Site icon Vistara News

Supreme Court collegium | ದಿಲ್ಲಿ ಹೈಕೋರ್ಟ್‌ ಜಡ್ಜ್‌ ಸ್ಥಾನಕ್ಕೆ ಮತ್ತೆ ಸಲಿಂಗ ಲಾಯರ್ ಸೌರಭ್ ಕಿರ್ಪಾಲ್ ಹೆಸರು ಶಿಫಾರಸು

Sourabh Kirpal

ನವದೆಹಲಿ: ಸಲಿಂಗ ನ್ಯಾಯವಾದಿ ಸೌರಭ್ ಕಿರ್ಪಾಲ್ ಅವರನ್ನು ನ್ಯಾಯಮೂರ್ತಿಯಾಗಿ ನೇಮಕ ಮಾಡುವ ತನ್ನ ಶಿಫಾರಸಿಗೆ ಸುಪ್ರೀಂ ಕೋರ್ಟ್ ಕೊಲಿಜಿಯಂ (Supreme Court collegium) ಅಂಟಿಕೊಂಡಿದೆ. ದಿಲ್ಲಿ ಹೈಕೋರ್ಟ್ ನ್ಯಾಯಮೂರ್ತಿಯಾಗಿ ಸೌರಭ್ ಅವರನ್ನು ಈ ಹಿಂದೆ ಕೊಲಿಜಿಯಂ ಶಿಫಾರಸು ಮಾಡಿತ್ತು. ಆದರೆ, ಕೇಂದ್ರ ಸರ್ಕಾರವು ಈ ಶಿಫಾರಸನ್ನು ತಳ್ಳಿ ಹಾಕಿತ್ತು. ಈಗ ಮತ್ತೆ ಅವರ ಹೆಸರನ್ನೇ ಶಿಫಾರಸು ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಹಿರಿಯ ನ್ಯಾಯವಾದಿಯಾಗಿರುವ ಸೌರಭ್ ಕಿರ್ಪಾಲ್ ಅವರು ನ್ಯಾಯಮೂರ್ತಿಯಾಗಲು ಎಲ್ಲ ರೀತಿಯ ಅರ್ಹತೆಗಳನ್ನು ಹೊಂದಿದ್ದಾರೆಂಬ ಎಂಬ ಅಭಿಪ್ರಾಯವನ್ನು ಕೊಲಿಜಿಯಂ ಹೊಂದಿದೆ. ಸಿಜೆಐ ಡಿ ವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್, ಕೆ ಎಂ ಜೊಸೇಫ್ ಕೊಲಿಜಿಯಂ ಭಾಗವಾಗಿದ್ದಾರೆ.

ಬುಧವಾರ ಸಭೆ ಸೇರಿದ ಕೊಲಿಜಿಯಂ, ಕಿರ್ಪಾಲ್ ಅವರ ಹೆಸರನ್ನು ಪುನಃ ಶಿಫಾರಸು ಮಾಡುವುದರ ಜೊತೆಗೆ, ಮದ್ರಾಸ್, ಅಲಹಾಬಾದ್, ಕರ್ನಾಟಕ ಮತ್ತು ಪಂಜಾಬ್‌ನ ಹೈಕೋರ್ಟ್‌ ನೇಮಕಾತಿಗಾಗಿ ಕೆಲವು ಶಿಫಾರಸುಗಳನ್ನು ಸಹ ತೆಗೆದುಕೊಂಡಿತು. ಹೈಕೋರ್ಟ್‌ಗಳ ನ್ಯಾಯಮೂರ್ತಿಗಳ ನೇಮಕಕ್ಕೆ ಸಂಬಂಧಿಸಿದಂತೆ 24 ಹೆಸರನ್ನು ಕೊಲಿಜಿಯಂ ಸೂಚಿಸಿದೆ ಎಂದು ಹೇಳಲಾಗಿದೆ.

ಸುಮಾರು ಎರಡು ವರ್ಷಗಳಿಂದ ಸೌರಭ್ ಕಿರ್ಪಾಲ್ ಅವರ ಹೆಸರನ್ನು ಕೊಲಿಜಿಯಂ ಶಿಫಾರಸು ಮಾಡುತ್ತಲೇ ಬಂದಿದೆ. 2021 ನವೆಂಬರ್‌ನಲ್ಲಿ ಮೊದಲ ಬಾರಿಗೆ ಹೈಕೋರ್ಟ್ ನ್ಯಾಯಮೂರ್ತಿ ಸ್ಥಾನಕ್ಕೆ ಸೌರಭ್ ಕಿರ್ಪಾಲ್ ಅವರ ಹೆಸರನ್ನು ಕೊಲಿಜಿಯಂ ಶಿಫಾರಸು ಮಾಡಿತ್ತು.

ಇದನ್ನೂ ಓದಿ | Supreme Court | 9 ಹೈಕೋರ್ಟ್ ಜಡ್ಜ್‌ಗಳ ನೇಮಕಕ್ಕೆ ಕೊಲಿಜಿಯಂ ಶಿಫಾರಸು, ಈ ಪೈಕಿ ಇಬ್ಬರು ಕರ್ನಾಟಕಕ್ಕೆ!

Exit mobile version