Site icon Vistara News

ಬಾಹುಬಲಿ ಆನಂದ್​ ಮೋಹನ್​ ಬಿಡುಗಡೆ ಪ್ರಶ್ನಿಸಿ ಬಿಹಾರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ನೋಟಿಸ್​

Supreme Court Issues Notice To Bihar Government over Anand Mohan Release

#image_title

ಐಎಎಸ್​ ಅಧಿಕಾರಿಯಾಗಿದ್ದ ಜಿ.ಕೃಷ್ಣಯ್ಯ ಎಂಬುವರ ಹತ್ಯೆ ಕೇಸ್​​ನಲ್ಲಿ ಜೈಲು ಪಾಲಾಗಿದ್ದ ಮಾಜಿ ಸಂಸದ ಆನಂದ್​ ಮೋಹನ್ (Anand Mohan)​ನನ್ನು ಶಿಕ್ಷೆ ಅವಧಿ ಪೂರ್ಣಗೊಳ್ಳುವ ಮೊದಲೇ ಬಿಡುಗಡೆಗೊಳಿಸಿದ್ದನ್ನು ಪ್ರಶ್ನಿಸಿ ಬಿಹಾರ ಸರ್ಕಾರಕ್ಕೆ ಸುಪ್ರೀಂಕೋರ್ಟ್ (Supreme Court)​ ನೋಟಿಸ್​ ನೀಡಿದ್ದು, ಪ್ರತಿಕ್ರಿಯೆಯನ್ನು ಕೇಳಿದೆ. ಆನಂದ್​ ಮೋಹನ್ ಬಿಡುಗಡೆಯನ್ನು ಪ್ರಶ್ನಿಸಿ ಮೃತ ಐಎಎಸ್​ ಅಧಿಕಾರಿ ಜಿ.ಕೃಷ್ಣಯ್ಯ ಪತ್ನಿ ಉಮಾ ಕೃಷ್ಣಯ್ಯ ಅವರು ಸುಪ್ರೀಂಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ಪರಿಶೀಲನೆ ಮಾಡಿದ ಸುಪ್ರೀಂಕೋರ್ಟ್ ಇದೀಗ ಆನಂದ್​ ಮೋಹನ್​ಗೆ ಕೂಡ ಅರ್ಜಿ ಸಲ್ಲಿಸಿದ್ದು, ಪೊಲೀಸ್ ಅಧೀಕ್ಷಕನ ಮೂಲಕ ಉತ್ತರ ನೀಡುವಂತೆ ಸೂಚಿಸಿದೆ.

1994ರಲ್ಲಿ ಗೋಪಾಲ್​ಗಂಜ್ ಜಿಲ್ಲೆಯ ಮ್ಯಾಜಿಸ್ಟ್ರೇಟ್​ ಆಗಿದ್ದ ಜಿ.ಕೃಷ್ಣಯ್ಯ ಅವರ ಹತ್ಯೆ ಪ್ರಕರಣದಲ್ಲಿ ಆನಂದ್​ ಮೋಹನ್ ಅಪರಾಧ ದೃಢಪಟ್ಟ ಬಳಿಕ ವಿಚಾರಣಾ ನ್ಯಾಯಾಲಯ ಅವನಿಗೆ 2007ರಲ್ಲಿ ಮರಣದಂಡನೆ ವಿಧಿಸಿತ್ತು. ಕರ್ತವ್ಯದಲ್ಲಿದ್ದ ಸರ್ಕಾರಿ ಅಧಿಕಾರಿಯ ಹತ್ಯೆ ಮಾಡಿದ್ದ ಆರೋಪದಡಿ ಅವನಿಗೆ ಕಠಿಣ ಶಿಕ್ಷೆ ವಿಧಿಸಲಾಗಿತ್ತು. ಆದರೆ ಪಾಟ್ನಾ ಹೈಕೋರ್ಟ್​ ಆ ಶಿಕ್ಷೆಯನ್ನು ಕಡಿಮೆ ಮಾಡಿ, ಜೀವಾವಧಿ ಶಿಕ್ಷೆಯನ್ನಾಗಿ ಬದಲಿಸಿತ್ತು. ಆನಂದ್ ಮೋಹನ್​ ತನ್ನ ಬಿಡುಗಡೆಗಾಗಿ ಸುಪ್ರೀಂಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದ. ಆದರೆ ಆ ಅರ್ಜಿ ತಿರಸ್ಕೃತಗೊಂಡಿದ್ದರಿಂದ ಜೈಲಲ್ಲೇ ಉಳಿದಿದ್ದ.

2007ರಿಂದಲೂ ಸಹರ್ಸಾ ಜೈಲಿನಲ್ಲಿಯೇ ಇದ್ದ ಆನಂದ್ ಮೋಹನ್​​ನನ್ನು ಈ ವರ್ಷ ನಿತೀಶ್ ಕುಮಾರ್​ ಸರ್ಕಾರ ಬಿಡುಗಡೆ ಮಾಡಿದೆ. ಬಿಹಾರ ಜೈಲು ಕೈಪಿಡಿ 2012ರ 481 (1-a) ನಿಯಮಕ್ಕೆ 2023ರ ಏಪ್ರಿಲ್​ 10ರಂದು ತಿದ್ದುಪಡಿ ತಂದು 14-20ವರ್ಷ ಜೈಲಿನಲ್ಲಿ ಕಳೆದ ಕೈದಿಗಳ ಬಿಡುಗಡೆಗೆ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಎಲ್ಲಕ್ಕಿಂತ ಮುಖ್ಯವಾಗಿ ಕೈಪಿಡಿ 2012ರಲ್ಲಿ ಇದ್ದ ‘ಕರ್ತವ್ಯದಲ್ಲಿದ್ದ ಸರ್ಕಾರಿ ಅಧಿಕಾರಿಯ ಹತ್ಯೆ’ ಎಂಬ ವಾಕ್ಯವನ್ನು ಅಳಿಸಿ ಹಾಕಿದೆ. ಈ ಮೂಲಕ ಆನಂದ್ ಮೋಹನ್​ ಬಿಡುಗಡೆಗೊಳಿಸಿದೆ. ಆದರೆ ಆನಂದ್ ಮೋಹನ್​ನನ್ನು ಜೈಲಿಂದ ಬಿಡುಗಡೆ ಮಾಡಿದ್ದನ್ನು ಮೃತ ಐಎಎಸ್​ ಅಧಿಕಾರಿ ಜಿ. ಕೃಷ್ಣಯ್ಯನವರ ಪತ್ನಿ ತೀವ್ರವಾಗಿ ವಿರೋಧಿಸಿದ್ದಾರೆ.

ಇದನ್ನೂ ಓದಿ: ವಿಸ್ತಾರ Explainer: ಜೈಲಿನಿಂದ ಬಿಡುಗಡೆಯಾದ ಕೊಲೆ ಅಪರಾಧಿ, ಮಾಜಿ ಸಂಸದ, ʻಬಾಹುಬಲಿ’ ಯಾರಿವನು?

‘ಆನಂದ್ ಮೋಹನ್​​ರಿಗೆ ಮರಣದಂಡನೆ ಬದಲು ಜೀವಾವಧಿ ಶಿಕ್ಷೆ ನೀಡಲಾಗಿತ್ತು. ಆ ಶಿಕ್ಷೆಯನ್ನಾದರೂ ಸರಿಯಾಗಿ ನೀಡಬೇಕು. ಆದರೆ ರಾಜ್ಯ ಸರ್ಕಾರ ಆನಂದ್ ಮೋಹನ್​​ರಿಗೆ ಸಹಾಯವಾಗಲಿ, ಅವರು ಬಿಡುಗಡೆಯಾಗಲಿ ಎಂದೇ ಜೈಲು ಕೈಪಿಡಿಯಲ್ಲಿ ತಿದ್ದುಪಡಿ ಮಾಡಿದೆ. ಏಪ್ರಿಲ್​ 10ರಂದು ಮಾಡಿರುವ ತಿದ್ದುಪಡಿ ಸಾರ್ವಜನಿಕ ನೀತಿಗೆ ವಿರುದ್ದವಾಗಿದೆ. ರಾಜ್ಯ ಸರ್ಕಾರದ ನಿರಂಕುಶ ಮನೋಭಾವನೆಯನ್ನು ತೋರಿಸುತ್ತದೆ ಮತ್ತು ಒಟ್ಟಾರೆ ಕಲ್ಯಾಣ ರಾಜ್ಯದ ಪರಿಕಲ್ಪನೆಗೆ ವಿರುದ್ಧವಾಗಿದೆ’ ಎಂದು ಹೇಳಿದ್ದರು. ಈ ಮೂಲಕ ಆನಂದ್ ಮೋಹನ್​ ಬಿಡುಗಡೆಯನ್ನು ಮರುಪರಿಶೀಲನೆ ಮಾಡುವಂತೆ ಆಗ್ರಹಿಸಿದ್ದಾರೆ. ಹೀಗಾಗಿ ಸುಪ್ರೀಂಕೋರ್ಟ್​ ರಾಜ್ಯ ಸರ್ಕಾರಕ್ಕೆ ನೋಟಿಸ್ ಕೊಟ್ಟಿದೆ.

Exit mobile version