Site icon Vistara News

Rahul Gandhi: ರಾಹುಲ್ ಗಾಂಧಿ ವಿರುದ್ಧ ಮಾನಹಾನಿ ಕೇಸ್;‌ ಗುಜರಾತ್‌ ಸರ್ಕಾರಕ್ಕೆ ಸುಪ್ರೀಂ ನೋಟಿಸ್‌

Supreme Court On Rahul Gandhi Defamation Case

Supreme Court Issues Notice To Gujarat Government In Rahul Gandhi Defamation Case

ನವದೆಹಲಿ: ಮೋದಿ ಉಪನಾಮ ಹೊಂದಿರುವವರೆಲ್ಲ ಕಳ್ಳರೇ ಎಂದು ಹೇಳಿಕೆ ನೀಡಿದ ಮಾನಹಾನಿ ಪ್ರಕರಣದಲ್ಲಿ ಗುಜರಾತ್‌ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ನೋಟಿಸ್‌ ನೀಡಿದೆ. ಮಾನಹಾನಿ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಜರಾತ್‌ ಹೈಕೋರ್ಟ ತೀರ್ಪು ಪ್ರಶ್ನಿಸಿ ರಾಹುಲ್‌ ಗಾಂಧಿ (Rahul Gandhi) ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌, ಈ ಕುರಿತು ಪ್ರತಿಕ್ರಿಯೆ ನೀಡುವಂತೆ ಗುಜರಾತ್‌ ಸರ್ಕಾರ ಹಾಗೂ ರಾಹುಲ್‌ ಗಾಂಧಿ ವಿರುದ್ಧ ಅರ್ಜಿ ಸಲ್ಲಿಸಿದ ಬಿಜೆಪಿ ನಾಯಕ ಪೂರ್ಣೇಶ್‌ ಮೋದಿ ಅವರಿಗೆ ಸುಪ್ರೀಂ ಕೋರ್ಟ್‌ ನೋಟಿಸ್‌ ನೀಡಿದೆ.

ರಾಹುಲ್‌ ಗಾಂಧಿ ಪರ ಹಿರಿಯ ವಕೀಲ ಅಭಿಷೇಕ್‌ ಮನು ಸಿಂಘ್ವಿ ಹಾಗೂ ದೂರುದಾರರ ಪರ ಮಹೇಶ್‌ ಜೇಠ್ಮಲಾನಿ ವಾದ ಮಂಡಿಸಿದರು. ವಾದ-ಪ್ರತಿವಾದ ಆಲಿಸಿದ ನ್ಯಾಯಮೂರ್ತಿಗಳಾದ ಬಿ.ಆರ್.ಗವಾಯಿ ಹಾಗೂ ಪ್ರಶಾಂತ್‌ ಕುಮಾರ್‌ ಮಿಶ್ರಾ ನೇತೃತ್ವದ ನ್ಯಾಯಪೀಠವು, ಸರ್ಕಾರ ಹಾಗೂ ದೂರುದಾರರಿಗೆ ನೋಟಿಸ್‌ ನೀಡಿತು. ಹಾಗೆಯೇ, ಅಗಸ್ಟ್‌ 4ರಂದು ವಿಚಾರಣೆ ನಡೆಸುವುದಾಗಿ ತಿಳಿಸಿತು.

ಏನಿದು ಪ್ರಕರಣ?

2019ರ ಲೋಕಸಭೆ ಚುನಾವಣೆ ವೇಳೆ ಕೋಲಾರದಲ್ಲಿ ಭಾಷಣ ಮಾಡಿದ್ದ ರಾಹುಲ್ ಗಾಂಧಿ ನೀರವ್​ ಮೋದಿ, ಲಲಿತ್ ಮೋದಿಯನ್ನು ಉಲ್ಲೇಖಿಸಿ ಪ್ರಧಾನಿ ನರೇಂದ್ರ ಮೋದಿಯವರನ್ನು ವ್ಯಂಗ್ಯ ಮಾಡಿದ್ದರು. ಮೋದಿ ಎಂಬ ಉಪನಾಮ ಹೊಂದಿರುವವರೆಲ್ಲ ಕಳ್ಳರೇ ಎಂದಿದ್ದರು. ರಾಹುಲ್ ಗಾಂಧಿ ಈ ಮಾತಿನ ವಿರುದ್ಧ ಬಿಜೆಪಿ ನಾಯಕ ಸೂರತ್ ಕೋರ್ಟ್​​ನಲ್ಲಿ ಕ್ರಿಮಿನಲ್​ ಮಾನನಷ್ಟ ಮೊಕದ್ದಮೆ ಹೂಡಿದ್ದರು. ವಿಚಾರಣೆ ನಡೆಸಿದ್ದ ಜಿಲ್ಲಾ ಮ್ಯಾಜಿಸ್ಟ್ರೇಟ್​ ಎಚ್​.ಎಚ್​.ವರ್ಮಾ ಅವರು ಮಾರ್ಚ್ 23ರಂದು ‘ರಾಹುಲ್ ಗಾಂಧಿ ದೋಷಿ’ ಎಂದು ತೀರ್ಪು ನೀಡಿದ್ದರು. 2ವರ್ಷ ಜೈಲು ಶಿಕ್ಷೆ ವಿಧಿಸಿದ್ದರು.

ರಾಹುಲ್‌ ಗಾಂಧಿ ಅನರ್ಹ

ರಾಹುಲ್‌ ಗಾಂಧಿ ಶಿಕ್ಷೆಗೆ ಗುರಿಯಾದ ಬೆನ್ನಲ್ಲೇ ಅವರು ಲೋಕಸಭೆ ಸದಸ್ಯತ್ವದಿಂದ ಅನರ್ಹಗೊಂಡಿದ್ದರು. ಈ ಶಿಕ್ಷೆಗೆ ತಡೆ ನೀಡುವಂತೆ ರಾಹುಲ್ ಗಾಂಧಿ ಗುಜರಾತ್ ಸೆಷನ್ಸ್ ಕೋರ್ಟ್​ಗೆ ಮನವಿ ಸಲ್ಲಿಸಿ, ಅಲ್ಲಿ ಹಿನ್ನಡೆಯಾದ ಬಳಿಕ ಗುಜರಾತ್ ಹೈಕೋರ್ಟ್​ಗೆ ಮೇಲ್ಮನವಿ ಸಲ್ಲಿಸಿದರು. ಜುಲೈ 7ರಂದು ಗುಜರಾತ್ ನ್ಯಾಯಾಲಯ ರಾಹುಲ್ ಗಾಂಧಿ ಅರ್ಜಿಯನ್ನು ತಿರಸ್ಕಾರ ಮಾಡಿತ್ತು. ರಾಹುಲ್ ಗಾಂಧಿ ದೋಷಿ ಎಂಬ ಸೂರತ್ ಕೋರ್ಟ್​ನ ತೀರ್ಪನ್ನು ಎತ್ತಿ ಹಿಡಿದಿತ್ತು.

ಇದನ್ನೂ ಓದಿ: Rahul Gandhi: ನನ್ನ ಮುಖದಲ್ಲಿ ಮತ್ತೆ ನಗು ಮೂಡಿಸಿದ ವ್ಯಕ್ತಿ ನೀವು ಎಂದು ರಾಹುಲ್‌ ಗಾಂಧಿಗೆ ರಮ್ಯಾ ಸ್ಪೆಷಲ್‌ ವಿಶ್‌!

ಮೋದಿ ಉಪನಾಮ ಹೊಂದಿದವರಿಗೆ ಮಾಡಿದ ಅಪಮಾನದಡಿ ರಾಹುಲ್ ಗಾಂಧಿ ವಿರುದ್ಧ ದೇಶಾದ್ಯಂತ ಸುಮಾರು 10 ಕೇಸ್​ಗಳು ದಾಖಲಾಗಿವೆ. ಕೆಲ ದಿನಗಳ ಹಿಂದೆ ತೀರ್ಪು ಕೊಡುವ ವೇಳೆ ಗುಜರಾತ್ ಹೈಕೋರ್ಟ್​ ಜಡ್ಜ್​ ಹೇಮಂತ್ ಪ್ರಾಚಕ್​ ಅವರು ಇದನ್ನೂ ಉಲ್ಲೇಖಿಸಿದ್ದರು. ಅಲ್ಲದೆ, ಕೆಳ ನ್ಯಾಯಾಲಯ ಕೊಟ್ಟ ತೀರ್ಪು ಸೂಕ್ತವಾಗಿದೆ. ಕಾನೂನಾತ್ಮಕವಾಗಿದೆ. ರಾಹುಲ್ ಗಾಂಧಿಯವರಿಗೆ ವಿಧಿಸಲಾದ ಶಿಕ್ಷೆಗೆ ತಡೆ ನೀಡಲು ಯಾವುದೇ ಸೂಕ್ತವಾದ ಕಾರಣ ಸಿಗುತ್ತಿಲ್ಲ, ಯಾವ ಆಧಾರದ ಮೇಲೆ ತಡೆ ನೀಡಬೇಕು? ಎಂದು ಪ್ರಶ್ನಿಸಿದ್ದರು.

Exit mobile version