Site icon Vistara News

ದೇಶದ್ರೋಹ ಕಾಯಿದೆಗೆ ಸುಪ್ರೀಂ ಕೋರ್ಟ್ ತಡೆ, ಹೊಸ ಕೇಸ್ ದಾಖಲಿಸುವಂತಿಲ್ಲ

No data to show Same Sex Marriage is elitist concept, Says Supreme Court

ನವದೆಹಲಿ: ಐಪಿಸಿ ಸೆಕ್ಷನ್‌ 124 ಎ ಅಡಿಯಲ್ಲಿ ಬರುವ, ಸುಮಾರು 152 ವರ್ಷಗಳಷ್ಟು ಹಳೆಯದಾದ ದೇಶದ್ರೋಹ ಕಾಯಿದೆಯನ್ನು ಕೇಂದ್ರ ಸರ್ಕಾರ ಮರುಪರಿಶೀಲನೆ ಮಾಡುವವರೆಗೂ ಅದನ್ನು ಬಳಸದಿರುವಂತೆ ಸುಪ್ರೀಂಕೋರ್ಟ್‌ ಮಹತ್ವದ ಮಧ್ಯಂತರ ತೀರ್ಪು ನೀಡಿದೆ. ದೇಶದ್ರೋಹ ಕಾಯಿದೆ ಮತ್ತು ಅದರ ದುರುಪಯೋಗದ ಕುರಿತು ಹಲವು ವರ್ಷಗಳಿಂದ ವ್ಯಾಪಕ ಚರ್ಚೆ ನಡೆಯುತ್ತಿತ್ತು.

ಮರುಪರಿಶೀಲನೆ ಅವಧಿಯಲ್ಲಿ ಕಾಯಿದೆ ಸ್ಥಗಿತವಾಗಿರುವುದರಿಂದ ಯಾರ ವಿರುದ್ಧವೂ ಈ ಕಾಯಿದೆಯಡಿ ಎಫ್‌ಐಆರ್‌ ದಾಖಲಿಸುವಂತಿಲ್ಲ. ಈ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಗಮನ ಹರಿಸಬೇಕು. ದೇಶದ್ರೋಹ ಕಾನೂನು ಪ್ರಯೋಗ ಆಗದಂತೆ ಎಚ್ಚರಿಕೆ ವಹಿಸಬೇಕು ಎಂದೂ ಕೋರ್ಟ್‌ ಹೇಳಿದೆ.

ದೇಶದ್ರೋಹ ಕಾಯಿದೆ ದುರ್ಬಳಕೆಯಾಗುತ್ತಿರುವ ಬಗ್ಗೆ ಸಲ್ಲಿಕೆಯಾಗಿರುವ  ಅರ್ಜಿಗಳನ್ನು ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎನ್‌. ವಿ.ರಮಣ, ನ್ಯಾ. ಸೂರ್ಯಕಾಂತ್‌, ನ್ಯಾ. ಹಿಮಾ ಕೊಹ್ಲಿ ಅವರನ್ನೊಳಗೊಂಡ ಪೀಠ ವಿಚಾರಣೆ ನಡೆಸಿತ್ತು. ಹಾಗೆಯೇ, ದೇಶದ್ರೋಹ ಕಾಯಿದೆ ಮರುಪರಿಶೀಲನೆ ಅವಧಿಯಲ್ಲಿ ಅದರ ಸ್ಥಿತಿಯೇನು? ಈಗಾಗಲೇ ಪ್ರಸಕ್ತ ಕಾಯಿದೆಯಡಿ ಬಂಧಿತರಾದವರು ಜೈಲಿನಲ್ಲಿಯೇ ಇರಬೇಕಾ ಎಂದು ಕೇಂದ್ರ ಸರ್ಕಾರವನ್ನು ಸುಪ್ರೀಂ ಕೋರ್ಟ್‌ ಪ್ರಶ್ನಿಸಿತ್ತು. ಅಷ್ಟೇ ಅಲ್ಲ, 24 ಗಂಟೆಯೊಳಗೆ ಉತ್ತರಿಸಲು ಸೂಚಿಸಿತ್ತು. ಅದಕ್ಕೆ ಪ್ರತಿಕ್ರಿಯೆ ನೀಡಿದ್ದ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ, ಕೇಂದ್ರ ಸರ್ಕಾರದಿಂದ ಮಾಹಿತಿ ಪಡೆದು ಕೋರ್ಟ್‌ಗೆ ತಿಳಿಸುತ್ತೇನೆ ಎಂದಿದ್ದರು.

ಇದನ್ನೂ ಓದಿ | ದೇಶಾದ್ಯಂತ Halal ಉತ್ಪನ್ನ ಬ್ಯಾನ್‌ ಮಾಡಿ: ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಕೆ

ಇಂದು ವಿಚಾರಣೆ ಮುಂದುವರಿಸಿದ ನ್ಯಾಯಾಲಯ, ಕಾಯಿದೆ ಮರುಪರಿಶೀಲನೆ ನಡೆಯುತ್ತಿರುವಾಗ ಇದರಡಿಯಲ್ಲಿ ಯಾವುದೇ ಪ್ರಕರಣ ದಾಖಲಿಸಿಕೊಳ್ಳುವುದು, ತನಿಖೆ ನಡೆಸುವುದು ಮತ್ತು ಬಲವಂತದಿಂದ ಕ್ರಮಗಳನ್ನು ಕೈಗೊಳ್ಳುವಂತಿಲ್ಲ. ಈ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಗಮನಹರಿಸಬೇಕು. ಯಾಕೆಂದರೆ ಪರಿಶೀಲನಾ ಹಂತದಲ್ಲಿರುವ ಕಾಯ್ದೆ-ಕಟ್ಟಳೆಗಳನ್ನು ಬಳಕೆ ಮಾಡುವಂತಿಲ್ಲ ಎಂದು ಹೇಳಿದೆ. ಈಗಾಗಲೇ ಯಾರೆಲ್ಲ ದೇಶದ್ರೋಹ ಕಾಯ್ದೆಯಡಿ ಬಂಧಿತರಾಗಿ ಜೈಲಿನಲ್ಲಿದ್ದಾರೆಯೋ ಅವರು ಜಾಮೀನಿಗಾಗಿ ಸಂಬಂಧಪಟ್ಟ ಕೋರ್ಟ್‌ಗಳಿಗೆ ಅರ್ಜಿ ಸಲ್ಲಿಸಬಹುದು ಎಂದೂ ಸುಪ್ರೀಂಕೋರ್ಟ್‌ ತಿಳಿಸಿದೆ.

ದೇಶದ್ರೋಹ ಕಾಯ್ದೆ ದುರ್ಬಳಕೆ ತಡೆಯಬೇಕು ಎಂದು ಮನವಿ ಮಾಡಿ ಅರ್ಜಿ ಸಲ್ಲಿಸಿದವರಲ್ಲಿ ಕರ್ನಾಟಕದ ಮೈಸೂರಿನವರೂ ಒಬ್ಬರಿದ್ದಾರೆ. ಇವರ ಹೆಸರು ಎಸ್‌.ಜಿ.ವೊಂಬತ್ಕೆರೆ ಎಂದಾಗಿದ್ದು ನಿವೃತ್ತ ಸೇನಾಧಿಕಾರಿ. ಸೇನೆಯಲ್ಲಿ ಮೇಜರ್‌ ಜನರಲ್‌ ಆಗಿ ಕರ್ತವ್ಯ ನಿರ್ವಹಿಸಿರುವ ಇವರಿಗೆ ಈಗ 79ವರ್ಷ. ಇವರೂ ಸೇರಿ ಇನ್ನೂ ಹಲವರು ಸುಪ್ರೀಂಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಸದ್ಯ ಸುಪ್ರೀಂಕೋರ್ಟ್‌ ಮಧ್ಯಂತರ ತೀರ್ಪನ್ನಷ್ಟೇ ನೀಡಿದೆ. ಇನ್ನು ಕಾಯ್ದೆ ಮರುಪರಿಶೀಲನೆ ಬಳಿಕ ಏನಾಗಲಿದೆ ಎಂಬುದನ್ನು ಕೇಂದ್ರ ಸರ್ಕಾರ ಕೋರ್ಟ್‌ಗೆ ಹೇಳಲಿದೆ.

ಇದನ್ನೂ ಓದಿ | ದೇಶದ್ರೋಹ ಕಾಯ್ದೆ ಮರುಪರಿಶೀಲನೆ: ಉತ್ತರಿಸಲು ಕೇಂದ್ರ ಸರ್ಕಾರಕ್ಕೆ 24 ಗಂಟೆ ಗಡುವು ನೀಡಿದ ಸುಪ್ರೀಂ ಕೋರ್ಟ್‌

Exit mobile version