ಚೆನ್ನೈ: ನಟ ಅಕ್ಷಯ್ ಕುಮಾರ್ ದೇಶದಲ್ಲೇ ಅತ್ಯಧಿಕ ತೆರಿಗೆ ಪಾವತಿಸುವ ನಂಬರ್ ಒನ್ ನಾಗರಿಕರಾಗಿದ್ದರೆ, ತಮಿಳುನಾಡಿನಲ್ಲಿ ಈ ಸನ್ಮಾನವನ್ನು ಪಡೆದವರು ನಟ ರಜನೀಕಾಂತ್. ಇವರಿಬ್ಬರೂ ಕಳೆದ ಹಲವು ವರ್ಷಗಳಿಂದ ಈ ಗೌರವಕ್ಕೆ ಪಾತ್ರರಾಗುತ್ತಿದ್ದಾರೆ.
ಸೂಪರ್ ಸ್ಟಾರ್ ರಜನೀಕಾಂತ್ ಅವರಿಗೆ ತಮಿಳುನಾಡಿನ ಆದಾಯ ತೆರಿಗೆ ಇಲಾಖೆ ತಮಿಳುನಾಡಿನ ಅತಿ ಹೆಚ್ಚು ತೆರಿಗೆ ಪಾವತಿದಾರ, ಪ್ರಾಮಾಣಿಕ ತೆರಿಗೆ ಪಾವತಿದಾರ ಮತ್ತು ತ್ವರಿತವಾಗಿ ತೆರಿಗೆ ಪಾವತಿ ಮಾಡುವ ನಾಗರಿಕ ಎಂಬ ಗೌರವವನ್ನು ನೀಡಿದೆ.
ಆದಾಯ ತೆರಿಗೆ ಇಲಾಖೆಯಿಂದ ಗೌರವ:
ಜುಲೈ 24ರಂದು ನಡೆದ ಆದಾಯ ತೆರಿಗೆ ದಿನಾಚರಣೆ ವೇಳೆ ಚೆನ್ನೈನಲ್ಲಿ ತ್ವರಿತ ಮತ್ತು ಪ್ರಾಮಾಣಿಕ ತೆರಿಗೆ ಪಾವತಿದಾರರನ್ನು ಗೌರವಿಸಲಾಯಿತು. ತೆಲಂಗಾಣ ರಾಜ್ಯಪಾಲರಾದ ತಮಿಳಿಸೈ ಸೌಂದರರಾಜನ್ ಅವರು ಸನ್ಮಾನ ಮಾಡಿದರು. ರಜನಿಕಾಂತ್ ಅವರ ಪರವಾಗಿ ಅವರ ಪುತ್ರಿ ಮತ್ತು ಚಲನಚಿತ್ರ ನಿರ್ಮಾಪಕಿ ಐಶ್ವರ್ಯ ಅವರು ಪ್ರಶಸ್ತಿಯನ್ನು ಸ್ವೀಕರಿಸಿದರು.
ಈ ಕುರಿತಂತೆ ಫೋಟೋಗಳನ್ನು ಹಂಚಿಕೊಂಡಿರುವ ಐಶ್ವರ್ಯ, “ಹೆಚ್ಚಿನ ಮತ್ತು ವೇಗದ ತೆರಿಗೆದಾರರ ಹೆಮ್ಮೆಯ ಮಗಳು. ಅಪ್ಪನನ್ನು ಗೌರವಿಸಿದ್ದಕ್ಕಾಗಿ ತಮಿಳುನಾಡು ಮತ್ತು ಪುದುಚೇರಿಯ ಆದಾಯ ತೆರಿಗೆ ಇಲಾಖೆಗೆ ತುಂಬಾ ಧನ್ಯವಾದಗಳು.” ಎಂದು ಬರೆದು ಇನ್ಸ್ಟಾಗ್ರಾಮ್ ನಲ್ಲಿ ಫೋಟೊಗಳನ್ನು ಹಂಚಿಕೊಂಡಿದ್ದಾರೆ.
ಆದಾಯ ಎಷ್ಟು?
ರಜನೀಕಾಂತ್ ಅವರು ಕಳೆದ ಹಲವು ವರ್ಷಗಳಿಂದ ತಮಿಳು ಚಿತ್ರರಂಗದ ಅನಭಿಷಿಕ್ತ ದೊರೆಯಾಗಿ ಗಮನ ಸೆಳೆಯುತ್ತಿದ್ದಾರೆ. ೧೬೦ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿರುವ ರಜನಿ ಈಗೀಗ ಕಡಿಮೆ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಅವರು ಮುಂದಿನ ಜೈಲರ್ ಸಿನಿಮಾಕ್ಕೆ ಪಡೆಯಲಿರುವ ಸಂಭಾವನೆ ೧೫೦ ಕೋಟಿ ಎಂದು ಹೇಳಲಾಗಿದೆ. ಅಣ್ಣಾತ್ತೆ ಸಿನಿಮಾಕ್ಕೂ ಇಷ್ಟೇ ಮೊತ್ತ ಸಿಕ್ಕಿದೆ ಎಂದು ಹೇಳಲಾಗುತ್ತಿದೆ. ಆದರೆ, ಅವರ ವಾರ್ಷಿಕ ಆದಾಯವನ್ನು ೫೦ ಕೋಟಿ ಎಂದು ಲೆಕ್ಕ ನೀಡಲಾಗುತ್ತಿದೆ.
ಇದನ್ನೂ ಓದಿ| |Chandramukhi-2 | ಸೂಪರ್ ಸ್ಟಾರ್ ರಜನಿಕಾಂತ್ ಆಶೀರ್ವಾದದೊಂದಿಗೆ ಚಂದ್ರಮುಖಿ-2 ಶೂಟಿಂಗ್ ಕಿಕ್ ಸ್ಟಾರ್ಟ್