Site icon Vistara News

Freebies Case | ಉಚಿತ ಕೊಡುಗೆ ಕೇಸ್‌ ತ್ರಿಸದಸ್ಯ ಪೀಠಕ್ಕೆ ವರ್ಗ, ಸರ್ವಪಕ್ಷ ಕರೆಯಲು ನಿರ್ದೇಶನ

Freebies

ನವದೆಹಲಿ: ಚುನಾವಣೆಗಳ ವೇಳೆ ರಾಜಕೀಯ ಪಕ್ಷಗಳು ಜನರಿಗೆ ನೀಡುವ ಉಚಿತ ಕೊಡುಗೆಗಳ ಭರವಸೆ ಪ್ರಕರಣವನ್ನು (Freebies Case) ಸುಪ್ರೀಂ ಕೋರ್ಟ್‌ ತ್ರಿಸದಸ್ಯ ಪೀಠಕ್ಕೆ ವರ್ಗಾಯಿಸಿದೆ. ಹಾಗೆಯೇ, ಪ್ರಕರಣದ ಕುರಿತು ತಜ್ಞರ ಸಮಿತಿ ರಚನೆ ಹಾಗೂ ಸರ್ವಪಕ್ಷಗಳ ಸಭೆ ಕರೆಯಲು ಕೇಂದ್ರ ಸರಕಾರಕ್ಕೆ ಸೂಚಿಸಿದೆ.

ಉಚಿತ ಕೊಡುಗೆಗಳ ಭರವಸೆ ನೀಡುವುದನ್ನು ನಿಷೇಧಿಸಬೇಕು ಎಂದು ಹಿರಿಯ ವಕೀಲ ಅಶ್ವಿನಿ ಉಪಾಧ್ಯಾಯ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ಸಿಜೆಐ ಎನ್‌.ವಿ.ರಮಣ ನೇತೃತ್ವದ ನ್ಯಾಯಪೀಠವು, “ಎಲೆಕ್ಟೊರಲ್‌ ಪ್ರಜಾಪ್ರಭುತ್ವವನ್ನು ಯಾರೂ ತಿರಸ್ಕರಿಸಲು ಸಾಧ್ಯವಿಲ್ಲ. ಆದರೂ, ಉಚಿತ ಕೊಡುಗೆಗಳ ಕುರಿತು ತ್ರಿಸದಸ್ಯ ಪೀಠವು ಪರಿಗಣಿಸುವ ಅವಶ್ಯಕತೆ ಇದೆ” ಎಂದು ತಿಳಿಸಿತು.

“ಸಾಲಿಸಿಟರ್‌ ಜನರಲ್‌, ಚುನಾವಣೆ ಆಯೋಗ ಸೇರಿ ಹಲವು ಪಕ್ಷಗಳು ಉಚಿತ ಕೊಡುಗೆಗಳ ಬಗ್ಗೆ ಅಭಿಪ್ರಾಯ ತಿಳಿಸಿವೆ. ರಾಜಕೀಯ ಪಕ್ಷಗಳು ತಮ್ಮ ಜನಪ್ರಿಯತೆ ಹೆಚ್ಚಿಸಿಕೊಳ್ಳಲು ಸಾರ್ವಜನಿಕರ ಹಣದಲ್ಲಿ ಉಚಿತ ಕೊಡುಗೆಗಳನ್ನು ಘೋಷಿಸುತ್ತವೆ ಎಂಬುದಾಗಿ ಮಾಹಿತಿ ನೀಡಿವೆ. ಹಾಗಾಗಿ, ತ್ರಿಸದಸ್ಯ ಪೀಠಕ್ಕೆ ವರ್ಗಾಯಿಸಲಾಗುತ್ತಿದೆ” ಎಂದು ತಿಳಿಸಿತು.

“ಉಚಿತ ಕೊಡುಗೆಗಳ ಪ್ರಕರಣವು ಗಂಭೀರ ವಿಚಾರವಾಗಿದೆ. ಈ ಕುರಿತು ಚರ್ಚೆಯಾಗಲಿ. ಅಷ್ಟಕ್ಕೂ, ಕೇಂದ್ರ ಸರಕಾರವೇಕೆ ಇದುವರೆಗೆ ಸರ್ವಪಕ್ಷಗಳ ಸಭೆ ಕರೆದಿಲ್ಲ. ಇದರ ಬಗ್ಗೆ ಚರ್ಚಿಸಲು ಕೇಂದ್ರವು ಸರ್ವಪಕ್ಷಗಳ ಸಭೆ ಕರೆಯಬಹುದು. ಹಾಗೆಯೇ ತಜ್ಞರ ಸಮಿತಿಯೊಂದು ರಚನೆಯಾಗಬೇಕು” ಎಂದು ಹೇಳಿತು. ಇದಕ್ಕೂ ಮೊದಲು ಕೂಡ ಕೇಂದ್ರವೇಕೆ ಸರ್ವಪಕ್ಷಗಳ ಸಭೆ ಕರೆಯಬಾರದು ಎಂದು ಸರ್ವೋಚ್ಚ ನ್ಯಾಯಾಲಯ ಹೇಳಿತ್ತು.

ಇದನ್ನೂ ಓದಿ | Freebies Issue | ನಾನು ಚುನಾವಣೆಯಲ್ಲಿ ಸ್ಪರ್ಧಿಸಿದರೂ 10 ವೋಟ್‌ ಸಿಗಲ್ಲ ಎಂದು ಸಿಜೆಐ ಎನ್‌.ವಿ.ರಮಣ ಹೇಳಿದ್ದೇಕೆ?

Exit mobile version