ನವದೆಹಲಿ: ಉತ್ತರ ಪ್ರದೇಶದ ವಾರಾಣಸಿ ಜ್ಞಾನವಾಪಿ ಮಸೀದಿಯ (Gyanvapi Case) ಒಳಗಿರುವ ಶಿವಲಿಂಗದ (Shivalinga) ವೈಜ್ಞಾನಿಕ ಸಮೀಕ್ಷೆ(ಕಾರ್ಬನ್ ಡೇಟಿಂಗ್) ಕೈಗೊಳ್ಳಲು ಒಪ್ಪಿಗೆ ನೀಡಿದ್ದ ಅಲಹಾಬಾದ್ ಹೈಕೋರ್ಟ್ ಆದೇಶವನ್ನು ಸುಪ್ರೀಂ ಕೋರ್ಟ್ ತಡೆ ಹಿಡಿದಿದೆ. ಈ ವಿಷಯದಲ್ಲಿ ನಾವು ಸೂಕ್ಷವಾಗಿ ಹೆಜ್ಜೆ ಇಡಬೇಕಾಗಿದೆ ಎಂದು ಸುಪ್ರೀಂ ಕೋರ್ಟ್ (Supreme Court) ಹೇಳಿದೆ.
ಕಳೆದ ವಾರ ಅಲಹಾಬಾದ್ ಹೈಕೋರ್ಟ್, ಮಸೀದಿಯ ಸಂಕೀರ್ಣದಲ್ಲಿರುವ ಶಿವಲಿಂಗ ಎಷ್ಟು ಹಳೆಯದು ಎಂಬುದನ್ನು ಪತ್ತೆ ಹಚ್ಚಲು ಕಾರ್ಬನ್ ಡೇಟಿಂಗ್ ಪರೀಕ್ಷೆಗೆ ಒಪ್ಪಿಗೆ ಸೂಚಿಸಿತ್ತು. ಹಿಂದೂಗಳು ಇದು ಶಿವಲಿಂಗ ಎಂದು ಹೇಳಿದರು, ಮುಸ್ಲಿಮರು ಅದೊಂದು ಕಾರಂಜಿಯ ಭಾಗವಾಗಿದೆ ಎಂದು ಹೇಳುತ್ತಿದ್ದಾರೆ. ಹೈಕೋರ್ಟ್‌ನ ಈ ನಿರ್ದೇಶನ ಪ್ರಶ್ನಿಸಿ ಜ್ಞಾನವಾಪಿ ಮಸೀದಿ ವ್ಯವಸ್ಥಾಪನಾ ಕಮಿಟಿ ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಿತ್ತು.
ಮಸೀದಿ ಸಮೀಕ್ಷೆಗೆ ಒಪ್ಪಿಗೆ ಸೂಚಿಸಿದ್ದ ವಾರಾಣಸಿ ಕೋರ್ಟ್
ಉತ್ತರ ಪ್ರದೇಶದ ಕಾಶಿ ವಿಶ್ವನಾಥ ದೇವಾಲಯದ ಬಳಿ ಇರುವ ಜ್ಞಾನವಾಪಿ (Gyanvapi Case) ಮಸೀದಿಯಲ್ಲಿ ಪತ್ತೆಯಾದ ಶಿವಲಿಂಗದ ವೈಜ್ಞಾನಿಕ ಪರೀಕ್ಷೆ (ಕಾರ್ಬನ್ ಡೇಟಿಂಗ್)ಗೆ ಅಲಹಾಬಾದ್ ಹೈಕೋರ್ಟ್ ನಿರ್ದೇಶನ ನೀಡಿತ್ತು. ಆ ಬಳಿಕ, ಜ್ಞಾನವಾಪಿ ಮಸೀದಿಯ ಭೂ ವಿಸ್ತೀರ್ಣದ ಸಮೀಕ್ಷೆ ನಡೆಸಬೇಕು ಎಂದು ಕೋರಿ ಸಲ್ಲಿಕೆಯಾದ ಅರ್ಜಿಯ ವಿಚಾರಣೆಗೆ ವಾರಾಣಸಿ ನ್ಯಾಯಾಲಯ ಸಮ್ಮತಿ ಸೂಚಿಸಿದೆ.
ಜ್ಞಾನವಾಪಿ ಮಸೀದಿಯ ಇಡೀ ಆವರಣದ ಸಮೀಕ್ಷೆ ನಡೆಸಲು ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಗೆ (ASI) ನಿರ್ದೇಶನ ನೀಡಬೇಕು ಎಂದು ನಾಲ್ವರು ಹಿಂದು ಮಹಿಳೆಯರು ಸಲ್ಲಿಸಿದ ಅರ್ಜಿಯನ್ನು ನ್ಯಾಯಾಲಯ ವಿಚಾರಣೆ ನಡೆಸಿತು. ಹಾಗೆಯೇ, ಯಾವುದೇ ಆಕ್ಷೇಪಣೆಗಳು ಇದ್ದರೆ ಮೇ 19ರೊಳಗೆ ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ಉತ್ತರ ಪ್ರದೇಶ ಸರ್ಕಾರ ಹಾಗೂ ಮಸೀದಿ ಉಸ್ತುವಾರಿ ವಹಿಸಿಕೊಂಡಿರುವ ಅಂಜುಮನ್ ಇಂತೇಜಾಮಿಯಾಗೆ ಸೂಚಿಸಿದೆ. ಮೇ 22ರಂದು ವಿಚಾರಣೆ ನಡೆಸುವುದಾಗಿಯೂ ತಿಳಿಸಿದೆ.
ಈಗಾಗಲೇ ಜ್ಞಾನವಾಪಿ ಮಸೀದಿಯ ವಿಡಿಯೊ ಸಮೀಕ್ಷೆ ಮುಗಿದಿದೆ. ಇದೇ ವೇಳೆ, ಮಸೀದಿ ಆವರಣದಲ್ಲಿರುವ ಬಾವಿಯಲ್ಲಿ ಶಿವಲಿಂಗ ಪತ್ತೆಯಾಗಿದೆ. ಶಿವಲಿಂಗದ ಕಾಲಾವಧಿ ಪತ್ತೆಗಾಗಿ ಕಾರ್ಬನ್ ಡೇಟಿಂಗ್ ಪರೀಕ್ಷೆ ನಡೆಸಲು ಅಲಹಾಬಾದ್ ಹೈಕೋರ್ಟ್ ಈಗಾಗಲೇ ನಿರ್ದೇಶಿಸಿದೆ. ಇದರ ಬೆನ್ನಲ್ಲೇ, ವಾರಾಣಸಿ ನ್ಯಾಯಾಲಯವು ಹಿಂದುಗಳ ಅರ್ಜಿಯ ವಿಚಾರಣೆಗೆ ಸಮ್ಮತಿ ಸೂಚಿಸಿದೆ.
ಇದನ್ನೂ ಓದಿ: Gyanvapi Case | ಜ್ಞಾನವಾಪಿ ಮಸೀದಿಯಲ್ಲಿ ಸಿಕ್ಕ ಶಿವಲಿಂಗದ ರಕ್ಷಣೆ ಮುಂದುವರಿಸಲು ಸುಪ್ರೀಂ ಆದೇಶ
ವಿಡಿಯೊ ಸರ್ವೇ ವೇಳೆ ಪತ್ತೆಯಾದ ಶಿವಲಿಂಗಕ್ಕೆ ಯಾವುದೇ ಹಾನಿಯಾಗದಂತೆ ವೈಜ್ಞಾನಿಕ ಪರೀಕ್ಷೆ ನಡೆಸಬೇಕು ಎಂದು ಅಲಹಾಬಾದ್ ಹೈಕೋರ್ಟ್ ನಿರ್ದೇಶನ ನೀಡಿದೆ. ಜ್ಞಾನವಾಪಿ ಮಸೀದಿಯು ದೇವಾಲಯಕ್ಕೆ ಅಂಟಿಕೊಂಡಂತಿರುವ ಕಾರಣ, ಅದು ಮೊದಲು ದೇವಾಲಯವೇ ಆಗಿತ್ತು. ದೇವಾಲಯ ಕೆಡವಿ ಮಸೀದಿ ನಿರ್ಮಿಸಲಾಗಿದೆ. ಹಾಗಾಗಿ, ಇಡೀ ಮಸೀದಿಯ ಸಮೀಕ್ಷೆಯಾಗಬೇಕು ಎಂದು ಅರ್ಜಿ ಸಲ್ಲಿಸಲಾಗಿತ್ತು.
ದೇಶದ ಇನ್ನಷ್ಟು ಕುತೂಹಲಕರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.