Site icon Vistara News

ನೂಪುರ್‌ ಶರ್ಮಾಗೆ ಸುಪ್ರೀಂ ತಪರಾಕಿ: ನಾಲಿಗೆ ಹರಿಬಿಡುವವರಿಗೆ ಕಪಾಳಮೋಕ್ಷ

Supreme Court

ನವ ದೆಹಲಿ: ಪ್ರವಾದಿ ಮೊಹಮ್ಮದ್‌ ವಿರುದ್ಧ ಮಾತನಾಡಿದ್ದ ನೂಪುರ್‌ ಶರ್ಮಾಗೆ ಇಂದು ಸುಪ್ರೀಂಕೋರ್ಟ್‌ ಛೀಮಾರಿ ಹಾಕಿದೆ. “ದೇಶದ ವಿವಿಧ ರಾಜ್ಯಗಳಲ್ಲಿ ದಾಖಲಾದ ಎಫ್‌ಐಆರ್‌ಗಳನ್ನು ದೆಹಲಿಗೆ ವರ್ಗಾಯಿಸಿಕೊಡಿ, ನನಗೆ ಜೀವ ಬೆದರಿಕೆ ಇರುವುದರಿಂದ ಎಲ್ಲಿಗೂ ಪ್ರಯಾಣ ಮಾಡಿ, ವಿಚಾರಣೆ ಎದುರಿಸಲು ಸಾಧ್ಯವಿಲ್ಲ” ಎಂದು ನೂಪುರ್‌ ಶರ್ಮಾ ಅವರೇ ಸಲ್ಲಿಸಿಕೊಂಡಿದ್ದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್‌ ನ್ಯಾಯಮೂರ್ತಿಗಳಾದ ಸೂರ್ಯಕಾಂತ್‌, ನ್ಯಾ.ಜೆ.ಬಿ.ಪರ್ಡಿವಾಲಾ ಅವರನ್ನೊಳಗೊಂಡ ಪೀಠ “ನೂಪುರ್‌ ಶರ್ಮಾ ಇಡೀ ದೇಶದ ಕ್ಷಮೆ ಯಾಚಿಸಬೇಕು” ಎಂದು ಹೇಳಿದೆ. ಅಷ್ಟೇ ಅಲ್ಲ, ಈ ಅರ್ಜಿಯನ್ನು ಮೊದಲು ದೆಹಲಿ ಹೈಕೋರ್ಟ್‌ಗೆ ಸಲ್ಲಿಸಿದೆ, ನೇರವಾಗಿ ಇಲ್ಲಿಗೇ ಯಾಕೆ ಬಂದಿದ್ದೀರಿ? ಎಂದೂ ಪ್ರಶ್ನಿಸಿದೆ.

ಅಷ್ಟೇ ಅಲ್ಲ, ಇವತ್ತು ಸುಪ್ರೀಂಕೋರ್ಟ್‌ ನ್ಯಾಯಮೂರ್ತಿಗಳು ತೀರ್ಪು ಕೊಡುವಾಗ ತುಂಬ ಕಠಿಣ ಶಬ್ದಗಳನ್ನು ಬಳಸಿದ್ದಾರೆ. ʼಆ ಮಹಿಳೆ ಇಡೀ ದೇಶದ ಭದ್ರತಾ ವ್ಯವಸ್ಥೆಗೇ ಕಂಟಕ ತಂದಿಟ್ಟರುʼ ಎಂದೂ ಹೇಳಿದ್ದಾರೆ. ಇಂದು ಸುಪ್ರೀಂಕೋರ್ಟ್‌ ಪೀಠದಿಂದ ಹೊರಬಿದ್ದ ಮಾತುಗಳು ಹೇಗಿವೆಯೆಂದರೆ, ಬರೀ ನೂಪುರ್‌ ಶರ್ಮಾಗೆ ಮಾತ್ರವಲ್ಲ, ನಾಲಿಗೆಯನ್ನು ಹರಿಬಿಟ್ಟು, ಕೋಮುಪ್ರಚೋದಕ ಹೇಳಿಕೆ ನೀಡಿ ದೇಶದಲ್ಲಿ ಗಲಭೆ-ಹಿಂಸಾಚಾರ ಹುಟ್ಟುಹಾಕುವ ಪ್ರತಿಯೊಬ್ಬರಿಗೂ ಕಪಾಳಮೋಕ್ಷ ಮಾಡಿದಂತಿದೆ.

ನೂಪುರ್‌ ಶರ್ಮಾ ಪರ ಅರ್ಜಿ ಸಲ್ಲಿಸಿದ್ದ ವಕೀಲ ಮನೀಂದರ್‌ ಸಿಂಗ್‌ ವಾದ ಮಂಡಿಸಿ, ನೂಪುರ್‌ ಶರ್ಮಾ ಮಾತನಾಡಿದ್ದೇ ತಪ್ಪು ಎಂದು ಸುಪ್ರೀಂಕೋರ್ಟ್‌ ಅಭಿಪ್ರಾಯಕ್ಕೆ ಬರುತ್ತದೆ ಎಂದಾದರೆ, ಈ ದೇಶದಲ್ಲಿ ಯಾವ ನಾಗರಿಕನಿಗೂ ಮಾತನಾಡುವ ಹಕ್ಕು ಇಲ್ಲ ಎಂದೇ ಆಗುತ್ತದೆ. ಸಂವಿಧಾನ ಕೊಟ್ಟಿರುವ ವಾಕ್‌ ಸ್ವಾತಂತ್ರ್ಯವನ್ನೇ ಕಸಿದಂತೆ ಅಲ್ಲವೇ ಎಂದು ಪ್ರಶ್ನಿಸಿದ್ದಾರೆ. ಆದರೆ ವಕೀಲರ ಈ ವಾದಕ್ಕೆ ನ್ಯಾಯಮೂರ್ತಿ ಸೂರ್ಯಕಾಂತ್‌ ಒಂದು ವಿಭಿನ್ನವಾದ ಪ್ರತಿಕ್ರಿಯೆ ನೀಡಿದ್ದಾರೆ. ʼಪ್ರಜಾಪ್ರಭುತ್ವದಲ್ಲಿ ಮಾತನಾಡುವ ಹಕ್ಕು ಎಲ್ಲರಿಗೂ ಇದೆ. ಬೆಳೆಯುವುದು ಹುಲ್ಲಿನ ಹಕ್ಕು. ಆದರೆ ಅದನ್ನು ಕತ್ತೆಗಳು ಮಾತ್ರ ತಿನ್ನುತ್ತವೆʼ ಎಂದು ಹೇಳಿದರು. ಅಂದರೆ ಮಾತಾನಾಡುವ ಹಕ್ಕು ಇದೆ ಎಂದ ಮಾತ್ರಕ್ಕೆ ಎಲ್ಲವನ್ನೂ ಮಾತನಾಡಬಾರದು. ಹುಲ್ಲು ಬೆಳೆದಿದೆ ಎಂದ ಮಾತ್ರಕ್ಕೆ ನಾವು ಮನುಷ್ಯರು ತಿನ್ನಲು ಸಾಧ್ಯವೇ?, ಹಾಗೇ ಹಕ್ಕು ಇದೆ ಎಂದು ಏನೇನನ್ನೋ ಮಾತಾಡುವುದಲ್ಲ ಎಂಬರ್ಥದಲ್ಲಿ ಇದನ್ನು ವಿಶ್ಲೇಷಿಸಲಾಗಿದೆ.

ಇದನ್ನೂ ಓದಿ: ಭದ್ರತಾ ವ್ಯವಸ್ಥೆಗೇ ಬೆದರಿಕೆ ಒಡ್ಡಿದ ನೂಪುರ್‌ ಶರ್ಮಾ ದೇಶದ ಕ್ಷಮೆ ಕೋರಬೇಕು: ಸುಪ್ರೀಂಕೋರ್ಟ್‌

ಇಷ್ಟೇ ಅಲ್ಲ, ನೂಪುರ್‌ ಶರ್ಮಾ ಡಿಬೇಟ್‌ನ್ನು ನಾವು ನೋಡಿದ್ದೇವೆ. ಅಲ್ಲಿ ಅವರನ್ನು ಎಷ್ಟು ಪ್ರಚೋದಿಸಲಾಯಿತು ಎಂಬುದೂ ಗೊತ್ತಿದೆ. ಆದರೆ ನಂತರ ಅವರು ಆಡಿದ ಮಾತುಗಳು ನಾಚಿಕೆತರುವಂಥದ್ದು. ಇಷ್ಟೆಲ್ಲ ಆದ ಮೇಲೆ ಕೂಡ ದೆಹಲಿ ಪೊಲೀಸರು ಏನು ಮಾಡಿದರು? ಅಷ್ಟಕ್ಕೂ ಟಿವಿ ಡಿಬೇಟ್‌ ಯಾಕಾಗಿ ನಡೆಯಿತು? ಇನ್ನೂ ಕೋರ್ಟ್‌ನಲ್ಲಿ ವಿಚಾರಣೆಯ ಹಂತದಲ್ಲಿದ್ದ ಜ್ಞಾನವಾಪಿ ಕೇಸ್‌ನ ವಿಷಯವನ್ನೇಕೆ ಚರ್ಚೆ ಮಾಡಿದರು? ಇದು ಕೇವಲ ಡಿಬೇಟ್‌ ಹೌದೋ ಅಥವಾ ಏನಾದರೂ ಅಜೆಂಡಾ ಇದೆಯಾ? ಎಂದು ಖಾರವಾಗಿ ಪ್ರಶ್ನಿಸಿದ ಸುಪ್ರೀಂಕೋರ್ಟ್‌, ʼಪ್ರತಿ ಬಾರಿ ಹೀಗೆಲ್ಲ ಹೇಳಿಕೆ ನೀಡಿ, ಗಲಾಟೆ ಸೃಷ್ಟಿಸಿ ನಂತರ ನಮ್ಮ ಬಾಯಿ ತೆರೆಯುವಂತೆ ಮಾಡಬೇಡಿ ಎಂದು ಖಾರವಾಗಿ ಹೇಳಿದೆ. ʼಉಳಿದ ಆರೋಪಿಗಳನ್ನಾದರೆ, ಎಫ್‌ಐಆರ್‌ ದಾಖಲು ಮಾಡುತ್ತಿದ್ದಂತೆ ಅರೆಸ್ಟ್‌ ಮಾಡುತ್ತೀರಿ. ಆದರೆ ಈ ಕೇಸ್‌ನಲ್ಲೇನಾಯಿತುʼ ಎಂದು ದೆಹಲಿ ಪೊಲೀಸರನ್ನು ಕೇಳಿದೆ.

ನ್ಯಾಯಮೂರ್ತಿ ಸೂರ್ಯಕಾಂತ್‌ ಅವರಂತೂ ತುಂಬ ಖಡಕ್‌ ಆಗಿ, ಸ್ಪಷ್ಟವಾಗಿ ನೂಪುರ್‌ ಶರ್ಮಾ ತಪ್ಪನ್ನು ಎತ್ತಾಡಿದ್ದಾರೆ. ʼಇವೆಲ್ಲ ಮಾತುಗಳೂ ಹೊರಬಿದ್ದಿದ್ದೂ ಆ ಮಹಿಳೆಯ ದುರಹಂಕಾರದಿಂದ. ಒಂದು ಪಕ್ಷದ ವಕ್ತಾರೆ ನಾನು, ಹಾಗಾಗಿ ಏನು ಬೇಕಾದರೂ ಮಾತನಾಡಬಹುದು ಎಂದು ಭಾವಿಸಿ, ಇಂಥ ಹೇಳಿಕೆ ನೀಡಿದ್ದಾರೆ ಎಂದು ಹೇಳಿದ ಅವರು, ರಾಷ್ಟ್ರದಲ್ಲಾದ ಅಷ್ಟೂ ಪ್ರತಿಭಟನೆ, ಹಿಂಸಾಚಾರಕ್ಕೂ ನೂಪುರ್‌ ಶರ್ಮಾ ಒಬ್ಬರೇ ಹೊಣೆ ಎಂದಿದ್ದಾರೆ.

ಇದನ್ನೂ ಓದಿ: ವಿಸ್ತಾರ TOP 10 NEWS | ನೂಪುರ್‌ ಶರ್ಮಾ ಬೆಂಬಲಿಗನ ಶಿರಚ್ಛೇದ ಹಾಗೂ ಇತರ 9 ಪ್ರಮುಖ ಸುದ್ದಿಗಳು ಇಲ್ಲಿವೆ

Exit mobile version