Site icon Vistara News

VVPAT Verification: ಇವಿಎಂ-ವಿವಿಪ್ಯಾಟ್‌ ತಾಳೆಯ ಪ್ರಕ್ರಿಯೆ ತಿಳಿಸಿ; ಆಯೋಗಕ್ಕೆ ಸುಪ್ರೀಂ ಸೂಚನೆ

VVPAT Verification

Candidates can request checking of EVM microcontroller program After Results; Says Sureme Court

ನವದೆಹಲಿ: ವಿದ್ಯುನ್ಮಾನ ಮತಯಂತ್ರಗಳಲ್ಲಿ (EVM) ದಾಖಲಾದ ಮತಗಳನ್ನು ತಾಳೆ ಮಾಡುವ ದಿಸೆಯಲ್ಲಿ ಇವಿಎಂ ಬಳಿ ಇರಿಸುವ ವಿವಿಪ್ಯಾಟ್‌ಗಳ ತಾಳೆಯ ಪ್ರಕ್ರಿಯೆ ಕುರಿತು ವಿವರಿಸಿ ಎಂಬುದಾಗಿ ಚುನಾವಣೆ ಆಯೋಗಕ್ಕೆ (Election Commission) ಸುಪ್ರೀಂ ಕೋರ್ಟ್‌ (Supreme Court) ಸೂಚಿಸಿದೆ. ಇವಿಎಂನಲ್ಲಿ ದಾಖಲಾದ ಎಲ್ಲ ಮತಗಳನ್ನು ವಿವಿಪ್ಯಾಟ್‌ ಜತೆ ತಾಳೆ ಹಾಕಿ ನೋಡಬೇಕು ಹಾಗೂ ವಿವಿಪ್ಯಾಟ್‌ ಸ್ಲಿಪ್‌ಗಳನ್ನು (VVPAT Verification) ಬ್ಯಾಲೆಟ್‌ ಬಾಕ್ಸ್‌ನಲ್ಲಿ ಠೇವಣಿ ಮಾಡಲು ಆದೇಶಿಸಬೇಕು ಎಂದು ಕೋರಿ ಸಲ್ಲಿಸಿದ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಾಲಯವು, ಪ್ರಕ್ರಿಯೆ ವಿವರಿಸುವಂತೆ ಚುನಾವಣೆ ಆಯೋಗಕ್ಕೆ ಸೂಚಿಸಿತು.

“ಇದು ಚುನಾವಣೆ ಪ್ರಕ್ರಿಯೆ. ಇದು ತುಂಬ ಪಾವಿತ್ರ್ಯತೆಯಿಂದ ಕೂಡಿರಬೇಕು. ನಿರೀಕ್ಷೆಯಂತೆ ಎಲ್ಲವೂ ನಡೆಯುತ್ತಿಲ್ಲ ಎಂಬ ಭಾವನೆ ಯಾರಿಗೂ ಬರುವುದು ಬೇಡ. ಇವಿಎಂ ಹಾಗೂ ವಿವಿಪ್ಯಾಟ್‌ಗಳ ಕಾರ್ಯನಿರ್ವಹಣೆ, ತಾಳೆ, ಪರಿಶೀಲನೆಯ ಪ್ರಕ್ರಿಯೆಯ ಕುರಿತು ವಿವರಣೆ ನೀಡಬೇಕು” ಎಂದು ನ್ಯಾಯಮೂರ್ತಿಗಳಾದ ಸಂಜೀವ್‌ ಖನ್ನಾ ಹಾಗೂ ದೀಪಾಂಕರ್‌ ದತ್ತ ಅವರಿದ್ದ ನ್ಯಾಯಪೀಠವು ಸೂಚಿಸಿತು. ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನಕ್ಕೆ ಒಂದು ದಿನದ ಮೊದಲೇ ಸುಪ್ರೀಂ ಕೋರ್ಟ್‌ ಮಹತ್ವದ ಸೂಚನೆ ನೀಡಿದಂತಾಗಿದೆ.

ಪ್ರಶಾಂತ್‌ ಭೂಷಣ್‌ ಆರೋಪದ ಕುರಿತು ತನಿಖೆಗೆ ಆದೇಶ

ಕೇರಳದ ಕಾಸರಗೋಡಿನಲ್ಲಿ ಮತದಾನ ಪ್ರಕ್ರಿಯೆಯ ಅಣಕು ಪ್ರದರ್ಶನದ ವೇಳೆ ಇವಿಎಂನಲ್ಲಿ ಬಿಜೆಪಿ ಅಭ್ಯರ್ಥಿ ಪರ ಒಂದು ಮತ ಹೆಚ್ಚು ದಾಖಲಾಗಿದೆ ಎಂದು ಹಿರಿಯ ವಕೀಲ ಪ್ರಶಾಂತ್‌ ಭೂಷಣ್‌ ಅವರ ಆರೋಪದ ಕುರಿತು ತನಿಖೆ ನಡೆಸಬೇಕು ಎಂದು ಕೂಡ ಚುನಾವಣೆ ಆಯೋಗಕ್ಕೆ ಸುಪ್ರೀಂ ಕೋರ್ಟ್‌ ಸೂಚಿಸಿದೆ. ಇತ್ತೀಚೆಗೆ ಕಾಸರಗೋಡಿನಲ್ಲಿ ಚುನಾವಣೆ ಪ್ರಕ್ರಿಯೆ, ಮತಎಣಿಕೆ ಕುರಿತು ಅಣಕು ಪ್ರದರ್ಶನ ನಡೆದಿತ್ತು. ಇದೇ ವೇಳೆ, ಇವಿಎಂನಲ್ಲಿ ಬಿಜೆಪಿ ಅಭ್ಯರ್ಥಿ ಪರ ಒಂದು ಮತ ಹೆಚ್ಚು ದಾಖಲಾಗಿತ್ತು. ವಿವಿಪ್ಯಾಟ್‌ಗೂ ಇದಕ್ಕೂ ತಾಳೆಯಾಗುತ್ತಿಲ್ಲ ಎಂಬುದಾಗಿ ಪ್ರಶಾಂತ್‌ ಭೂಷಣ್‌ ಅವರು ಕೋರ್ಟ್‌ ಗಮನಕ್ಕೆ ತಂದರು. ಆಗ ನ್ಯಾಯಾಲಯವು ಈ ಕುರಿತು ತನಿಖೆ ನಡೆಸುವಂತೆ ಸೂಚಿಸಿತು.

ಇವಿಎಂ-ವಿವಿಪ್ಯಾಟ್‌ಗಳ ತಾಳೆ ಕೋರಿ ಅರ್ಜಿ ಸಲ್ಲಿಸಿದವರ ಪರ ವಕೀಲ ನಿಜಾಂ ಪಾಶಾ ವಾದ ಮಂಡಿಸಿದರು. “ಇವಿಎಂ ಹಾಗೂ ವಿವಿಪ್ಯಾಟ್‌ಗಳ ಶೇ.100ರಷ್ಟು ತಾಳೆ ಮಾಡಬೇಕು. ಅಷ್ಟೇ ಅಲ್ಲ, ಮತದಾನ ಮಾಡಿದ ಬಳಿಕ ಮತದಾರನು ವಿವಿಪ್ಯಾಟ್‌ ಸ್ಲಿಪ್‌ಅನ್ನು ಬ್ಯಾಲೆಟ್‌ ಬಾಕ್ಸ್‌ನಲ್ಲಿ ಠೇವಣಿ ಮಾಡುವಂತೆ ಆದೇಶಿಸಬೇಕು” ಎಂಬುದಾಗಿ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠವು, “ಈ ಪ್ರಕ್ರಿಯೆ ಅನುಸರಿಸಿದರೆ ಮತದಾರನ ಗೌಪ್ಯತೆಗೆ ಧಕ್ಕೆ ಬರುವುದಿಲ್ಲವೇ” ಎಂದು ಪ್ರಶ್ನಿಸಿತು. ಆಗ ಪಾಶಾ, “ಮತದಾರನ ಖಾಸಗಿತನವು ಮತದಾರನ ಹಕ್ಕುಗಳನ್ನು ಕಸಿಯುವಂತಿರಬಾರದು” ಎಂದರು. ಬಳಿಕ ನ್ಯಾಯಾಲಯವು ಪ್ರಕ್ರಿಯೆ ವಿವರಿಸುವಂತೆ ಆಯೋಗಕ್ಕೆ ಸೂಚಿಸಿತು.

ಇವಿಎಂ-ವಿವಿಪ್ಯಾಟ್‌ ತಾಳೆ ಹೇಗೆ?

ಪಾರದರ್ಶಕವಾಗಿ ಚುನಾವಣೆ ನಡೆಸಲು ಚುನಾವಣಾ ಆಯೋಗವು ಮತಯಂತ್ರಗಳ ಜತೆಗೆ ವಿವಿಪ್ಯಾಟ್‌ಗಳನ್ನೂ (ವೋಟರ್‌ ವೇರಿಫೈಡ್‌ ಪೇಪರ್‌ ಆಡಿಟ್‌ ಟ್ರಯಲ್)‌ ಇರಿಸುತ್ತದೆ. ಮತಎಣಿಕೆ ಮಾಡುವಾಗ ಇವಿಎಂನಲ್ಲಿ ದಾಖಲಾದ ಹಾಗೂ ವಿವಿಪ್ಯಾಟ್‌ನಲ್ಲಿ ದಾಖಲಾದ ಮತಗಳನ್ನು ತಾಳೆ ಮಾಡುತ್ತದೆ. ಈಗ ಪ್ರತಿ ಕ್ಷೇತ್ರದಲ್ಲೂ ಐದು ಇವಿಎಂಗಳನ್ನು ಆಯ್ಕೆ ಮಾಡಿಕೊಂಡು, ನಂತರ ಇವಿಎಂಗಳ ಜತೆ ತಾಳೆ ಮಾಡುವ ವಿಧಾನ ಇದೆ. ಆದರೆ, ಎಲ್ಲ ಇವಿಎಂಗಳ ಜತೆ ತಾಳೆ ಹಾಕಬೇಕು ಎಂಬುದು ಅರ್ಜಿದಾರರ ವಾದವಾಗಿದೆ.

ಇದನ್ನೂ ಓದಿ: Priyanka Vadra: ಇವಿಎಂ ತಿರುಚದಿದ್ದರೆ ಬಿಜೆಪಿಗೆ 180 ಸೀಟೂ ಬರಲ್ಲ ಎಂದ ಪ್ರಿಯಾಂಕಾ ವಾದ್ರಾ!

Exit mobile version