Site icon Vistara News

Kota Suicides: ಪೋಷಕರ ಒತ್ತಡವೇ ವಿದ್ಯಾರ್ಥಿಗಳ ಆತ್ಮಹತ್ಯೆಗೆ ಕಾರಣ; ಸುಪ್ರೀಂ ಕೋರ್ಟ್ ಚಾಟಿ

8 votes cast in Chandigarh mayoral election were Valid Says Supreme Court

ನವದೆಹಲಿ: ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (NEET), ಜಂಟಿ ಪ್ರವೇಶ ಪರೀಕ್ಷೆ (JEE) ಸೇರಿ ಹಲವು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದಲು ತರಬೇತಿ ನೀಡುವ ರಾಜಸ್ಥಾನದ ಕೋಟಾ ನಗರದಲ್ಲಿ ವಿದ್ಯಾರ್ಥಿಗಳ ಆತ್ಮಹತ್ಯೆ ಕುರಿತು ಸುಪ್ರೀಂ ಕೋರ್ಟ್‌ (Supreme Court) ಮಹತ್ವದ ಪ್ರಸ್ತಾಪ ಮಾಡಿದೆ. “ಪೋಷಕರ ಅತಿಯಾದ ನಿರೀಕ್ಷೆ ಹಾಗೂ ಒತ್ತಡದಿಂದ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ” ಎಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದರ (PIL) ವಿಚಾರಣೆ ವೇಳೆ ಪೋಷಕರಿಗೆ ಚಾಟಿ ಬೀಸಿದೆ.

ವಿದ್ಯಾರ್ಥಿಗಳ ಆತ್ಮಹತ್ಯೆ ಹೆಚ್ಚಾಗಿರುವುದರಿಂದ ಖಾಸಗಿ ಕೋಚಿಂಗ್‌ ಕೇಂದ್ರಗಳ ಮೇಲೆ ನಿಯಂತ್ರಣ ಹೇರಬೇಕು. ಅವುಗಳಿಗೆ ನಿಯಮಗಳನ್ನು ಜಾರಿಗೆ ತರಬೇಕು ಎಂದು ಮುಂಬೈ ಮೂಲದ ವೈದ್ಯ ಅನಿರುದ್ಧ ನಾರಾಯಣ ಮಾಲ್ಪನಿ ಎಂಬುವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಆದರೆ, ನ್ಯಾಯಮೂರ್ತಿ ಸಂಜೀವ್‌ ಖನ್ನಾ ನೇತೃತ್ವದ ನ್ಯಾಯಪೀಠವು ಕೋಚಿಂಗ್‌ ಸೆಂಟರ್‌ಗಳ ಮೇಲೆ ನಿರ್ಬಂಧ ಹೇರಲು ನಿರಾಕರಿಸಿತು. “ವಿದ್ಯಾರ್ಥಿಗಳ ಸಾವಿಗೆ ಪೋಷಕರ ಒತ್ತಡ, ಹೆಚ್ಚಿನ ನಿರೀಕ್ಷೆಯೇ ಕಾರಣವಾಗಿದೆಯೇ ಹೊರತು, ಕೋಚಿಂಗ್‌ ಸೆಂಟರ್‌ಗಳು ಕಾರಣವಲ್ಲ” ಎಂದು ಸ್ಪಷ್ಟಪಡಿಸಿತು.‌

Kota Coaching Centre Room

“ನಮ್ಮಲ್ಲಿ ತುಂಬ ಜನ ಕೋಚಿಂಗ್‌ ಸೆಂಟರ್‌ಗಳ ಅಸ್ತಿತ್ವವನ್ನು ವಿರೋಧಿಸುತ್ತೇವೆ. ಆದರೆ, ಈಗಿನ ಕಾಲಮಾನದಲ್ಲಿ ಪರೀಕ್ಷೆಗಳು ತುಂಬ ಸ್ಪರ್ಧಾತ್ಮಕವಾಗಿವೆ. ಇದರಿಂದಾಗಿ ಪೋಷಕರ ನಿರೀಕ್ಷೆಗಳು ಕೂಡ ಹೆಚ್ಚಾಗಿವೆ. ವಿದ್ಯಾರ್ಥಿಗಳು ಒಂದು ಅಥವಾ ಅರ್ಧ ಅಂಕದಿಂದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಹಿನ್ನಡೆ ಅನುಭವಿಸುತ್ತಿದ್ದಾರೆ” ಎಂದು ನ್ಯಾಯಪೀಠವು ಬೇಸರ ವ್ಯಕ್ತಪಡಿಸಿತು. ಹಾಗೆಯೇ, ಕೋಚಿಂಗ್‌ ಸೆಂಟರ್‌ಗಳ ಮೇಲೆ ನ್ಯಾಯಾಲಯ ನಿರ್ಬಂಧ ವಿಧಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿತು.

20ಕ್ಕೂ ಅಧಿಕ ವಿದ್ಯಾರ್ಥಿಗಳ ಆತ್ಮಹತ್ಯೆ

ಕೋಟಾ ನಗರದಲ್ಲಿ ಪ್ರಸಕ್ತ ವರ್ಷದಲ್ಲಿಯೇ 2೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನೀಟ್‌, ಜೆಇಇ ಸೇರಿ ಹಲವು ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದದಿರುವುದು, ತೇರ್ಗಡೆ ಹೊಂದದಿರುವ ಭಯ ಸೇರಿ ಹಲವು ಭೀತಿಯಿಂದ ಮಾನಸಿಕ ಖಿನ್ನತೆಗೊಳಗಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದು ತಿಳಿದುಬಂದಿದೆ. ಈಗಾಗಲೇ ಹಾಸ್ಟೆಲ್‌, ಪಿಜಿಗಳ ಸುತ್ತ ಬಲೆ ಅಳವಡಿಕೆ, ಫ್ಯಾನ್‌ಗಳಿಗೆ ಸ್ಪ್ರಿಂಗ್‌ ಅಳವಡಿಕೆ, ಕೌನ್ಸೆಲಿಂಗ್‌ ಸೇರಿ ಹಲವು ದಿಸೆಯಲ್ಲಿ ಆತ್ಮಹತ್ಯೆ ತಡೆಗೆ ಕ್ರಮ ತೆಗೆದುಕೊಳ್ಳಲಾಗಿದೆ.

ಇದನ್ನೂ ಓದಿ: Kota Coaching: ಆತ್ಮಹತ್ಯೆ ಆತಂಕ; ಕೋಟಾದಲ್ಲಿ 2 ತಿಂಗಳು ಪರೀಕ್ಷೆ ನಿಷೇಧಿಸಿದ ರಾಜಸ್ಥಾನ ಸರ್ಕಾರ

ಆತ್ಮಹತ್ಯೆ ತಡೆಗೆ ದರ್ವಾಜೆ ಪೆ ದಸ್ತಕ್‌ ಅಭಿಯಾನ

ಕೋಟಾದಲ್ಲಿ ವಿದ್ಯಾರ್ಥಿಗಳ ಆತ್ಮಹತ್ಯೆ ತಡೆಯಲು ಹಲವು ರೀತಿಯ ಕ್ರಮ ತೆಗೆದುಕೊಳ್ಳಲಾಗಿದ್ದು, ಇವುಗಳಲ್ಲಿ ದರ್ವಾಜೆ ಪೆ ದಸ್ತಕ್‌ ಯೋಜನೆ ಕೂಡ ಒಂದಾಗಿದೆ. ದರ್ವಾಜೆ ಪೆ ದಸ್ತಕ್‌ ಎಂದರೆ ಬಾಗಿಲು ಬಡಿಯುವುದು. ಕೋಟಾ ನಗರದ ಕೋಚಿಂಗ್‌ ಸೆಂಟರ್‌ಗಳಲ್ಲಿರುವ ಹಾಸ್ಟೆಲ್‌ಗಳು, ಪೇಯಿಂಗ್‌ ಗೆಸ್ಟ್‌ಗಳಲ್ಲಿರುವ (ಪಿಜಿ) ವಿದ್ಯಾರ್ಥಿಗಳು ಮಾನಸಿಕ ಖಿನ್ನತೆಗೆ ಒಳಗಾಗಿದ್ದಾರೆಯೇ ಎಂಬುದನ್ನು ಪತ್ತೆಹಚ್ಚಲು ಈ ಅಭಿಯಾನ ಜಾರಿಗೆ ತರಲಾಗಿದೆ. ಅಂದರೆ, ಹಾಸ್ಟೆಲ್‌ ವಾರ್ಡನ್‌ಗಳು, ಮೆಸ್‌ಗಳ ಮಾಲೀಕರು, ಊಟ, ತಿಂಡಿ ಪೂರೈಕೆದಾರರು ವಿದ್ಯಾರ್ಥಿಗಳ ಕೋಣೆಗಳಿಗೆ ತೆರಳಿದಾಗ ಅವರ ಮೇಲೆ ನಿಗಾ ಇಡುವುದು, ಸೂಕ್ಷ್ಮವಾಗಿ ಗಮನಿಸುವುದು ಯೋಜನೆಯ ಪ್ರಮುಖ ಉದ್ದೇಶವಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version