Site icon Vistara News

ಪೆನ್ನಾರ್ ನದಿ ನೀರು ವಿವಾದ: ನ್ಯಾಯಾಧಿಕರಣ ರಚನೆಗೆ 4 ವಾರ ಸಮಯ ಕೇಳಿದ ಕೇಂದ್ರ ಸರ್ಕಾರ, ಅಸ್ತು ಎಂದ ಸುಪ್ರೀಂಕೋರ್ಟ್​

Supreme Court

ನವ ದೆಹಲಿ: ಕರ್ನಾಟಕ ಮತ್ತು ತಮಿಳುನಾಡು ನಡುವಿನ ಪೆನ್ನಾರ್ ನದಿ (ದಕ್ಷಿಣ ಪಿನಾಕಿನಿ) ನೀರು ಹಂಚಿಕೆ ವಿವಾದ (Pennar River Dispute) ಬಗೆ ಹರಿಸುವ ಸಲುವಾಗಿ ನ್ಯಾಯಾಧಿಕರಣ ರಚಿಸುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್​ ಕಳೆದ ಡಿಸೆಂಬರ್​ನಲ್ಲಿ ನಿರ್ದೇಶನ ನೀಡಿತ್ತು. ಇದಕ್ಕಾಗಿ ಮೂರು ತಿಂಗಳ ಕಾಲಾವಧಿ ಕೊಟ್ಟಿತ್ತು. ಆದರೆ ಕೇಂದ್ರ ಸರ್ಕಾರ ಇನ್ನೂ ನಾಲ್ಕು ವಾರಗಳ ಕಾಲಾವಕಾಶ ಕೋರಿ ಸುಪ್ರೀಂಕೋರ್ಟ್​​ಗೆ ಅರ್ಜಿ ಸಲ್ಲಿಸಿದೆ. ಕೇಂದ್ರ ಸರ್ಕಾರದ ಮನವಿಗೆ ಸುಪ್ರೀಂಕೋರ್ಟ್ ಅಸ್ತು ಎಂದಿದೆ.

ಪೆನ್ನಾರ್​ ನದಿ ನೀರಿನ ಸಂಘರ್ಷ ಇತ್ಯರ್ಥದ ವಿಚಾರವನ್ನು ಇಂದು ಕೈಗೆತ್ತಿಕೊಂಡ ಸುಪ್ರೀಂಕೋರ್ಟ್​ನ ನ್ಯಾ.ಎಂ.ಆರ್.ಶಾ ಮತ್ತು ಮನೋಜ್​ ಮಿಶ್ರಾ ಅವರನ್ನೊಳಗೊಂಡ ಪೀಠಕ್ಕೆ, ಜಲಶಕ್ತಿ ಸಚಿವಾಲಯವನ್ನು ಪ್ರತಿನಿಧಿಸುವ ವಕೀಲರು ಈ ಅರ್ಜಿ ಸಲ್ಲಿಸಿದರು. ನ್ಯಾಯಾಧಿಕರಣ ರಚನೆಗೆ ಸಂಬಂಧಪಟ್ಟಂತೆ ಪ್ರಸ್ತಾವನೆ ಕೇಂದ್ರ ಕ್ಯಾಬಿನೆಟ್​​ಗೆ ಹೋಗಿದೆ. ಅಲ್ಲಿ ಅನುಮೋದನೆ ಸಿಕ್ಕ ತಕ್ಷಣ ನ್ಯಾಯಾಧಿಕರಣ ರಚಿಸಲಾಗುತ್ತದೆ ಎಂದು ಅವರು ಕೋರ್ಟ್​ಗೆ ತಿಳಿಸಿದ್ದಾರೆ.

ಇದನ್ನೂ ಓದಿ:Mekedatu Project: ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿರಲಿದೆ ಮೇಕೆದಾಟು ಯೋಜನೆ ಅನುಷ್ಠಾನ: ಡಿ.ಕೆ.ಶಿವಕುಮಾರ್‌

ಏನಿದು ಪ್ರಕರಣ?
ದಕ್ಷಿಣ ಪಿನಾಕಿನಿಯ ಉಪನದಿಯಾದ ಮಾರ್ಕಂಡೇಯ ನದಿಗೆ ಅಡ್ಡಲಾಗಿ ಕೋಲಾರ ಜಿಲ್ಲೆ ಯರಗೋಳ ಗ್ರಾಮದ ಬಳಿ ಅಣೆಕಟ್ಟು ನಿರ್ಮಿಸಲು ಕರ್ನಾಟಕ ಸರ್ಕಾರ ಮುಂದಾಗಿದೆ. ಕೋಲಾರ, ಮಾಲೂರು, ಬಂಗಾರಪೇಟೆಯ ಹಲವು ಹಳ್ಳಿಗಳು ಹಾಗೂ ಪಟ್ಟಣಗಳಿಗೆ ಕುಡಿಯುವ ನೀರು ಪೂರೈಸುವ ಯೋಜನೆ ಇದಾಗಿದೆ. ಸುಮಾರು 240 ಕೋಟಿ ರೂ. ವೆಚ್ಚದ ಅಣೆಕಟ್ಟು ಯೋಜನೆಗೆ ಕೇಂದ್ರ ಜಲಶಕ್ತಿ ಸಚಿವಾಲಯದ ಅನುಮತಿಯನ್ನೂ ಪಡೆದಿದೆ. ಆದರೆ, ಇದಕ್ಕೆ ತಮಿಳುನಾಡು ಸರ್ಕಾರ ತಕರಾರು ತೆಗೆದಿದ್ದು, ಸುಪ್ರೀಂ ಕೋರ್ಟ್‌ ಮೊರೆಹೋಗಿದೆ. ಪೆನ್ನಾರ್‌ ನದಿಯ ನೀರಿಗೆ ಅಡ್ಡಲಾಗಿ ಅಣೆಕಟ್ಟು ನಿರ್ಮಿಸುವುದು ಅಂತಾರಾಜ್ಯ ಜಲವಿವಾದ ಕಾಯ್ದೆಯ ಉಲ್ಲಂಘನೆಯಾಗುತ್ತದೆ ಎಂಬುದು ಆ ರಾಜ್ಯದ ವಾದ. ಅದಕ್ಕೆ ಪ್ರತಿಯಾಗಿ ಕರ್ನಾಟಕ ತನ್ನದೇ ವಾದ ಮಂಡಿಸಿದೆ. ಅಣೆಕಟ್ಟು ನಿರ್ಮಾಣ ಯೋಜನೆ ವೈಜ್ಞಾನಿಕವಾಗಿದ್ದು, ಕೇಂದ್ರ ಜಲಶಕ್ತಿ ಸಚಿವಾಲಯವೇ ಅನುಮತಿ ನೀಡಿದೆ ಎಂದು ಅದು ಹೇಳುತ್ತಿದೆ.

Exit mobile version