂತೆ ಟಿಕೆಟ್‌ ಮುದ್ರಿಸಿ ಕೊಡುವುದು ವಿಡಿಯೋದಲ್ಲಿದೆ.

ಪರದೆಯನ್ನು ನೋಡದೆಯೇ ಅವರು ವಿವರಗಳನ್ನು ಯಂತ್ರಕ್ಕೆ ನೀಡಬಲ್ಲರು ಎಂಬುದಂತೂ ಚೋದ್ಯ ಎನಿಸುತ್ತದೆ. ಆ ನಿಟ್ಟಿನಲ್ಲಿ, ಪ್ರಯಾಣಿಕರೇ ಈ ಯಂತ್ರವನ್ನು ಬಳಸಿದರೆ ಒಬ್ಬೊಬ್ಬರಿಗೆ ೩೦ ಸೆಕೆಂಡ್‌ನಿಂದ ಒಂದು ನಿಮಿಷದವರೆಗೂ ಸಮಯ ಬೇಕಾಗಬಹುದು. ಆದರೆ ಇವರು ೧೫ ಸೆಕೆಂಡ್‌ನಲ್ಲಿ ಮೂವರಿಗೆ ಟಿಕೆಟ್‌ ಮುದ್ರಿಸಿಕೊಟ್ಟಿದ್ದಾರೆ.

ಈ ವೀಡಿಯೋಗೆ ಬಹಳಷ್ಟು ಟ್ವಿಟರ್‌ ಬಳಕೆದಾರರು ಪ್ರತಿಕ್ರಿಯಿಸಿದ್ದಾರೆ. ʻಅದ್ಭುತ ನಿಖರತೆ ಇವರದ್ದು. ಸಮಯವೂ ಉಳಿಯುತ್ತದೆʼ; ʻನಮ್ಮ ದೇಸೀ ಮಿಂಚುʼ; ʻಭಾರತದಲ್ಲಿ ಪ್ರತಿಭೆಗಳಿವೆʼ; ʻನಾವೆಷ್ಟೇ ಯಂತ್ರಚಾಲಿತ ವ್ಯವಸ್ಥೆ ಮಾಡಿದರೂ, ಮಾನವರನ್ನು ಮಣಿಸಲಾಗದು ಎಂಬುದಕ್ಕೆ ಇದು ಉದಾಹರಣೆʼ; ʻಟಿಕೆಟ್‌ ಮುದ್ರಿಸಲು ಈ ಯಂತ್ರವೇ ಹೆಚ್ಚಿನ ಸಮಯ ತೆಗೆದುಕೊಳ್ಳುತ್ತಿದೆʼ ಎಂಬಂಥ ಹಲವಾರು ಮಾತುಗಳು ಕೇಳಿಬಂದಿವೆ.  

ಈ ಉದ್ಯೋಗಿ ಯಾರು, ಈ ವಿಡಿಯೋವನ್ನು ಎಲ್ಲಿ ರೆಕಾರ್ಡ್‌ ಮಾಡಲಾಗಿದೆ ಎಂಬುದು ಸ್ಪಷ್ಟವಾಗಿಲ್ಲ. ರೈಲ್ವೇ ಇಲಾಖೆಯೂ ಈ ಮಾಹಿತಿಯನ್ನು ಖಚಿತಪಡಿಸಿಲ್ಲ.

ಇದನ್ನೂ ಓದಿ | video viral: ಎಂಥಾ ಅಡ್ಜಸ್ಟ್‌ಮೆಂಟ್! ಒಂದೇ ಬೈಕಲ್ಲಿ ಆರು ಜನರ ಫ್ಯಾಮಿಲಿ ಟೂರ್‌!

Exit mobile version