Site icon Vistara News

ಸಂಸದರು, ಶಾಸಕರ ವಿರುದ್ಧದ ಕೇಸ್‌ಗಳ ಕ್ಷಿಪ್ರ ವಿಚಾರಣೆಗೆ ಸುಪ್ರೀಂ ಆದೇಶ; ಎಷ್ಟು ಜನ ಜೈಲುಪಾಲು?

8 votes cast in Chandigarh mayoral election were Valid Says Supreme Court

ನವದೆಹಲಿ: ದೇಶಾದ್ಯಂತ ಕ್ರಿಮಿನಲ್‌ ಕೇಸ್‌ಗಳನ್ನು ಎದುರಿಸುತ್ತಿರುವ (ಅಪರಾಧ ಪ್ರಕರಣಗಳು) ಸಂಸದರು ಹಾಗೂ ಶಾಸಕರಿಗೆ ಸುಪ್ರೀಂ ಕೋರ್ಟ್‌ (Supreme Court) ಶಾಕ್‌ ನೀಡಿದೆ. ಸಂಸದರು ಹಾಗೂ ಶಾಸಕರ ವಿರುದ್ಧ ದಾಖಲಾದ ಕ್ರಿಮಿನಲ್‌ ಕೇಸ್‌ಗಳನ್ನು ಕ್ಷಿಪ್ರವಾಗಿ ವಿಲೇವಾರಿ ಮಾಡುವ ದಿಸೆಯಲ್ಲಿ ಎಲ್ಲ ರಾಜ್ಯಗಳ ಹೈಕೋರ್ಟ್‌ಗಳಿಗೆ ನಿರ್ದೇಶನ ನೀಡಿದೆ. ಸಂಸದರು ಹಾಗೂ ಶಾಸಕರ ವಿರುದ್ಧ ದಾಖಲಾದ ಕೇಸ್‌ಗಳ (Criminal Cases) ಕ್ಷಿಪ್ರ ವಿಚಾರಣೆಗೆ ಸುಮೋಟೊ (ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಳ್ಳುವುದು) ಕೇಸ್‌ ದಾಖಲಿಸಿಕೊಳ್ಳಬೇಕು ಎಂದು ಕೂಡ ನಿರ್ದೇಶನ ನೀಡಿದೆ.

ಸಂಸದರು ಹಾಗೂ ಶಾಸಕರ ವಿರುದ್ಧ ದಾಖಲಾದ ಕ್ರಿಮಿನಲ್‌ ಕೇಸ್‌ಗಳ ಕುರಿತು ಕ್ಷಿಪ್ರವಾಗಿ ವಿಚಾರಣೆ ನಡೆಯುವಂತಹ ವ್ಯವಸ್ಥೆ ಜಾರಿಗೆ ಬರಬೇಕು ಎಂದು ವಕೀಲ ಅಶ್ವಿನಿ ಉಪಾಧ್ಯಾಯ ಅವರು ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯವು, ಹೈಕೋರ್ಟ್‌ಗಳಿಗೆ ಹಲವು ನಿರ್ದೇಶನಗಳನ್ನು ನೀಡಿತು. “ಸಂಸದರು ಹಾಗೂ ಶಾಸಕರ ವಿರುದ್ಧ ದಾಖಲಾದ ಕೇಸ್‌ಗಳ ವಿಚಾರಣೆಗೆ ಹೈಕೋರ್ಟ್‌ಗಳು ಸುಮೋಟೊ ಕೇಸ್‌ಗಳನ್ನು ಕೂಡ ದಾಖಲಿಸಿಕೊಳ್ಳಬಹುದು. ವಿಶೇಷ ನ್ಯಾಯಪೀಠವು ಸುಮೋಟೊ ಕೇಸ್‌ಗಳ ವಿಚಾರಣೆ ನಡೆಸಬಹುದು” ಎಂದು ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ನೇತೃತ್ವದ ತ್ರಿಸದಸ್ಯ ನ್ಯಾಯಪೀಠ ಸೂಚಿಸಿದೆ.

ಕ್ಷಿಪ್ರವಾಗಿ ಪ್ರಕರಣಗಳ ವಿಲೇವಾರಿಗೆ ಆಯಾ ನ್ಯಾಯಾಲಯಗಳಿಗೆ ಮಹತ್ವದ ನಿರ್ದೇಶನ ನೀಡಲು ಹೈಕೋರ್ಟ್‌ಗಳಿಗೆ ಪ್ರಿನ್ಸಿಪಲ್‌ ಜಿಲ್ಲಾ ಅಥವಾ ಸೆಷನ್ಸ್‌ ನ್ಯಾಯಾಲಯದ ಜಡ್ಜ್‌ಗಳ ಅವಶ್ಯಕತೆ ಬೀಳುತ್ತದೆ. ಹೈಕೋರ್ಟ್‌ಗಳು ಈ ಜಡ್ಜ್‌ಗಳನ್ನು ಕೂಡ ಬಳಸಿಕೊಂಡು, ಅಧೀನ ನ್ಯಾಯಾಲಯಗಳಲ್ಲಿ ವೇಗವಾಗಿ ವಿಚಾರಣೆ ನಡೆಯುವಂತೆ ಕ್ರಮ ತೆಗೆದುಕೊಳ್ಳಬೇಕು ಎಂದು ನ್ಯಾಯಾಲಯವು ಹೈಕೋರ್ಟ್‌ಗಳಿಗೆ ನಿರ್ದೇಶನ ನೀಡಿದೆ.

Court Order

ಆದ್ಯತೆ ಮೇಲೆ ಪ್ರಕರಣ ಕೈಗೆತ್ತಿಕೊಳ್ಳಿ

ಸಂಸದರು ಹಾಗೂ ಶಾಸಕರ ವಿರುದ್ಧ ದಾಖಲಾದ ಕ್ರಿಮಿನಲ್‌ ಪ್ರಕರಣಗಳ ಗಾಂಭೀರ್ಯವನ್ನು ಅರಿತುಕೊಂಡು, ಆದ್ಯತೆಯ ಮೇಲೆ ಪ್ರಕರಣಗಳನ್ನು ಕೈಗೆತ್ತಿಕೊಳ್ಳಿ ಎಂದು ಹೈಕೋರ್ಟ್‌ಗಳಿಗೆ ಸುಪ್ರೀಂ ಕೋರ್ಟ್‌ ಸೂಚಿಸಿದೆ. ಗಲ್ಲು ಶಿಕ್ಷೆ ಅಥವಾ ಜೀವಾವಧಿ ಶಿಕ್ಷೆ ವಿಧಿಸಬಹುದಾದ ಪ್ರಕರಣಗಳನ್ನು ಮೊದಲ ಆದ್ಯತೆ ಮೇರೆಗೆ ಕೈಗೆತ್ತಿಕೊಳ್ಳಬೇಕು. ಇನ್ನು ಐದು ವರ್ಷ ಅಥವಾ ಅದಕ್ಕಿಂತ ಹೆಚ್ಚು ಅವಧಿಗೆ ಶಿಕ್ಷೆ ವಿಧಿಸಬಹುದಾದ ಪ್ರಕರಣಗಳನ್ನು ನಂತರದ ಆದ್ಯತೆಯ ಮೇಲೆ ವಿಲೇವಾರಿ ಮಾಡಬೇಕು. ವಿಶೇಷ ಸಂದರ್ಭಗಳನ್ನು ಹೊರತುಪಡಿಸಿ ಅಧೀನ ನ್ಯಾಯಾಲಯಗಳು ವಿಚಾರಣೆಯನ್ನು ಪದೇಪದೆ ಮುಂದೂಡಬಾರದು ಎಂದು ಕೂಡ ಸರ್ವೋಚ್ಚ ನ್ಯಾಯಾಲಯವು ಆದೇಶಿಸಿದೆ.

ಇದನ್ನೂ ಓದಿ: Supreme Court: ಆಪ್‌ ಸಂಸದ ರಾಘವ್ ಚಡ್ಡಾಗೆ ಸುಪ್ರೀಂ ಕೋರ್ಟ್‌ ತಪರಾಕಿ, ರಾಜ್ಯಸಭಾ ಅಧ್ಯಕ್ಷರ ಕ್ಷಮೆ ಯಾಚಿಸಲು ಸೂಚನೆ

ತಂತ್ರಜ್ಞಾನ ಬಳಸಿಕೊಳ್ಳಲು ನಿರ್ದೇಶನ

ಸಂಸದರು ಹಾಗೂ ಶಾಸಕರ ವಿರುದ್ಧ ದಾಖಲಾದ ಪ್ರಕರಣಗಳ ವಿಚಾರಣೆ, ಶಿಕ್ಷೆ ಸೇರಿ ಹಲವು ವಿಷಯಗಳು ಸಾರ್ವಜನಿಕರಿಗೂ ಗೊತ್ತಾಗಬೇಕು. ಅದಕ್ಕಾಗಿ ಹೈಕೋರ್ಟ್‌ಗಳ ವೆಬ್‌ಸೈಟ್‌ಗಳಲ್ಲಿ ಇಂತಹ ಪ್ರಕರಣಗಳ ಕುರಿತು ಮಾಹಿತಿ ಇರುವ ಟ್ಯಾಬ್‌ ಅಭಿವೃದ್ಧಿಪಡಿಸಬೇಕು. ಇನ್ನು ಆಯಾ ಪ್ರಕರಣಗಳ ವಿಚಾರಣೆಗೆ ಅಗತ್ಯವಿರುವ ಮೂಲ ಸೌಕರ್ಯಗಳನ್ನು ಕೂಡ ಒದಗಿಸಬೇಕು ಎಂದು ಹೈಕೋರ್ಟ್‌ಗಳಿಗೆ ಸೂಚಿಸಿದೆ.

Exit mobile version