ನವ ದೆಹಲಿ: ಚುನಾವಣೆಗೆ ಮುಂಚಿತವಾಗಿ ಪಕ್ಷಗಳು ಘೋಷಿಸುವ ಉಚಿತ ಕೊಡುಗೆಗಳ (Freebies) ಬಗ್ಗೆ ಶುಕ್ರವಾರ ಸುಪ್ರೀಂ ಕೋರ್ಟ್ (Supreme Court) ಅಸಮಾಧಾನ ವ್ಯಕ್ತಪಡಿಸಿದೆ. ಈ ಕುರಿತು ಮಧ್ಯಪ್ರದೇಶ ಮತ್ತು ರಾಜಸ್ಥಾನ ಸರ್ಕಾರಗಳಿಗೆ ನೋಟಿಸ್ ನೀಡಿದೆ. ‘ಉಚಿತ ವಿತರಣೆ’ ಘೋಷಣೆಯ ವಿರುದ್ಧ ಸಲ್ಲಿಸಲಾದ ಅರ್ಜಿಗೆ ಸಂಬಂಧಿಸಿದ ಅರ್ಜಿಯನ್ನು ಪರಿಶೀಲಿಸಿದ ಬಳಿಕ ಕೋರ್ಟ್ ಈ ನೋಟಿಸ್ ನೀಡಿದೆ.
ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಧನಂಜಯ ವೈ. ಚಂದ್ರಚೂಡ್ ನೇತೃತ್ವದ ನ್ಯಾಯಪೀಠವು ಕೇಂದ್ರ, ಭಾರತದ ಚುನಾವಣಾ ಆಯೋಗ (ಇಸಿಐ) ಮತ್ತು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾಕ್ಕೂ ಈ ಕುರಿತು ನೋಟಿಸ್ ಜಾರಿ ಮಾಡಿದೆ. ನ್ಯಾಯಮೂರ್ತಿಗಳಾದ ಜೆ.ಬಿ.ಪರ್ಡಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ನ್ಯಾಯಪೀಠದ ಮುಂದೆ ವಾದಿಸಿದ ಅರ್ಜಿದಾರರ ವಕೀಲರು, “ಚುನಾವಣೆಗೆ ಮುಂಚಿತವಾಗಿ ಸರ್ಕಾರ ಹಣವನ್ನು ವಿತರಿಸುವುದಕ್ಕಿಂತ ಘೋರ ಸಂಗತಿ ಬೇರೊಂದಿಲ್ಲ” ಎಂದು ವಾದಿಸಿದರು. ಚುನಾವಣೆ ಸಂದರ್ಭದಲ್ಲಿ ಘೋಷಿಸುವ ಉಚಿತ ಕೊಡುಗೆಗಳ ವಿಷಯವನ್ನು ಪ್ರಸ್ತಾವಿಸಿದ ವಕೀಲ ಮತ್ತು ಬಿಜೆಪಿ ಮುಖಂಡ ಅಶ್ವಿನಿ ಉಪಾಧ್ಯಾಯ ಅವರ ಮನವಿಯನ್ನೂ ಇದರೊಂದಿಗೆ ಸೇರಿಸಲಾಗಿದೆ.
ಮತದಾರರಿಗೆ ಆಮಿಷ ಒಡ್ಡುವ ಉಚಿತ ಘೋಷಣೆ ಅಥವಾ ಹಂಚಲಾಗುವ ದುಡ್ಡನ್ನು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 171 ಬಿ ಮತ್ತು 171 ಸಿ ಅಡಿಯಲ್ಲಿ ಶಿಕ್ಷಾರ್ಹ ಅಪರಾಧಗಳಾದ ʼಲಂಚʼ ಮತ್ತು ʼಅನಗತ್ಯ ಪ್ರಭಾವʼಕ್ಕೆ ಸಮನಾಗಿದೆ ಎಂದು ಘೋಷಿಸಲು ಮಧ್ಯಪ್ರದೇಶದ ನಿವಾಸಿ ಭಟ್ಟುಲಾಲ್ ಜೈನ್ ಅರ್ಜಿ ಸಲ್ಲಿಸಿದ್ದರು. ಇದನ್ನು ನ್ಯಾಯಾಲಯ ವಿಚಾರಣೆ ನಡೆಸಿತು. ಸಾರ್ವಜನಿಕ ಉದ್ದೇಶದ ಹೆಸರಿನಲ್ಲಿ ನಿಧಿಯನ್ನು ದುರುಪಯೋಗಪಡಿಸಿಕೊಳ್ಳದಂತೆ ರಾಜ್ಯಗಳಿಗೆ ನಿರ್ದೇಶನ ನೀಡುವಂತೆ ಅವರು ಮನವಿ ಮಾಡಿದ್ದಾರೆ.
ಚುನಾವಣೆಯ ಮೊದಲು ಎಲ್ಲಾ ರೀತಿಯ ಭರವಸೆಗಳನ್ನು ನೀಡಲಾಗುತ್ತದೆ. ಇದಕ್ಕೆ ನಿಯಂತ್ರಣ ಹೇರಲು ಸಾಧ್ಯವಿಲ್ಲ ಎಂದು ಸಿಜೆಐ ಚಂದ್ರಚೂಡ್ ಅಭಿಪ್ರಾಯಪಟ್ಟರು. ಅರ್ಜಿಯು ಮಧ್ಯ ಪ್ರದೇಶ ಸರ್ಕಾರಕ್ಕೆ ಸಂಬಂಧಿಸಿದ್ದಾದ್ದರಿಂದ ಅಲ್ಲಿನ ಹೈಕೋರ್ಟ್ ಅನ್ನು ಸಂಪರ್ಕಿಸಿ ಎಂದು ನ್ಯಾಯಪೀಠ ಸೂಚಿಸಿದೆ.
ಇದಕ್ಕೆ ಪ್ರತಿಕ್ರಿಯಿಸಿದ ಅರ್ಜಿದಾರರ ಪರ ಹಾಜರಾದ ವಕೀಲರಾದ ತ್ರಿಪುರಾರಿ ರೇ ಮತ್ತು ವರುಣ್ ಠಾಕೂರ್, ʼʼಅರ್ಜಿಯು ರಾಜಸ್ಥಾನದ ವಿರುದ್ಧವೂ ಕ್ರಮಕ್ಕೆ ಮನವಿ ಮಾಡಿದೆʼʼ ಎಂದು ತಿಳಿಸಿದರು. ಅಲ್ಲದೆ ಅವರು, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ದತ್ತಾಂಶವಾದ ಈ ವರ್ಷದ ಮಾರ್ಚ್ 31ರ ವೇಳೆಗೆ ಮಧ್ಯಪ್ರದೇಶ ಮತ್ತು ರಾಜಸ್ಥಾನ ಕ್ರಮವಾಗಿ 3.78 ಲಕ್ಷ ಕೋಟಿ ರೂ. ಮತ್ತು 5.37 ಲಕ್ಷ ಕೋಟಿ ರೂ.ಗಳನ್ನು ದಾಟಿದ ಬಾಕಿ ಸಾಲದ ವಿವರಗಳನ್ನು ಹಾಜರುಪಡಿಸಿದರು.
ತೆರಿಗೆದಾರರ ಮೇಲೆ ಹೊರೆ
ʼʼಉಚಿತ ಕೊಡುಗೆಗಳನ್ನು ಘೋಷಿಸಿರುವ ಸರ್ಕಾರ ಇದಕ್ಕಾಗಿ ಹಣವನ್ನು ಎಲ್ಲಿಂದ ಹೊಂದಿಸಲಿದೆ?ʼʼ ಎಂದು ಅರ್ಜಿದಾರರು ಪ್ರಶ್ನಿಸಿದರು. “ಉಚಿತ ಕೊಡುಗೆಗಳು ಚುನಾವಣೆಯ ಆರು ತಿಂಗಳ ಮೊದಲು ಪ್ರಾರಂಭವಾಗುತ್ತದೆ. ಅಂತಿಮವಾಗಿ ಹೊರೆ ತೆರಿಗೆದಾರರ ಮೇಲೆ ಬೀಳುತ್ತದೆʼʼ ಎಂದಿದ್ದಾರೆ.
ಮಧ್ಯ ಪ್ರದೇಶ ಸರ್ಕಾರ ಜೂನ್‌ನಲ್ಲಿ ಲಾಡ್ಲಿ ಬೆಹ್ನಾ ಯೋಜನೆ ಘೋಷಿಸಿದೆ. ಯೋಜನೆ ಮೂಲಕ ಎಲ್ಲಾ ವಿವಾಹಿತ ಮಹಿಳೆಯರಿಗೆ ಪ್ರತಿ ತಿಂಗಳು 1,000 ರೂ. ನೀಡುವುದಾಗಿ ರಾಜ್ಯ ಸರ್ಕಾರ ಪ್ರಕಟಿಸಿದೆ. ಇದೀಗ ಆ ಮೊತ್ತವನ್ನು 3,000 ರೂ.ಗೆ ಹೆಚ್ಚಿಸಲಾಗಿದೆ. ರಾಜಸ್ಥಾನ ಸರ್ಕಾರ ಮಹಿಳೆಯರಿಗೆ ಉಚಿತ ಸ್ಮಾರ್ಟ್ ಫೋನ್, 100 ಯೂನಿಟ್ ಉಚಿತ ವಿದ್ಯುತ್ ಮತ್ತು ಎಲ್‌ಪಿಜಿ ಸಿಲಿಂಡರ್‌ಗೆ ರಿಯಾಯಿತಿ ಘೋಷಿಸಿದೆ.
ಇದನ್ನೂ ಓದಿ: PM Narendra Modi: ಪ್ರಧಾನಿ ಹತ್ಯೆ, ಮೋದಿ ಸ್ಟೇಡಿಯಂ ಸ್ಫೋಟ ಬೆದರಿಕೆ, ₹500 ಕೋಟಿಗೆ ಬೇಡಿಕೆ! ಯಾರು ಬೆದರಿಕೆ ಒಡ್ಡಿದವರು?
ಈ ಬಗ್ಗೆ ಮಾತನಾಡಿದ ಅರ್ಜಿದಾರರು, “ವಿಧಾನಸಭೆಯ ಅನುಮೋದನೆಯಿಲ್ಲದೆ ಯಾವುದೇ ಸರ್ಕಾರವು ಉಚಿತ ವಿದ್ಯುತ್, ಉಚಿತ ನೀರು ಅಥವಾ ಸಾಲ ಮನ್ನಾವನ್ನು ಘೋಷಿಸಲು ಸಾಧ್ಯವಿಲ್ಲ. ಅಂತಹ ಯೋಜನೆಗಳನ್ನು ಘೋಷಿಸುವ ಮೊದಲು ಸರ್ಕಾರಗಳು ಮೊದಲು ನೀಲನಕ್ಷೆಯನ್ನು ಸಲ್ಲಿಸಬೇಕು ಮತ್ತು ವಿಧಾನಸಭೆಯಿಂದ ಅನುಮೋದನೆ ಪಡೆಯಬೇಕು. ಹಣವು ತೆರಿಗೆದಾರರಿಗೆ ಸೇರಿರುವುದರಿಂದ, ಅದರ ಬಳಕೆಯ ಮೇಲ್ವಿಚಾರಣೆ ಮಾಡುವ ಹಕ್ಕನ್ನು ಅವರು ಹೊಂದಿರಬೇಕುʼʼ ಎಂದಿದ್ದಾರೆ.
4 ವಾರಗಳ ಕಾಲಾವಕಾಶ
ತಮ್ಮ ಪ್ರತಿಕ್ರಿಯೆಗಳನ್ನು ಸಲ್ಲಿಸಲು ನ್ಯಾಯಾಲಯವು ಕೇಂದ್ರ ಮತ್ತು ಚುನಾವಣಾ ಆಯೋಗದೊಂದಿಗೆ ಎರಡು ರಾಜ್ಯಗಳಿಗೆ ನಾಲ್ಕು ವಾರಗಳ ಕಾಲಾವಕಾಶ ನೀಡಿದೆ. ಅಶ್ವಿನಿ ಉಪಾಧ್ಯಾಯ ಅವರ ಮನವಿಯೊಂದಿಗೆ ಈ ವಿಷಯದ ವಾದವನ್ನು ಆಲಿಸುವಂತೆ ನಿರ್ದೇಶಿಸಿದೆ.