ನವದೆಹಲಿ: ನಕಲಿ ಸುದ್ದಿಗಳ ಹಾವಳಿ ತಡೆಗಾಗಿ ಕೇಂದ್ರ ಸರ್ಕಾರವು (Central Government) ಸ್ಥಾಪಿಸಿದ ಪ್ರೆಸ್ ಇನ್ಫಾರ್ಮೇಶನ್ ಬ್ಯೂರೊದ (Press Information Bureau) ಫ್ಯಾಕ್ಟ್‌ಚೆಕ್ (PIB Fact Check) ಘಟಕಕ್ಕೆ ಸುಪ್ರೀಂ ಕೋರ್ಟ್ (Supreme Court) ಗುರುವಾರ (ಮಾರ್ಚ್ 21) ತಡೆಯಾಜ್ಞೆ ನೀಡಿದೆ. ಫ್ಯಾಕ್ಟ್ ಚೆಕ್ ಘಟಕದ ಕುರಿತು ಬುಧವಾರವಷ್ಟೇ (ಮಾರ್ಚ್ 20) ಅಧಿಸೂಚನೆ ಹೊರಡಿಸಿದ್ದ ಕೇಂದ್ರ ಸರ್ಕಾರಕ್ಕೆ ಇದರಿಂದ ಹಿನ್ನಡೆಯಾಗಿದೆ.
ಫ್ಯಾಕ್ಟ್ ಚೆಕ್ ಘಟಕದ ಸ್ಥಾಪನೆ ಪ್ರಶ್ನಿಸಿ ಕುನಾಲ್ ಕಮ್ರಾ ಹಾಗೂ ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ತ್ರಿಸದಸ್ಯ ನ್ಯಾಯಪೀಠವು, ಫ್ಯಾಕ್ಟ್‌ಚೆಕ್ ಘಟಕಕ್ಕೆ ತಡೆಯಾಜ್ಞೆ ನೀಡಿತು. “ಫ್ಯಾಕ್ಟ್‌ಚೆಕ್ ಘಟಕದಿಂದ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆಯಾಗುತ್ತದೆ. ಹಾಗಾಗಿ, ಘಟಕಕ್ಕೆ ತಡೆಯಾಜ್ಞೆ ನೀಡಲಾಗುತ್ತಿದೆ” ಎಂದು ನ್ಯಾಯಪೀಠ ಸ್ಪಷ್ಟಪಡಿಸಿತು.
The Chief Justice led bench of the Supreme Court has STAYED the Central Government's notification of a "Fact-Check Unit"
— Dr Ranjan (@AAPforNewIndia) March 21, 2024
FCU was introduced with the intention of enforcing BJP Propaganda and curtailing Freedom of Speech on Online Platforms during the Election Campaign.
ಫ್ಯಾಕ್ಟ್ ಚೆಕ್ ಘಟಕದ ಸ್ಥಾಪನೆ ಪ್ರಶ್ನಿಸಿ ಕುನಾಲ್ ಕಮ್ರಾ ಹಾಗೂ ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ ಸಲ್ಲಿಸಿದ ಅರ್ಜಿಯನ್ನು ಬಾಂಬೆ ಹೈಕೋರ್ಟ್ ತಿರಸ್ಕರಿಸಿತ್ತು. ಕೇಂದ್ರ ಸರ್ಕಾರವು ಫ್ಯಾಕ್ಟ್ ಚೆಕ್ ಘಟಕ ಸ್ಥಾಪನೆಗೆ ತಡೆ ನೀಡಬೇಕು ಎಂದು ಮೊದಲೇ ಅರ್ಜಿ ಸಲ್ಲಿಸಲಾಗಿತ್ತು. ಆದರೆ, ಫ್ಯಾಕ್ಟ್ ಚೆಕ್ ಘಟಕ ಸ್ಥಾಪನೆಗೆ ಬಾಂಬೆ ಹೈಕೋರ್ಟ್ ತಡೆಯಾಜ್ಞೆ ನೀಡಿರಲಿಲ್ಲ. ಈಗ ಬಾಂಬೆ ಹೈಕೋರ್ಟ್ ತೀರ್ಪನ್ನು ಸುಪ್ರೀಂ ಕೋರ್ಟ್ ತಳ್ಳಿಹಾಕಿದೆ.
“ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವಾಲಯದ ಅಡಿಯಲ್ಲಿ ಪಿಐಬಿ ಫ್ಯಾಕ್ಟ್‌ಚೆಕ್ ಘಟಕವನ್ನು ತರಲಾಗಿದೆ. 2021ರ ಮಾಹಿತಿ ತಂತ್ರಜ್ಞಾನ ನಿಯಮಗಳ (IT Rules) ಅಡಿಯಲ್ಲಿ ಫ್ಯಾಕ್ಟ್‌ಚೆಕ್ ಘಟಕವು ಕಾರ್ಯನಿರ್ವಹಿಸಲಿದೆ” ಎಂದು ಕೇಂದ್ರ ಸರ್ಕಾರದ ಅಧಿಸೂಚನೆ ತಿಳಿಸಿತ್ತು. ಈಗಾಗಲೇ ಪಿಐಬಿ ಫ್ಯಾಕ್ಟ್‌ಚೆಕ್ ಘಟಕವಿದ್ದು, ಇದನ್ನು ಈಗ ಸರ್ಕಾರವು ಐಟಿ ನಿಯಮಗಳ ಅಡಿಯಲ್ಲಿ ಜಾರಿಗೆ ತಂದಿದೆ. ನಕಲಿ ಸುದ್ದಿಗಳ ಹಾವಳಿ ತಡೆಯುವ ಜತೆಗೆ, ಜನರಿಗೆ ಅಸಲಿ ಸುದ್ದಿಗಳು ಯಾವವು ಎಂಬುದನ್ನು ತಿಳಿಸುವುದು ಫ್ಯಾಕ್ಟ್‌ಚೆಕ್ ಘಟಕದ ಪ್ರಮುಖ ಉದ್ದೇಶವಾಗಿದೆ.
ಇದನ್ನೂ ಓದಿ: PIB Fact Check: ಕೇಂದ್ರದಿಂದ ಬಂತು ಫ್ಯಾಕ್ಟ್‌ಚೆಕ್ ಘಟಕ; ಸುಳ್ಳು ಸುದ್ದಿ ಹರಡಿದರೆ ಹುಷಾರ್!
ಫ್ಯಾಕ್ಟ್ ಚೆಕ್ ಜಾರಿ ಉದ್ದೇಶ ?
- ಕೇಂದ್ರ ಸರ್ಕಾರಕ್ಕೆ ಸಂಬಂಧಿಸಿದ ಕುರಿತು ಸುಳ್ಳು ಸುದ್ದಿ ಹರಡಿದರೆ, ಕೂಡಲೇ ಫ್ಯಾಕ್ಟ್‌ಚೆಕ್ ಮೂಲಕ ಸ್ಪಷ್ಟನೆ
- ಫೇಸ್ಬುಕ್, ಎಕ್ಸ್ (ಟ್ವಿಟರ್) ಸೇರಿ ಯಾವುದೇ ಜಾಲತಾಣಗಳಲ್ಲಿ ಪಸರಿಸುವ ಮಾಹಿತಿ ಮೇಲೆ ವಿಶೇಷ ನಿಗಾ
- ಫ್ಯಾಕ್ಟ್‌ಚೆಕ್ ಮಾಡಿದ ಬಳಿಕ ಆಯಾ ಜಾಲತಾಣಗಳು ಪೋಸ್ಟ್ಗಳನ್ನು ಡಿಲೀಟ್ ಮಾಡಬೇಕು
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ