Site icon Vistara News

Supreme Court: ವಿಚ್ಛೇದಿತ ಮುಸ್ಲಿಂ ಮಹಿಳೆಯರು ಜೀವನಾಂಶ ಕೇಳಬಹುದು: ಸುಪ್ರೀಂ ಕೋರ್ಟ್​ ಮಹತ್ವದ ತೀರ್ಪು

Supreme Court

Supreme Court

ನವದೆಹಲಿ: ಸುಪ್ರೀಂ ಕೋರ್ಟ್‌ (Supreme Court) ಇಂದು ಮಹತ್ವದ ತೀರ್ಪು ನೀಡಿದ್ದು, ವಿಚ್ಛೇದಿತ ಮುಸ್ಲಿಂ ಮಹಿಳೆ ಸಿಆರ್​ಪಿಸಿಯ ಸೆಕ್ಷನ್ 125ರ ಅಡಿಯಲ್ಲಿ ತನ್ನ ಪತಿಯಿಂದ ಜೀವನಾಂಶವನ್ನು ಕೇಳಬಹುದು ಎಂದು ನ್ಯಾಯಾಲಯವು ಮತ್ತೊಮ್ಮೆ ಸ್ಪಷ್ಟಪಡಿಸಿದೆ.

ನ್ಯಾಯಮೂರ್ತಿಗಳಾದ ಬಿ.ವಿ.ನಾಗರತ್ನಾ ಮತ್ತು ಅಗಸ್ಟಿನ್ ಜಾರ್ಜ್ ಮಾಸಿಹ್ ಅವರ ನ್ಯಾಯಪೀಠವು ಎರಡು ಪ್ರತ್ಯೇಕ ತೀರ್ಪುಗಳಲ್ಲಿ ಇದನ್ನು ಹೇಳಿದೆ. ಸೆಕ್ಷನ್ 125 ಸಿಆರ್​ಪಿಸಿ ಎಲ್ಲ ಮಹಿಳೆಯರಿಗೆ ಅನ್ವಯಿಸುತ್ತದೆ ಎಂದು ನ್ಯಾಯಮೂರ್ತಿ ನಾಗತ್ನಾ ಹೇಳಿದರು. ತನ್ನ ಪತ್ನಿಗೆ ಜೀವನಾಂಶ ನೀಡುವಂತೆ ತೆಲಂಗಾಣ ಹೈಕೋರ್ಟ್ ನೀಡಿದ ಆದೇಶವನ್ನು ಹೈದರಾಬಾದ್‌ ಮೂಲದ ಮೊಹಮ್ಮದ್ ಅಬ್ದುಲ್ ಸಮದ್ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದನು. ಬುಧವಾರ ಈ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯ ಈ ಮಹತ್ವದ ತೀರ್ಪು ನೀಡಿದೆ.

ಸಿಆರ್​ಪಿಸಿಯ ಸೆಕ್ಷನ್ 125ರ ಅಡಿಯಲ್ಲಿ ಸಮದ್ ತನಗೆ ತ್ರಿವಳಿ ತಲಾಖ್ ನೀಡಿದ್ದಾನೆ ಎಂದು ಮಹಿಳೆ ಕೌಟುಂಬಿಕ ನ್ಯಾಯಾಲಯದ ಮೊರೆ ಹೋಗಿದ್ದರು. ಬಳಿಕ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಸಲಾಗಿತ್ತು. 2023ರ ಡಿಸೆಂಬರ್ 13ರಂದು ತೀರ್ಪು ನೀಡುವಾಗ ನ್ಯಾಯಾಲಯ ಮಧ್ಯಂತರ ಜೀವನಾಂಶವಾಗಿ ಪತ್ನಿಗೆ 10,000 ರೂ. ಪಾವತಿಸುವಂತೆ ಅರ್ಜಿದಾರರಿಗೆ ನಿರ್ದೇಶನ ನೀಡಿತ್ತು. ಇದನ್ನು ಪ್ರಶ್ನಿಸಿದ ಸಮದ್ ಸುಪ್ರೀಂ ಕೋರ್ಟ್‌ನ ಮೆಟ್ಟಿಲೇರಿದ್ದ.

ಸಿಆರ್‌ಪಿಸಿಯ ಸೆಕ್ಷನ್ 125ರ ಅಡಿಯಲ್ಲಿ ವಿಚ್ಛೇದಿತ ಪತ್ನಿಗೆ ಜೀವನಾಂಶ ಪಾವತಿಸುವ ನಿರ್ದೇಶನದ ವಿರುದ್ಧ ಮೊಹಮ್ಮದ್ ಅಬ್ದುಲ್ ಸಮದ್ ಸಲ್ಲಿಸಿದ್ದ ಅರ್ಜಿಯನ್ನು ನಾಗರತ್ನಾ ಮತ್ತು ಆಗಸ್ಟಿನ್ ಜಾರ್ಜ್ ಮಸಿಹ್ ಅವರ ಪೀಠ ತಿರಸ್ಕರಿಸಿತು. ಜೀವನಾಂಶವನ್ನು ಕೋರುವ ಕಾನೂನು ಎಲ್ಲ ವಿವಾಹಿತ ಮಹಿಳೆಯರಿಗೆ ಅವರ ಧರ್ಮವನ್ನು ಲೆಕ್ಕಿಸದೆ ಅನ್ವಯಿಸುತ್ತದೆ ಎಂದು ಪೀಠವು ಸ್ಪಷ್ಟಪಡಿಸಿದೆ. ಭಾರತೀಯ ಪುರುಷನು ಗೃಹಿಣಿಯ ಪಾತ್ರವನ್ನು ಗುರುತಿಸಬೇಕಾದ ಸಮಯ ಬಂದಿದೆ ಎಂದು ಕೋರ್ಟ್‌ ತಿಳಿಸಿದೆ.

ದಾನವಲ್ಲ ಹಕ್ಕು

ಜೀವನಾಂಶವು ದಾನವಲ್ಲ. ಅದು ವಿವಾಹಿತ ಮಹಿಳೆಯರ ಹಕ್ಕು ಎಂದು ಪೀಠ ಹೇಳಿದೆ. “ಗೃಹಿಣಿಯಾಗಿರುವ ಪತ್ನಿಯು ಭಾವನಾತ್ಮಕವಾಗಿ ಮತ್ತು ಇತರ ರೀತಿಯಲ್ಲಿ ತಮ್ಮ ಮೇಲೆ ಅವಲಂಬಿತಳಾಗಿದ್ದಾಳೆ ಎಂಬ ಅಂಶವನ್ನು ಕೆಲವು ಪತಿಯಂದಿರು ಅರಿತುಕೊಳ್ಳುವುದಿಲ್ಲ” ಎಂದು ನಾಗರತ್ನಾ ಹೇಳಿದರು. ಸಿಆರ್‌ಪಿಸಿ ಸೆಕ್ಷನ್ 125 ಮುಸ್ಲಿಂ ಮಹಿಳೆಯರಿಗೂ ಅನ್ವಯವಾಗುವ ಜಾತ್ಯತೀತ ಕಾನೂನು ಎಂದು ಈ ಹಿಂದೆ ಶಾ ಬಾನು ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿತ್ತು.

ಮುಸ್ಲಿಂ ಮಹಿಳೆಯರ (ವಿಚ್ಛೇದನದ ಹಕ್ಕುಗಳ ರಕ್ಷಣೆ) ಕಾಯ್ದೆ, 1986ರ ದೃಷ್ಟಿಯಿಂದ, ಈ ವಿಚ್ಛೇದಿತ ಮುಸ್ಲಿಂ ಮಹಿಳೆ ಸೆಕ್ಷನ್ 125 ಸಿಆರ್‌ಪಿಸಿ ಅಡಿಯಲ್ಲಿ ಪ್ರಯೋಜನ ಪಡೆಯಲು ಅರ್ಹಳಲ್ಲ ಎಂದು ಅರ್ಜಿದಾರರ ವಕೀಲರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರೂ ಪ್ರಯೋಜನವಾಗಲಿಲ್ಲ.

ಇದನ್ನೂ ಓದಿ: ವಿಚ್ಛೇದನ; ಪತ್ನಿಯೇ ಪತಿಗೆ 5 ಸಾವಿರ ರೂ. ಜೀವನಾಂಶ ಕೊಡಲು ಕೋರ್ಟ್‌ ಆದೇಶ!

ಅಕ್ರಮ ಸಂಬಂಧವಿದ್ದರೆ ಜೀವನಾಂಶ ಕೊಡಬೇಕಿಲ್ಲ ಎಂದ ಹೈಕೋರ್ಟ್‌

ಬೆಂಗಳೂರು: ಒಂದು ವೇಳೆ ಹೆಂಡತಿ ಇನ್ನೊಬ್ಬನ ಜತೆ ಅಕ್ರಮ ಸಂಬಂಧ (Illicit Relationship) ಹೊಂದಿರುವುದು ನಿಜವಾಗಿದ್ದರೆ ಆಕೆಗೆ ಗಂಡ ಜೀವನಾಂಶ ಕೊಡಬೇಕಾಗಿಲ್ಲ ಎಂದು ರಾಜ್ಯ ಹೈಕೋರ್ಟ್‌ ಕೆಲವು ತಿಂಗಳ ಹಿಂದೆ ತೀರ್ಪು ನೀಡಿತ್ತು.

Exit mobile version