ನವದೆಹಲಿ: ಅಕ್ರಮ ಗಣಿ ಕೇಸ್ ಪ್ರಕರಣದಲ್ಲಿ ಜಾರ್ಖಂಡ್ ಸಿಎಂ ಹೇಮಂತ್ ಸೋರೆನ್ (Hemant Soren) ಅವರಿಗೆ ಸುಪ್ರೀಂ ಕೋರ್ಟ್ ದೊಡ್ಡ ರಿಲೀಫ್ ನೀಡಿದೆ. ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ನೀಡಿದ್ದ ತೀರ್ಪು ಪ್ರಶ್ನಿಸಿ ಹೇಮಂತ್ ಸೋರೆನ್ ಸಲ್ಲಿಸಿದ್ದ ಅರ್ಜಿಯನ್ನು ಸ್ವೀಕರಿಸಿದೆ. ಗಣಿಗಾರಿಕೆಗೆ ಅನುಮತಿ ನೀಡುವ ಸಂಬಂಧ ಅಧಿಕಾರ ದುರುಪಯೋಗ ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಪಿಐಎಲ್ ದಾಖಲಾಗಿತ್ತು. ಈ ಪ್ರಕರಣದಲ್ಲಿ ಹೈಕೋರ್ಟ್, ಸೋರೆನ್ ವಿರುದ್ಧ ತನಿಖೆಗೆ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಸೋರೆನ್ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು.
2021ರಲ್ಲಿ ಹೇಮಂತ್ ಸೋರೆನ್ ಅವರು ತಮ್ಮ ಗಣಿಗಾರಿಕೆಗೆ ತಾವೇ ಅನುಮತಿಯನ್ನು ನೀಡಿದ್ದರು. ಈ ಪ್ರಕ್ರಿಯೆಯಲ್ಲಿ ಅಧಿಕಾರ ದುರುಪಯೋಗವಾಗಿದೆ ಎಂದು ಆರೋಪಿಸಿ ಬಿಜೆಪಿ ಚುನಾವಣಾ ಆಯೋಗಕ್ಕೆ ದೂರು ನೀಡಿತ್ತು. ಬಳಿಕ, ಹೇಮಂತ್ ಸೋರೆನ್ ವಿರುದ್ಧ ಕ್ರಮಕ್ಕೆ ರಾಜ್ಯಪಾಲ ರಮೇಶ್ ಅವರಿಗೆ ಚುನಾವಣಾ ಆಯೋಗವು ಶಿಫಾರಸು ಮಾಡಿತ್ತು.
ಈ ಮಧ್ಯೆ, ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು ಕೂಡ ಹೇಮಂತ್ ಸೋರೆನ್ ಅವರಿಗೆ ಸಮನ್ಸ್ ಜಾರಿ ಮಾಡಿತ್ತು. ಆದರೆ, ಕೇಂದ್ರ ತನಿಖಾ ಸಂಸ್ಥೆಯ ವಿರುದ್ಧ ತೊಡೆ ತಟ್ಟಿದ್ದ ಸೋರೆನ್, ನಾನು ತಪ್ಪೇ ಮಾಡಿದ್ರೆ ವಿಚಾರಣೆ ಯಾಕೆ, ಸಾಧ್ಯವಾದ್ರೆ ಬಂಧಿಸಿ ಎಂದು ಸವಾಲು ಎಸೆದಿದ್ದರು. ಅಲ್ಲದೇ, ಇ.ಡಿ. ವಿಚಾರಣೆಗೂ ಹಾಜರಾಗಿರಲಿಲ್ಲ.
ಇದನ್ನೂ ಓದಿ | Hemant Soren | ವಿಚಾರಣೆ ಏಕೆ, ಸಾಧ್ಯವಾದ್ರೆ ಬಂಧಿಸಿ ನೋಡೋಣ! EDಗೆ ಜಾರ್ಖಂಡ್ ಸಿಎಂ ಸೋರೆನ್ ಸವಾಲು