ನವದೆಹಲಿ: ತೃಣಮೂಲ ಕಾಂಗ್ರೆಸ್ ಪಕ್ಷದ (TMC) ಮಹುವಾ ಮೋಯಿತ್ರಾ (Mahuva Moitra) ಅವರನ್ನು ಸಂಸತ್ತಿನಿಂದ ಉಚ್ಚಾಟಿಸಿದ (expulsion from parliament) ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ (Supreme Court), ಲೋಕಸಭೆ ಕಾರ್ಯದರ್ಶಿ (Sabha secretary general) ಅವರಿಗೆ ನೋಟಿಸ್ (Notice) ನೀಡಿದ್ದು ಮೂರು ವಾರದೊಳಗೆ ಲಿಖಿತ ಪ್ರತಿಕ್ರಿಯೆ ನೀಡುವಂತೆ ಸೂಚಿಸಿದೆ. ಇದೇ ವೇಳೆ, ಲೋಕಸಭೆಯ ಕಲಾಪದಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಬೇಕೆಂಬ ಅರ್ಜಿದಾರರ ಮನವಿಯನ್ನು ಸುಪ್ರೀಂ ಕೋರ್ಟ್ ತಳ್ಳಿ ಹಾಕಿದೆ.
ಹಣಕ್ಕಾಗಿ ತಮ್ಮ ಸಂಸತ್ತಿನ ಲಾಗಿನ್ ಐಡಿಯನ್ನು ಉದ್ಯಮಿ ದರ್ಶನ್ ಹೀರಾನಂದಿನಿ ಅವರೊಂದಿಗೆ ಹಂಚಿಕೊಂಡಿದ್ದರು. ಈ ಕುರಿತು ಲೋಕಸಭೆಯ ನೈತಿಕ ಸಮಿತಿಯ ವಿಚಾರಣೆ ನಡೆಸಿ, ಮಹುವಾ ಅವರನ್ನು ಲೋಕಸಭೆಯಿಂದ ಉಚ್ಚಾಟನೆಗೆ ಶಿಫಾರಸು ಮಾಡಿತ್ತು. ಅದೇ ರೀತಿ, ಕಳೆದ ತಿಂಗಳು ಅವರನ್ನು ಲೋಕಸಭೆಯಿಂದ ಉಚ್ಚಾಟನೆ ಮಾಡಲಾಗಿತ್ತು. ಸಂಸತ್ತಿನ ಈ ಕ್ರಮವನ್ನು ಪ್ರಶ್ನಿಸಿ ಮಹುವಾ ಮೋಯಿತ್ರಾ ಅವರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು.
ಕಳೆದ ತಿಂಗಳು ಲೋಕಸಭೆಯಿಂದ ಉಚ್ಚಾಟನೆ ಮಾಡಿದ ಬಳಿಕ ಪ್ರತಿಕ್ರಿಯೆ ನೀಡಿದ್ದ ಮಹುವಾ ಮೋಯಿತ್ರಾ ಅವರು, ಲೋಕಸಭೆಯ ನೈತಿಕ ಸಮಿತಿಗೆ ತಮ್ಮನ್ನು ಉಚ್ಚಾಟನೆ ಮಾಡುವ ಅಧಿಕಾರವಿಲ್ಲ. ಉದ್ಯಮಿ ಹೀರಾನಂದನಿಯಿಂದ ಲಂಚ ಸ್ವೀಕರಿಸಿದ್ದೇನೆ ಎಂಬುದಕ್ಕೆ ಯಾವುದೇ ಸಾಕ್ಷ್ಯಗಳನ್ನು ಕೂಡ ನೀಡಿಲ್ಲ. ಅಲ್ಲದೇ, ಈ ಪ್ರಕರಣ ಸಂಬಂಧ ಹೀರಾನಂದನಿ ಹಾಗೂ ತಮ್ಮ ಮಾಜಿ ಸಂಗಾತಿ ಜೈ ಅನಂತ್ ದೇಹದ್ರಾಯಿ ಅವರನ್ನು ಪಾಟಿ ಸವಾಲಿಗೆ ಒಳಪಡಿಸಲು ನೈತಿಕ ಸಮಿತಿ ಅವಕಾಶ ಕಲ್ಪಿಸಿಲ್ಲ ಎಂದು ಆರೋಪಿಸಿದ್ದರು.
ಸಂಸತ್ತಿನಲ್ಲಿ ಅದಾನಿ ಗ್ರೂಪ್ ಪರವಾಗಿ ಪ್ರಶ್ನೆಗಳನ್ನು ಪೋಸ್ಟ್ ಮಾಡುವುದಕ್ಕೆ ಮಹುವಾ ಮೋಯಿತ್ರಾ ಅವರು ತಮ್ಮ ಸಂಸತ್ತಿನ ಲಾಗಿನ್ ಐಡಿಯನ್ನು ನೀಡಿದ್ದರು ಎಂದು ಹೀರಾನಂದನಿ ಅವರು ನೈತಿಕ ಸಮಿತಿಗೆ ಸಲ್ಲಿಸಿದ್ದ ಅಫಿಡವಿಟ್‌ನಲ್ಲಿ ಒಪ್ಪಿಕೊಂಡಿದ್ದರು.
ಏನಿದು ಲಂಚಕ್ಕಾಗಿ ಪ್ರಶ್ನೆ ಪ್ರಕರಣ?
ಸಂಸತ್ತಿನಲ್ಲಿ ಪ್ರಶ್ನೆಗಳನ್ನು ಕೇಳುವುದಕ್ಕಾಗಿ ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೋಯಿತ್ರಾ (MP Mahua Moitra) ಅವರು ಲಂಚ ಪಡೆದಿದ್ದಾರೆಂದು ಬಿಜೆಪಿ ಸಂಸದ ನಿಶಿಕಾಂತ್ ದುಬೆ ಅವರು ಲೋಕ ಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ಪತ್ರ ಬರೆದಿದ್ದರು. ಬಳಿಕ ಇಡೀ ಪ್ರಕರಣ ಬಯಲಾಗಿತ್ತು. ಅಲ್ಲದೇ, ಕೂಡಲೇ ಸಂಸದ ಸ್ಥಾನದಿಂದ ಅಮಾನತು ಮಾಡುವಂತೆ ಅವರು ಕೋರಿದ್ದರು. ಪ್ರಧಾನಿ ನರೇಂದ್ರ ಮೋದಿ (PM Narendra Modi) ಮತ್ತು ಅದಾನಿ ಗ್ರೂಪ್(Adani Group) ಗುರಿಯಾಗಿಸಿಕೊಂಡು ಪ್ರಶ್ನೆ ಕೇಳುವುದಕ್ಕಾಗಿ ಮಹುವಾ ಮೋಯಿತ್ರಾ ಅವರು ಉದ್ಯಮಿ ದರ್ಶನ್ ಹಿರಾನಂದನಿ (Darshan Hiranandani) ಅವರಿಂದ ಲಂಚ ಸ್ವೀಕರಿಸಿದ್ದಾರೆ ಎಂದು ಆರೋಪಿಸಿದ್ದರು.
ಈ ಸುದ್ದಿಯನ್ನೂ ಓದಿ: Mahua Moitra: ಪ್ರಶ್ನೆ ಕೇಳಲು ಲಂಚ; ತೃಣಮೂಲ ಸಂಸದೆ ಮಹುವಾ ಮೋಯಿತ್ರಾ ಲೋಕಸಭೆಯಿಂದ ಉಚ್ಚಾಟನೆ