ನವದೆಹಲಿ: ದೇಶದ ಉಚ್ಚ, ಸರ್ವೋಚ್ಚ ನ್ಯಾಯಾಲಯಗಳಿಗೆ ನ್ಯಾಯಮೂರ್ತಿಗಳನ್ನು ನೇಮಿಸುವ ಕೊಲಿಜಿಯಂ ಪದ್ಧತಿ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಹಾಗೂ ನ್ಯಾಯಾಂಗದ ನಡುವಿನ ಬಿಕ್ಕಟ್ಟು ದಿನೇದಿನೆ ಹೆಚ್ಚಾಗುತ್ತಿದೆ. ಕೊಲಿಜಿಯಂ ಶಿಫಾರಸಿನಂತೆ ಜಡ್ಜ್‌ಗಳ ನೇಮಕಕ್ಕೆ ಸುಪ್ರೀಂ ಕೋರ್ಟ್ 10 ದಿನ ಗಡುವು ನೀಡಿದ ಬೆನ್ನಲ್ಲೇ, “ನಮಗೆ (ಸರ್ಕಾರಕ್ಕೆ) ಯಾರೂ ಎಚ್ಚರಿಕೆ ನೀಡುವಹಾಗಿಲ್ಲ” ಎಂದು ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು (Kiren Rijiju) ಹೇಳಿದ್ದಾರೆ. ಆ ಮೂಲಕ ಬಿಕ್ಕಟ್ಟು ಮುಂದುವರಿಸಿದ್ದಾರೆ.
ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಎಚ್ಚರಿಕೆ ನೀಡಿದೆ ಎಂಬ ಕುರಿತ ವರದಿಗಳಿಗೆ ಪ್ರತಿಕ್ರಿಯಿಸಿದ ಅವರು, “ಯಾರು ಯಾರಿಗೂ ಎಚ್ಚರಿಕೆ ನೀಡುವ ಹಾಗಿಲ್ಲ. ಸುಪ್ರೀಂ ಕೋರ್ಟ್ ಕೂಡ ಸರ್ಕಾರಕ್ಕೆ ಎಚ್ಚರಿಕೆ ನೀಡುವ ಹಾಗಿಲ್ಲ. ನಮಗೆ ಜನರು ಮಾತ್ರ ಮಾಲೀಕರು. ಅವರ ಆಣತಿ ಹಾಗೂ ಸಂವಿಧಾನದ ಆಶಯಗಳಂತೆ ಸರ್ಕಾರ ನಡೆಯುತ್ತಿದೆ” ಎಂದು ಹೇಳಿದರು.
ಇದನ್ನೂ ಓದಿ: Kiren Rijiju: ಗುಪ್ತಚರ ಇಲಾಖೆಗಳ ಸೂಕ್ಷ್ಮ ಮಾಹಿತಿ ಸುಪ್ರೀಂ ಕೋರ್ಟ್‌ನಿಂದ ಬಹಿರಂಗ, ಸಚಿವ ರಿಜಿಜು ಅಸಮಾಧಾನ
ಕೊಲಿಜಿಯಂ ಮಾಡಿದ ಶಿಫಾರಸುಗಳಿಗೆ ಕೇಂದ್ರ ಸರ್ಕಾರ ನಿಗದಿತ ಅವಧಿಯಲ್ಲಿ ಅನುಮೋದನೆ ನೀಡಬೇಕು. ಇಲ್ಲದಿದ್ದರೆ, ನಾವು ತೆಗೆದುಕೊಳ್ಳುವ ಕ್ರಮ ಸರ್ಕಾರಕ್ಕೆ ಸರಿ ಎನಿಸುವುದಿಲ್ಲ ಎಂಬುದಾಗಿ ನ್ಯಾಯಮೂರ್ತಿಗಳಾದ ಎಸ್.ಕೆ.ಕೌಲ್ ಹಾಗೂ ಎ.ಎಸ್.ಓಕಾ ನೇತೃತ್ವದ ನ್ಯಾಯಪೀಠ ಎಚ್ಚರಿಕೆ ನೀಡಿತ್ತು. ಹಾಗಾಗಿ, ಉತ್ತರ ಪ್ರದೇಶದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಿರಣ್ ರಿಜಿಜು ಪ್ರತಿಕ್ರಿಯಿಸಿದ್ದಾರೆ. ಆದಾಗ್ಯೂ, 10 ದಿನದಲ್ಲಿ ಕೊಲಿಜಿಯಂ ಶಿಫಾರಸುಗಳಿಗೆ ಅನುಮೋದನೆ ನೀಡಬೇಕು ಎಂದು ಸುಪ್ರೀಂ ಕೋರ್ಟ್ ಗಡುವು ನೀಡಿದೆ. ಇದರ ಬೆನ್ನಲ್ಲೇ ಕೇಂದ್ರ ಸರ್ಕಾರವೂ ಐವರು ನ್ಯಾಯಮೂರ್ತಿಗಳ ನೇಮಕಕ್ಕೆ ಅಸ್ತು ಎಂದಿದೆ.