ನವದೆಹಲಿ: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಒಕ್ಕೂಟವನ್ನು ಸೋಲಿಸುವ ದೃಷ್ಟಿಯಿಂದ 26 ಪಕ್ಷಗಳು ಒಗ್ಗೂಡಿ ರಚಿಸಿರುವ ಇಂಡಿಯಾ (I.N.D.I.A= ಇಂಡಿಯನ್ ನ್ಯಾಷನಲ್ ಡೆವಲಪ್‌ಮೆಂಟಲ್ ಇನ್‌ಕ್ಲುಸಿವ್ ಅಲಯನ್ಸ್) ಎಂಬ ಒಕ್ಕೂಟದ (I.N.D.I.A Alliance) ಹೆಸರನ್ನು ನಿಷೇಧಿಸಬೇಕು ಎಂದು ಸಲ್ಲಿಸಲಾದ ಅರ್ಜಿಯ ವಿಚಾರಣೆಗೆ ಸುಪ್ರೀಂ ಕೋರ್ಟ್ ನಿರಾಕರಿಸಿದೆ.
ಒಕ್ಕೂಟಕ್ಕೆ ಇಟ್ಟಿರುವ ‘ಇಂಡಿಯಾʼ ಹೆಸರನ್ನು ನಿಷೇಧಿಸಬೇಕು ಎಂಬುದಾಗಿ ಸಲ್ಲಿಸಿದ ಅರ್ಜಿಯ ಕುರಿತು ಸುಪ್ರೀಂ ಕೋರ್ಟ್, “ಸಾರ್ವಜನಿಕ ಪ್ರಚಾರವನ್ನು ಗಿಟ್ಟಿಸಿಕೊಳ್ಳಲು ಇಂತಹ ಅರ್ಜಿಯನ್ನು ಸಲ್ಲಿಸಲಾಗಿದೆ. ಹಾಗಾಗಿ, ಈ ಅರ್ಜಿಯನ್ನು ವಿಚಾರಣೆ ನಡೆಸುವುದಿಲ್ಲ. ಅರ್ಜಿದಾರರು ಬೇಕಾದರೆ ಚುನಾವಣೆ ಆಯೋಗಕ್ಕೆ ಅರ್ಜಿ ಸಲ್ಲಿಸಲಿ” ಎಂದು ಸ್ಪಷ್ಟಪಡಿಸಿತು. ಇದಾದ ಬಳಿಕ ಅರ್ಜಿದಾರರು ಅರ್ಜಿ ಹಿಂಪಡೆದರು.
ಹೈಕೋರ್ಟ್‌ಗೂ ಅರ್ಜಿ
ಈಗಾಗಲೇ, ಇಂಡಿಯಾ ಎಂಬ ಹೆಸರಿನ ಒಕ್ಕೂಟದ ವಿರುದ್ಧ ಈಗಾಗಲೇ ಭಾರಧ್ವಾಜ್ ಎಂಬುವವರು ದೆಹಲಿ ಹೈಕೋರ್ಟ್‌ಗೆ ಪಿಐಎಲ್ ಸಲ್ಲಿಸಿದ್ದಾರೆ. ಪಿಐಎಲ್ ವಿಚಾರಣೆ ನಡೆಸಿದ ನ್ಯಾಯಾಲಯವು, ಕೇಂದ್ರ ಗೃಹ, ಮಾಹಿತಿ ಮತ್ತು ಪ್ರಸಾರ ಸಚಿವಾಲಯ, ಒಕ್ಕೂಟದ 26 ಪಕ್ಷಗಳು ಹಾಗೂ ಚುನಾವಣೆ ಆಯೋಗಕ್ಕೆ ನೋಟಿಸ್ ನೀಡಿದೆ. ಪಿಐಎಲ್ ಕುರಿತು ಪ್ರತಿಕ್ರಿಯೆ ನೀಡಬೇಕು ಎಂದು ಸೂಚಿಸಿದೆ. ಹಾಗೆಯೇ, ಈ ಕುರಿತು ಅಕ್ಟೋಬರ್ 21ರಂದು ವಿಚಾರಣೆ ನಡೆಸುವುದಾಗಿ ಸೂಚಿಸಿದೆ.
“ಜುಲೈ 19ರಂದು ಪ್ರತಿಪಕ್ಷಗಳು ಸೇರಿ ಇಂಡಿಯಾ ಎಂಬ ಹೆಸರಿನ ಒಕ್ಕೂಟವನ್ನು ರಚಿಸಿವೆ. ಈ ಕುರಿತು ದೂರು ನೀಡಿದರೂ ಚುನಾವಣೆ ಆಯೋಗವು ಒಕ್ಕೂಟದ ವಿರುದ್ಧ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ನನಗೆ ಬೇರೆ ಆಯ್ಕೆಗಳೇ ಇರದ ಕಾರಣ ಕೋರ್ಟ್‌ಗೆ ಅರ್ಜಿ ಸಲ್ಲಿಸಲಾಯಿತು” ಎಂದು ಭಾರದ್ವಾಜ್ ಎಂಬುವರು ಸಲ್ಲಿಸಿದ ಪಿಐಎಲ್‌ನಲ್ಲಿ ಉಲ್ಲೇಖಿಸಲಾಗಿತ್ತು.
ಇದನ್ನೂ ಓದಿ: no confidence motion: ‘ಅವಿಶ್ವಾಸ’ಕ್ಕೆ ನಿಮಗೆ ಪಶ್ಚಾತ್ತಾಪವಾಗಲಿದೆ ಎಂದ ರಿಜಿಜು! ಕೇಂದ್ರ ಸರ್ಕಾರಕ್ಕೆ ‘ಇಂಡಿಯಾ’ ತಿರುಗೇಟು
ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್, ಆಮ್ ಆದ್ಮಿ ಪಕ್ಷ, ಜೆಡಿಯು, ಆರ್‌ಜೆಡಿ ಸೇರಿ 26 ಪಕ್ಷಗಳು ಜತೆಗೂಡಿ ಇಂಡಿಯಾ ಎಂಬ ಒಕ್ಕೂಟವನ್ನು ರಚಿಸಿವೆ. ಈಗಾಗಲೇ ಇಂಡಿಯಾ ಎಂಬ ಹೆಸರಿಟ್ಟಿರುವುದಕ್ಕೆ ನರೇಂದ್ರ ಮೋದಿ, ಬಿಜೆಪಿಯ ಹಲವು ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರಂತೂ, ಒಕ್ಕೂಟವನ್ನು ಇಂಡಿಯಾ ಎಂದು ಕರೆಯುವ ಬದಲು ಘಮಂಡಿಯಾ ಎಂಬುದಾಗಿ ಕರೆಯಬೇಕು ಎಂದು ಟೀಕಿಸಿದ್ದಾರೆ.