ನವದೆಹಲಿ: 26 ವಾರ ತುಂಬಿದ ಗರ್ಭಿಣಿಗೆ ಗರ್ಭಪಾತ ಮಾಡಿಸಿಕೊಳ್ಳಲು ಅನುಮತಿ ನೀಡಲು ಸುಪ್ರೀಂ ಕೋರ್ಟ್ (Supreme Court) ಸೋಮವಾರ (ಅಕ್ಟೋಬರ್ 16) ನಿರಾಕರಿಸಿದೆ. ಗರ್ಭಪಾತಕ್ಕೆ ಅನುಮತಿ (Pregnancy Termination) ನೀಡಬೇಕು ಎಂದು ಗರ್ಭಿಣಿ ಸಲ್ಲಿಸಿದ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಳ್ಳಿಹಾಕಿದೆ. ಮಹಿಳೆ ಗರ್ಭ ಧರಿಸಿ 24 ವಾರ ದಾಟಿರುವುದರಿಂದಾಗಿ ಗರ್ಭಪಾತಕ್ಕೆ ಅನುಮತಿ ನೀಡಲು ಆಗುವುದಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ಪೀಠ ತಿಳಿಸಿದೆ.
ಮದುವೆಯಾಗಿರುವ ಮಹಿಳೆಯು ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದಾರೆ. ಅವರಿಗೆ ಈಗಾಗಲೇ ಇಬ್ಬರು ಮಕ್ಕಳಿದ್ದು, ಅವರ ಸಂಬಂಧಿಕರೊಬ್ಬರು ಮಕ್ಕಳನ್ನು ನೋಡಿಕೊಳ್ಳುತ್ತಿದ್ದಾರೆ. ಹಾಗಾಗಿ, ಮೂರನೇ ಮಗು ಜನಿಸಿದರೆ ಅದನ್ನು ಸಾಕುವುದು ಕಷ್ಟವಾಗುತ್ತದೆ. ಹಾಗಾಗಿ, ಮಹಿಳೆಯು ಗರ್ಭಪಾತ ಮಾಡಿಸಿಕೊಳ್ಳಲು ಅನುಮತಿ ನೀಡಬೇಕು ಹಾಗೂ ದೆಹಲಿ ಏಮ್ಸ್‌ಗೆ ಈ ಕುರಿತು ನಿರ್ದೇಶನ ನೀಡಬೇಕು ಎಂಬುದಾಗಿ ಇದಕ್ಕೂ ಮೊದಲು ಮಹಿಳೆ ಪರ ವಕೀಲರು ಸುಪ್ರೀಂ ಕೋರ್ಟ್‌ನಲ್ಲಿ ವಾದ ಮಂಡಿಸಿದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಅಕ್ಟೋಬರ್ 12ರಂದು ಸುಪ್ರೀಂ ಕೋರ್ಟ್ ತೀರ್ಪು ಕಾಯ್ದಿರಿಸಿತ್ತು. ಅದರಂತೆ, ಸೋಮವಾರ ತೀರ್ಪು ಪ್ರಕಟಿಸಿದ್ದು, “ಮಹಿಳೆಯ ಗರ್ಭಪಾತಕ್ಕೆ ಅನುಮತಿ ನೀಡುವುದಿಲ್ಲ. ಸರ್ಕಾರವೇ ಮಗುವಿನ ಆರೈಕೆಯ ಹೊಣೆ ಹೊತ್ತುಕೊಳ್ಳಲಿ. ಮಗು ಜನಿಸಿದ ಬಳಿಕ ಅದನ್ನು ಬೇರೆಯವರಿಗೆ ದತ್ತು ಕೊಡುವ ಕುರಿತು ಬೇಕಾದರೆ ಮಹಿಳೆ ಅಥವಾ ಆಕೆಯ ಸಂಬಂಧಿಕರು ತೀರ್ಮಾನಿಸಲಿ. ಆದರೆ, ಯಾವುದೇ ಕಾರಣಕ್ಕೂ ಗರ್ಭಪಾತಕ್ಕೆ ಅನುಮತಿ ನೀಡುವುದಿಲ್ಲ” ಎಂದು ಸ್ಪಷ್ಟಪಡಿಸಿತು.
ಇದನ್ನೂ ಓದಿ: ಸಹೋದರನಿಂದಲೇ ಗರ್ಭ ಧರಿಸಿದ ಬಾಲಕಿಯ ಗರ್ಭಪಾತಕ್ಕೆ ಕೋರ್ಟ್ ಅನುಮತಿ; ಪರಿಗಣಿಸಿದ ಅಂಶವೇನು?
ದೇಶದಲ್ಲಿ ಮೆಡಿಕಲ್ ಟರ್ಮಿನೇಷನ್ ಆಫ್ ಪ್ರೆಗ್ನೆನ್ಸಿ (MTP) ಕಾಯ್ದೆ ಪ್ರಕಾರ, ಅತ್ಯಾಚಾರ ಸಂತ್ರಸ್ತೆಯರು, ವಿಶೇಷ ಚೇತನರು ಹಾಗೂ ಬಾಲಕಿಯರು ಗರ್ಭ ಧರಿಸಿದ ಪ್ರಕರಣಗಳಲ್ಲಿ ಗರಿಷ್ಠ 24 ವಾರಗಳವರೆಗೆ ಗರ್ಭಪಾತಕ್ಕೆ ನ್ಯಾಯಾಲಯ ಅನುಮತಿ ನೀಡುತ್ತದೆ. ಆದರೆ, ಮಹಿಳೆ ಗರ್ಭ ಧರಿಸಿ 26 ವಾರ ಕಳೆದ ಕಾರಣ ಅನುಮತಿ ನೀಡಲು ಆಗುವುದಿಲ್ಲ ಎಂದು ಕೋರ್ಟ್ ತಿಳಿಸಿದೆ. ಹಾಗೆಯೇ, ಮಹಿಳೆಯು ಗರ್ಭವತಿಯಾಗಿ ಮುಂದುವರಿದು, ಆಕೆ ಮಗುವಿಗೆ ಜನ್ಮ ನೀಡಿದರೆ ಯಾವುದೇ ತೊಂದರೆ ಇಲ್ಲ ಎಂದು ಈಗಾಗಲೇ ಏಮ್ಸ್ ಆಸ್ಪತ್ರೆ ಕೋರ್ಟ್‌ಗೆ ತಿಳಿಸಿದೆ.