Site icon Vistara News

BBC Documentary on Modi: ಬಿಬಿಸಿ ಸಾಕ್ಷ್ಯ ಚಿತ್ರ ನಿಷೇಧ ಪ್ರಶ್ನಿಸಿ ಪಿಐಎಲ್, ಫೆ.6ಕ್ಕೆ ವಿಚಾರಣೆ ಎಂದ ಸುಪ್ರೀಂ ಕೋರ್ಟ್

Supreme Court agrees to hear plea challenging Centre's decision to ban BBC documentary on modi

ನವದೆಹಲಿ: 2002ರ ಗುಜರಾತ್ ದಂಗೆಯ ಕುರಿತಾದ ಬಿಬಿಸಿ ಸಾಕ್ಷ್ಯ ಚಿತ್ರವನ್ನು(BBC Documentary on Modi) ಕೇಂದ್ರ ಸರ್ಕಾರ ನಿಷೇಧಿಸಿದೆ. ಈ ನಿಷೇಧವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್) ದಾಖಲಾಗಿದ್ದು, ಫೆಬ್ರವರಿ 6ರಂದು ವಿಚಾರಣೆ ನಡೆಸುವುದಾಗಿ ಸುಪ್ರೀಂ ಕೋರ್ಟ್ ಹೇಳಿದೆ. ಗೋಧ್ರೋತ್ತರ ಹಿಂಸಾಚಾರ ಕುರಿತಾದ ಬಿಬಿಸಿಯ ಸಾಕ್ಷ್ಯ ಚಿತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಋಣಾತ್ಮಕವಾಗಿ ಚಿತ್ರಿಕರಿಸಲಾಗಿದೆ ಎಂಬ ಕಾರಣಕ್ಕೆ ಕೇಂದ್ರ ಸರ್ಕಾರವು ಈ ಸಾಕ್ಷ್ಯ ಚಿತ್ರದ ಪ್ರದರ್ಶನದ ಮೇಲೆ ನಿಷೇಧ ಹೇರಿದೆ. ಇಷ್ಟಾಗಿಯೂ, ದೇಶದ ಹಲವು ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು ಈ ಸಾಕ್ಷ್ಯ ಚಿತ್ರವನ್ನು ಪ್ರದರ್ಶಿಸುವ ಪ್ರಯತ್ನ ಮಾಡಿದ್ದಾರೆ.

ವಕೀಲ ಎಂಎಲ್ ಶರ್ಮಾ ಅವರು ‘India: The Modi Question’ ಸಾಕ್ಷ್ಯ ಚಿತ್ರ ನಿಷೇಧ ಪ್ರಶ್ನಿಸಿ ಪಿಐಎಲ್ ದಾಖಲಿಸಿದ್ದಾರೆ. ನಿಷೇಧ ಕ್ರಮವು ದುರುದ್ದೇಶಪೂರಿತ, ಅಸಂವಿಧಾನಿಕ ಕ್ರಮವಾಗಿದೆ ಎಂದು ತಮ್ಮ ಅರ್ಜಿಯಲ್ಲಿ ತಿಳಿಸಿದ್ದಾರೆ. ಮತ್ತೊಂದೆಡೆ, ಬಿಬಿಸಿ ಡಾಕ್ಯುಮೆಂಟರಿ ಲಿಂಕ್ ಷೇರ್ ಮಾಡಿದ್ದ ಹಿರಿಯ ಪತ್ರಕರ್ತ ಎನ್ ರಾಮ್ ಮತ್ತು ಅಡ್ವೋಕೇಟ್ ಪ್ರಶಾಂತ್ ಭೂಷಣ್ ಅವರ ಟ್ವೀಟ್‌ಗಳನ್ನು ಅಳಿಸಿ ಹಾಕಲಾಗಿದ್ದು, ಈ ಕುರಿತು ದಾಖಲಾಗಿರುವ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಲಿದೆ.

ಇದನ್ನೂ ಓದಿ: BBC Documentary: ಬಿಬಿಸಿ ಹಿಂದು ವಿರೋಧಿ, ಮೋದಿ ವಿರೋಧಿ ಎಂದು ಆಪಾದಿಸಿ ಬ್ರಿಟನ್‌ನಾದ್ಯಂತ ಭಾರತೀಯರ ಪ್ರತಿಭಟನೆ

ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್, ಜಸ್ಟೀಸ್ ಪಿ ಎಸ್ ನರಸಿಂಹ ಹಾಗೂ ಜೆ ಬಿ ಪರ್ದಿವಾಲಾ ಅವರಿದ್ದ ಪೀಠವು ಮುಂದೆ ಅರ್ಜಿ ವಿಚಾರಣೆಗೆ ಬಂದಿತ್ತು. ತ್ವರಿತವಾಗಿ ಈ ಅರ್ಜಿಯನ್ನು ವಿಚಾರಮೆಗೆ ಕೈಗೆತ್ತಿಕೊಳ್ಳಬೇಕೆಂದು ಮನವಿ ಮಾಡಿಕೊಳ್ಳಲಾಯಿತು. ಈ ಬಗ್ಗೆ ಪ್ರತಿಕ್ರಿಯಿಸಿದ ಪೀಠವು, ಸೋಮವಾರ(ಫೆ.6)ರಂದು ವಿಚಾರಣೆ ನಡೆಸಲಾಗುವುದು ಎಂದು ತಿಳಿಸಿತು.

Exit mobile version