Site icon Vistara News

Live In Relationships: ಲಿವ್‌ ಇನ್‌ ರಿಲೇಷನ್‌ಶಿಪ್‌ಗಳ ನೋಂದಣಿಗೆ ಕೋರಿಕೆ, ಸುಪ್ರೀಂ ಕೆಂಡಾಮಂಡಲ

Supreme Courrt dismisses plea for registration of live-in relationships with Centre

Supreme Courrt dismisses plea for registration of live-in relationships with Centre

ನವದೆಹಲಿ: ದೇಶದಲ್ಲಿ ಲಿವ್‌ ಇನ್‌ ರಿಲೇಷನ್‌ಶಿಪ್‌ಗಳ (Live In Relationships) ಬಗ್ಗೆ ದೇಶದಲ್ಲಿ ನಕಾರಾತ್ಮಕ ಮಾತುಗಳು ಕೇಳಿಬರುತ್ತಿವೆ. ಲಿವ್‌ ಇನ್‌ ರಿಲೇಷನ್‌ಶಿಪ್‌ನಲ್ಲಿದ್ದ ಹಲವು ಯುವತಿಯರು ಕೊಲೆಗೀಡಾದ ಪ್ರಕರಣಗಳಿಂದಾಗಿ ಇಂತಹ ಮಾತುಗಳು ಕೇಳಿಬರುತ್ತಿವೆ. ಇದೇ ದೃಷ್ಟಿಯಿಂದಾಗಿ, ಲಿವ್‌ ಇನ್‌ ರಿಲೇಷನ್‌ಶಿಪ್‌ನಲ್ಲಿರುವವರು ಕೇಂದ್ರ ಸರ್ಕಾರಕ್ಕೆ ನೋಂದಣಿ ಮಾಡಿಕೊಳ್ಳಬೇಕು ಎಂಬುದಾಗಿ ನಿರ್ದೇಶನ ನೀಡಬೇಕು ಎಂದು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ (PIL) ಸುಪ್ರೀಂ ಕೋರ್ಟ್‌ ಕೆಂಡಾಮಂಡಲವಾಗಿದೆ.

ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯವು, “ಲಿವ್‌ ಇನ್‌ ರಿಲೇಷನ್‌ಶಿಪ್‌ನಲ್ಲಿರುವವರು ಏಕೆ ಕೇಂದ್ರ ಸರ್ಕಾರಕ್ಕೆ ನೋಂದಣಿ ಮಾಡಿಸಿಕೊಳ್ಳಬೇಕು? ಕೇಂದ್ರಕ್ಕೂ, ಲಿವ್‌ ಇನ್‌ ರಿಲೇಷನ್‌ಶಿಪ್‌ಗಳಿಗೂ ಏನು ಸಂಬಂಧ? ಇದು ಎಂತಹ ದುಡುಕುಬುದ್ಧಿಯ ಯೋಚನೆ? ಕ್ಷುಲ್ಲಕ ಕಾರಣಗಳಿಗೆ ಅರ್ಜಿ ಸಲ್ಲಿಸುವವರಿಗೆ ಶುಲ್ಕ ವಿಧಿಸಲು ಇದು ಸಕಾಲ” ಎಂದು ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ನೇತೃತ್ವದ ನ್ಯಾಯಪೀಠವು ಅಸಮಾಧಾನ ವ್ಯಕ್ತಪಡಿಸಿತು.

ಪಿಐಎಲ್‌ ಸಲ್ಲಿಸಲು ಕಾರಣವೇನು?

ಇತ್ತೀಚೆಗೆ ದೇಶದಲ್ಲಿ ಲಿವ್‌ ಇನ್‌ ರಿಲೇಷನ್‌ಶಿಪ್‌ನಲ್ಲಿರುವ ಯುವತಿಯರ ಕೊಲೆ, ಅವರ ಮೇಲೆ ನಡೆಯುವ ಅತ್ಯಾಚಾರ, ಲೈಂಗಿಕ ದೌರ್ಜನ್ಯದ ಹಿನ್ನೆಲೆಯಲ್ಲಿ, ಅಂತಹ ಸಂಬಂಧದಲ್ಲಿರುವವರ ನೋಂದಣಿಯಾಗಬೇಕು. ಕೇಂದ್ರ ಸರ್ಕಾರವು ಲಿವ್‌ ಇನ್‌ ರಿಲೇಷನ್‌ಶಿಪ್‌ಗಳ ಕುರಿತು ನಿಯಮ ರೂಪಿಸುವಂತೆ ನ್ಯಾಯಾಲಯವು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂಬುದಾಗಿ ಕೋರಿ ವಕೀಲೆ ಮಮತಾ ರಾಣಿ ಎಂಬುವರು ಪಿಐಎಲ್‌ ಸಲ್ಲಿಸಿದ್ದಾರೆ.

ಸುಪ್ರೀಂ ಕೋರ್ಟ್‌.

ದೆಹಲಿಯಲ್ಲಿ ಅಫ್ತಾಬ್‌ ಪೂನಾವಾಲಾ ಎಂಬಾತನು ತನ್ನ ಜತೆ ವಾಸಿಸುತ್ತಿದ್ದ (ಲಿವ್‌ ಇನ್‌ ರಿಲೇಷನ್‌ಶಿಪ್‌) ಶ್ರದ್ಧಾ ವಾಳ್ಕರ್‌ ಎಂಬ ಯುವತಿಯನ್ನು ತುಂಡು ತುಂಡಾಗಿ ಕತ್ತರಿಸಿ, ದೆಹಲಿಯ ಹಲವೆಡೆ ಎಸೆದಿದ್ದ ಪ್ರಕರಣವು ದೇಶಾದ್ಯಂತ ಸುದ್ದಿಯಾಗಿತ್ತು. ಈ ಪ್ರಕರಣವನ್ನು ಕೂಡ ಮಮತಾ ರಾಣಿ ಅವರು ನ್ಯಾಯಾಲಯದ ಗಮನಕ್ಕೆ ತಂದಿದ್ದರು. ಇಂತಹ ಹಲವು ಪ್ರಕರಣಗಳು ನಡೆಯುತ್ತಲೇ ಇವೆ ಎಂದಿದ್ದರು.

ಅಲ್ಲದೆ, ಸಾಮಾಜಿಕ ಭದ್ರತೆಯ ದೃಷ್ಟಿಯಿಂದಲೂ ಮದುವೆಯಾಗದೆ ಒಟ್ಟಿಗೆ ಬಾಳುವವರ ರಕ್ಷಣೆ ಮುಖ್ಯ ಎಂದಿದ್ದರು. ಮಮತಾ ರಾಣಿ ಅವರ ಕಳಕಳಿಯ ಕುರಿತು ಪ್ರತಿಕ್ರಿಯಿಸಿದ ಕೋರ್ಟ್‌, “ಹಾಗೊಂದು ವೇಳೆ ಅರ್ಜಿದಾರರಿಗೆ ಲಿವ್‌ ಇನ್‌ ರಿಲೇಷನ್‌ಶಿಪ್‌ನಲ್ಲಿರುವವರಿಗೆ ಅಷ್ಟೊಂದು ಸುರಕ್ಷತೆ ನೀಡಬೇಕು ಎಂದಿದ್ದರೆ, ಅಂತಹ ಸಂಬಂಧವನ್ನೇ ಹೊಂದದಂತೆ ನೋಡಿಕೊಳ್ಳಲಿ” ಎಂದು ಅಸಮಾಧಾನ ವ್ಯಕ್ತಪಡಿಸಿತು.

ಇದನ್ನೂ ಓದಿ: ಲಿವ್​ ಇನ್​ ಸಂಗಾತಿಯಿಂದ ದಾರುಣ ಅಂತ್ಯಕಂಡ 28ರ ಮಹಿಳೆ; ಪತಿಯನ್ನು ಬಿಟ್ಟು ಹೋಗಿದ್ದವಳು ಬೆಂಕಿಯಲ್ಲಿ ಬೆಂದು ಸಾವು

Exit mobile version