ನವದೆಹಲಿ: ೨೦೦೨ರ ಗೋಧ್ರಾ ಹತ್ಯಾಕಾಂಡದ ವೇಳೆ ಬಿಲ್ಕಿಸ್ ಬಾನೊ (Bilkis Bano Case) ಮೇಲೆ ಸಾಮೂಹಿಕವಾಗಿ ಅತ್ಯಾಚಾರಗೈದ ಅಪರಾಧಿಗಳನ್ನು ಗುಜರಾತ್ ಸರಕಾರ ಬಿಡುಗಡೆ ಮಾಡಿರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಯ ವಿಚಾರಣೆಗೆ ಸುಪ್ರೀಂ ಕೋರ್ಟ್ ಸಮ್ಮತಿ ಸೂಚಿಸಿದೆ. ಶೀಘ್ರದಲ್ಲೇ ವಿಚಾರಣೆ ಕೈಗೆತ್ತಿಕೊಳ್ಳಲಾಗುವುದು ಎಂದು ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ತಿಳಿಸಿದ್ದಾರೆ.
ಬಿಲ್ಕಿಸ್ ಬಾನೊ ಮೇಲೆ ಸಾಮೂಹಿಕವಾಗಿ ಅತ್ಯಾಚಾರಗೈದ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾದ ೧೧ ಅಪರಾಧಿಗಳನ್ನು ಗುಜರಾತ್ ಸರಕಾರ ಆಗಸ್ಟ್ ೧೫ರಂದು ಬಿಡುಗಡೆ ಮಾಡಿದೆ. ಬಿಜೆಪಿ ಸರಕಾರದ ತೀರ್ಮಾನದ ವಿರುದ್ಧ ದೇಶಾದ್ಯಂತ ಆಕ್ರೋಶ ವ್ಯಕ್ತವಾಗಿದೆ. “ನಾರಿ ಶಕ್ತಿ” ಬಗ್ಗೆ ಮೋದಿ ಮಾತನಾಡುತ್ತಾರೆ, ಆದರೆ, ಬಿಜೆಪಿ ಸರಕಾರ ಅತ್ಯಾಚಾರಿಗಳನ್ನು ಬಿಡುಗಡೆ ಮಾಡಿದೆ ಎಂದು ಪ್ರತಿಪಕ್ಷಗಳು ಪ್ರಧಾನಿ ವಿರುದ್ಧವೇ ಹರಿಹಾಯ್ದಿವೆ.
ಇದರ ಬೆನ್ನಲ್ಲೇ ಗುಜರಾತ್ ಸರಕಾರದ ಕ್ರಮ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ. ಅರ್ಜಿಯನ್ನು ಶೀಘ್ರದಲ್ಲೇ ಕೋರ್ಟ್ ವಿಚಾರಣೆ ನಡೆಸಲಿದೆ. ಬಿಲ್ಕಿಸ್ ಬಾನೊ ಮೇಲೆ ಅತ್ಯಾಚಾರ ನಡೆದಾಗ ಅವರು ಗರ್ಭಿಣಿಯಾಗಿದ್ದರು. ಹಾಗೆಯೇ, ಅವರ ಮಗಳನ್ನೂ ದುಷ್ಕರ್ಮಿಗಳು ಹತ್ಯೆಗೈದಿದ್ದರು.
ಇದನ್ನೂ ಓದಿ | Bilkis Bano Case | ಕನಿಷ್ಠಪಕ್ಷ ಗೋಡ್ಸೆ ಗಲ್ಲಿಗೇರಿದ್ದಾನೆ, ಬಿಜೆಪಿ ಶಾಸಕನ ʼಸಂಸ್ಕಾರʼ ಹೇಳಿಕೆಗೆ ಓವೈಸಿ ತಿರುಗೇಟು