ನವದೆಹಲಿ: ಶಿವಸೇನೆಯ ಹೆಸರು ಹಾಗೂ ಬಿಲ್ಲು ಮತ್ತು ಬಾಣದ ಚಿಹ್ನೆ ಪ್ರಕರಣಕ್ಕೆ (Shiv Sena Symbol Row) ಸಂಬಂಧಿಸಿದಂತೆ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಹಾಗೂ ಚುನಾವಣೆ ಆಯೋಗಕ್ಕೆ ಸುಪ್ರೀಂ ಕೋರ್ಟ್ ನೋಟಿಸ್ ನೀಡಿದೆ. ಚುನಾವಣೆ ಆಯೋಗವು ಏಕನಾಥ್ ಶಿಂಧೆ ಬಣಕ್ಕೆ ಶಿವಸೇನೆ ಹೆಸರು ಹಾಗೂ ಚಿಹ್ನೆ ನೀಡಿರುವುದನ್ನು ಪ್ರಶ್ನಿಸಿ ಉದ್ಧವ್ ಠಾಕ್ರೆ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯವು, ನೋಟಿಸ್ ನೀಡಿದೆ.
“ಉದ್ಧವ್ ಠಾಕ್ರೆ ಸಲ್ಲಿಸಿದ ಅರ್ಜಿಗೆ ಸಂಬಂಧಿಸಿದಂತೆ ಚುನಾವಣೆ ಆಯೋಗ ಹಾಗೂ ಏಕನಾಥ್ ಶಿಂಧೆ ಅವರು ಎರಡು ವಾರದಲ್ಲಿ ಪ್ರತಿಕ್ರಿಯೆ ನೀಡಬೇಕು” ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ ನೇತೃತ್ವದ ನ್ಯಾಯಪೀಠ ನಿರ್ದೇಶನ ನೀಡಿತು. ಏಕನಾಥ್ ಶಿಂಧೆ ಬಣವೇ ನಿಜವಾದ ಶಿವಸೇನೆ ಎಂದು ಫೆಬ್ರವರಿ ೧೭ರಂದು ಚುನಾವಣೆ ಆಯೋಗ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಉದ್ಧವ್ ಠಾಕ್ರೆ ಅವರು ಫೆಬ್ರವರಿ ೨೦ರಂದು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು.
ಉದ್ಧವ್ ಠಾಕ್ರೆಗೆ ತುಸು ಹಿನ್ನಡೆ
ಚುನಾವಣೆ ಆಯೋಗದ ತೀರ್ಮಾನಕ್ಕೆ ತಡೆಯಾಜ್ಞೆ ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿದ ಕಾರಣ ಉದ್ಧವ್ ಠಾಕ್ರೆ ಅವರಿಗೆ ತುಸು ಹಿನ್ನಡೆಯಾದಂತಾಗಿದೆ. ಹಾಗೆಯೇ, ಶಿವಸೇನೆಯ ಬ್ಯಾಂಕ್ ಖಾತೆಗಳು, ಆಸ್ತಿಗಳು, ಸಂಸತ್ ಹಾಗೂ ವಿಧಾನಸಭೆಯಲ್ಲಿರುವ ಪಕ್ಷದ ಕಚೇರಿಗಳನ್ನು ಏಕನಾಥ್ ಶಿಂಧೆ ಬಣವು ಸ್ವಾಧೀನಪಡಿಸಿಕೊಳ್ಳುವುದನ್ನು ತಡೆಯಲು ಕೂಡ ಸರ್ವೋಚ್ಚ ನ್ಯಾಯಾಲಯ ನಿರಾಕರಿಸಿದೆ.
ಇದನ್ನೂ ಓದಿ: Eknath Shinde: ಏಕನಾಥ್ ಶಿಂಧೆಗೆ ಜಯ, ಶಿವಸೇನೆಯ ಬಿಲ್ಲು-ಬಾಣ ಗುರುತು ಶಿಂಧೆ ಬಣಕ್ಕೆ, ಉದ್ಧವ್ ಠಾಕ್ರೆಗೆ ಮುಖಭಂಗ