ನವದೆಹಲಿ: ದೇಶದಲ್ಲಿ ನಡೆಯುವ ಬಲವಂತದ ಮತಾಂತರಗಳ (Forced Conversion) ಕುರಿತು ಸುಪ್ರೀಂ ಕೋರ್ಟ್ ಆತಂಕ ವ್ಯಕ್ತಪಡಿಸಿದೆ. “ದೇಶದ ಭದ್ರತೆಗೆ ಬಲವಂತದ ಮತಾಂತರಗಳು ಅಪಾಯಕಾರಿಯಾಗಿವೆ. ಇವುಗಳಿಗೆ ರಾಜಕೀಯ ಬಣ್ಣ ಬಳಿಯಬಾರದು” ಎಂದು ಹೇಳಿದೆ.
ಆಮಿಷವೊಡ್ಡಿ, ಹಣಕಾಸು ನೆರವು ನೀಡಿ, ಬೆದರಿಕೆ ಹಾಕಿ, ವಂಚಿಸಿ ಮತಾಂತರ ಮಾಡುತ್ತಿರುವವರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಬೇಕು ಎಂದು ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯವು, ಬಲವಂತದ ಮತಾಂತರದ ಕುರಿತು ಆತಂಕ ವ್ಯಕ್ತಪಡಿಸಿತು.
“ಬಲವಂತದ ಮತಾಂತರಗಳು ಅಪಾಯಕಾರಿಯಾಗಿವೆ. ಪ್ರಕರಣದಲ್ಲಿ ಅಟಾರ್ನಿ ಜನರಲ್ ಆರ್. ವೆಂಕಟರಮಣಿ ಅವರ ನೆರವು ಬೇಕು. ಮತಾಂತರಗಳು ಹೇಗೆ ನಡೆಯುತ್ತಿವೆ, ಹೇಗೆ ಇವುಗಳನ್ನು ತಡೆಯಬಹುದು, ಸುಧಾರಣೆ ಕ್ರಮಗಳು ಯಾವವು ಎಂಬುದರ ಕುರಿತು ಚರ್ಚೆಯಾಗಬೇಕು” ಎಂದು ನ್ಯಾಯಮೂರ್ತಿಗಳಾದ ಎಂ.ಆರ್.ಶಾ ಹಾಗೂ ಸಿ.ಟಿ.ರವಿಕುಮಾರ್ ನೇತೃತ್ವದ ನ್ಯಾಯಪೀಠ ತಿಳಿಸಿತು.
ರಾಜಕೀಯ ಬಣ್ಣ ಬಳಿಯುವುದು ಬೇಡ
ತಮಿಳುನಾಡು ಸರ್ಕಾರದ ಪರ ವಾದ ಮಂಡಿಸಿದ ವಕೀಲ ಪಿ.ವಿಲ್ಸನ್, “ರಾಜಕೀಯ ದುರುದ್ದೇಶದಿಂದ ಮತಾಂತರ ಕುರಿತು ಅರ್ಜಿ ಸಲ್ಲಿಸಲಾಗಿದೆ” ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, “ಮತಾಂತರವು ಗಂಭೀರ ವಿಷಯವಾಗಿದೆ. ಯಾವುದೇ ಕಾರಣಕ್ಕೂ ಇಂತಹ ವಿಷಯಗಳಿಗೆ ರಾಜಕೀಯ ಬಣ್ಣ ಬಳಿಯುವುದು ಬೇಡ” ಎಂದು ತಿಳಿಸಿತು.
ಇದನ್ನೂ ಓದಿ | Conversion allegation | ಮತಾಂತರಕ್ಕೆ ಪ್ರಯತ್ನಿಸುತ್ತಿದ್ದ ಸರಕಾರಿ ನೌಕರನ ಬಂಧನ: ಮಕ್ಕಳಿಗೆ ಪುಸ್ತಕ ಹಂಚುತ್ತಿದ್ದ!