ನವದೆಹಲಿ: ಅತ್ಯಾಚಾರ ಪ್ರಕರಣಗಳಲ್ಲಿ ಸಂತ್ರಸ್ತರ ವೈದ್ಯಕೀಯ ಪರೀಕ್ಷೆ ನಡೆಸುವ ‘ಟು ಫಿಂಗರ್ ಟೆಸ್ಟ್’ (Two Finger Test) ಅನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ. ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯನ್ನು ಖುಲಾಸೆಗೊಳಿಸಿದ ಪ್ರಕರಣದ ವಿಚಾರಣೆ ನಡೆಸುವ ವೇಳೆ ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ್ ಹಾಗೂ ಹಿಮಾ ಕೊಹ್ಲಿ ನೇತೃತ್ವದ ನ್ಯಾಯಪೀಠವು, “ಹೆಣ್ಣುಮಕ್ಕಳ ಘನತೆ ಹಾಗೂ ಖಾಸಗಿತನಕ್ಕೆ ಟು ಫಿಂಗರ್ ಟೆಸ್ಟ್ ಧಕ್ಕೆ ತರುವಂತಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿತು.
“ಅತ್ಯಾಚಾರ ಹಾಗೂ ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ಹೆಣ್ಣುಮಕ್ಕಳಿಗೆ ಟು ಫಿಂಗರ್ ಟೆಸ್ಟ್ ಮಾಡುವುದೇ ಅಸಮಂಜಸ. ಇಂತಹ ಅವೈಜ್ಞಾನಿಕ ಪದ್ಧತಿಯು ಸಮಾಜದಲ್ಲಿದೆ ಎಂಬುದೇ ಖೇದಕರ. ಹಾಗಾಗಿ, ಕೇಂದ್ರ ಹಾಗೂ ಆಯಾ ರಾಜ್ಯ ಸರ್ಕಾರಗಳು ದೇಶದಲ್ಲಿ ಟು ಫಿಂಗರ್ ಟೆಸ್ಟ್ ಕೈಗೊಳ್ಳುವಂತಿಲ್ಲ. ಸರ್ಕಾರಿ ಹಾಗೂ ಖಾಸಗಿ ಕಾಲೇಜುಗಳಲ್ಲೂ ಇಂತಹ ಪರೀಕ್ಷೆ ನಡೆಸದಂತೆ ಕ್ರಮ ತೆಗೆದುಕೊಳ್ಳಬೇಕು. ಹಾಗೊಂದು ವೇಳೆ ಕೈಗೊಂಡರೆ ಅನುಚಿತ ವರ್ತನೆ ಪ್ರಕರಣದಲ್ಲಿ ದೋಷಿ ಎಂದು ತೀರ್ಪು ಪ್ರಕಟಿಸಲಾಗುವುದು” ಎಂಬುದಾಗಿ ಪೀಠವು ಎಚ್ಚರಿಕೆ ನೀಡಿದೆ.
ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಅಧೀನ ನ್ಯಾಯಾಲಯವು ವ್ಯಕ್ತಿಯೊಬ್ಬನನ್ನು ಅಪರಾಧಿ ಎಂದು ತೀರ್ಪು ನೀಡಿತ್ತು. ಆದರೆ, ಈ ತೀರ್ಪನ್ನು ಜಾರ್ಖಂಡ್ ಹೈಕೋರ್ಟ್ ತಳ್ಳಿಹಾಕಿ, ಆತ ನಿರ್ದೋಷಿ ಎಂದು ತೀರ್ಪು ನೀಡಿತ್ತು. ಈಗ ಸುಪ್ರೀಂ ಕೋರ್ಟ್ ಜಾರ್ಖಂಡ್ ಹೈಕೋರ್ಟ್ ತೀರ್ಪನ್ನು ತಳ್ಳಿ ಹಾಕಿದೆ. ವ್ಯಕ್ತಿಯನ್ನು ಅಪರಾಧಿ ಎಂದು ತೀರ್ಪು ನೀಡಿದೆ.
ಇದನ್ನೂ ಓದಿ | Home Tuition Class | ಮಂಡ್ಯ ಬಾಲಕಿ ಅತ್ಯಾಚಾರ ಬೆನ್ನಲ್ಲೇ ಅನಧಿಕೃತ ಟ್ಯೂಷನ್‌ಗೆ ಬ್ರೇಕ್; ಶಿಕ್ಷಣ ಇಲಾಖೆಯ ಹೊಸ ರೂಲ್ಸ್