ನವದೆಹಲಿ: ಬ್ರಿಟಿಷ್ ಬ್ರಾಡ್‌ಕಾಸ್ಟಿಂಗ್ ಕಾರ್ಪೊರೇಷನ್(BBC) ಮಾಧ್ಯಮ ಸಂಸ್ಥೆಯನ್ನು ಭಾರತದಲ್ಲಿ ನಿಷೇಧಿಸಬೇಕೆಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ವಜಾ ಮಾಡಿದೆ. ಈ ಅರ್ಜಿಯು ತಪ್ಪು ಗ್ರಹಿಕೆಯಿಂದ ಕೂಡಿದೆ ಎಂಬ ಕಾರಣ ನೀಡಿ, ವಿಚಾರಣೆ ಸಾಧ್ಯವಿಲ್ಲ ಎಂದು ನ್ಯಾಯಾಲಯವು ಹೇಳಿದೆ. 2002 ಗುಜರಾತ್ ದಂಗೆಯ ಕುರಿತು ಬಿಬಿಸಿ ಎರಡು ಭಾಗಗಳಲ್ಲಿ ಸಾಕ್ಷ್ಯ ಚಿತ್ರವನ್ನು ರೂಪಿಸಿತ್ತು. ಈ ಡ್ಯಾಕುಮೆಂಟರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಋಣಾತ್ಮಕವಾಗಿ ತೋರಿಸಲಾಗಿದೆ ಎಂದು ಆರೋಪಿಸಿ, ಭಾರತದಲ್ಲಿ ಬಿಬಿಸಿ ಕಾರ್ಯಾಚರಣೆಯ ಮೇಲೆ ನಿಷೇಧ ಹೇರಬೇಕೆಂದು ಅರ್ಜಿ ದಾಖಲಾಗಿತ್ತು(Ban BBC In India).
ಸಾಕ್ಷ್ಯಚಿತ್ರದ ಹಿನ್ನೆಲೆಯಲ್ಲಿ ಭಾರತದಲ್ಲಿ ಬಿಬಿಸಿ ನಿಷೇಧ ಕೋರಿ ಹಿಂದೂ ಸೇನಾ ಮುಖ್ಯಸ್ಥ ವಿಷ್ಣು ಗುಪ್ತಾ ಅವರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಹಾಕಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್, ಸಾಕ್ಷ್ಯ ಚಿತ್ರವೊಂದು ದೇಶದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂದು ಪ್ರಶ್ನಿಸಿತು. ಅಲ್ಲದೇ, ಇದೊಂದು ತಪ್ಪು ಗ್ರಹಿಕೆಯಿಂದ ಕೂಡಿದ ಅರ್ಜಿ ಎಂದು ವಜಾ ಮಾಡಿತು.
ಇದನ್ನೂ ಓದಿ: BBC Documentary : ಮೋದಿ ಕುರಿತ ಬಿಬಿಸಿ ಸಾಕ್ಷ್ಯಚಿತ್ರ ಪ್ರಸಾರ ನಿಷೇಧ, ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ನೋಟಿಸ್
ಅರ್ಜಿದಾರ ಪರ ವಾದಿಸಿದ ಹಿರಿಯ ನ್ಯಾಯವಾದಿ ಪಿಂಕಿ ಆನಂದ್, ದೇಶದ ಇಮೇಜ್ ಅನ್ನು ಬಿಬಿಸಿ ಉದ್ದೇಶ ಪೂರ್ವಕವಾಗಿಯೇ ಹಾಳು ಮಾಡುತ್ತಿದೆ. ಈ ಸಂಚಿನ ಹಿಂದೆ ಯಾರಿದ್ದಾರೆ ಎಂಬುದನ್ನು ಪತ್ತೆ ಹಚ್ಚಲು ರಾಷ್ಟ್ರೀಯ ತನಿಖಾ ಸಂಸ್ಥೆಯಿಂದ ತನಿಖೆಗೆ ಆದೇಶಿಸಬೇಕೆಂದು ವಾದಿಸಿದರು. ಆಗ ಕೋರ್ಟ್, ಈ ರೀತಿಯ ಆದೇಶಗಳನ್ನು ನೀಡಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿತು ಮತ್ತು ಅರ್ಜಿಯನ್ನು ವಜಾ ಮಾಡಿತು.