ನವದೆಹಲಿ: ದೇಶದಲ್ಲಿ ಸಲಿಂಗಿಗಳ ಮದುವೆಯನ್ನು (Same Sex Marriage) ಕಾನೂನುಬದ್ಧಗೊಳಿಸಬೇಕು ಎಂದು ಕೋರಿ ಸಲ್ಲಿಕೆಯಾದ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಐವರು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠಕ್ಕೆ ವರ್ಗಾಯಿಸಿದೆ. ಹಾಗೆಯೇ, ಏಪ್ರಿಲ್ 18ರಂದು ಅರ್ಜಿಗಳ ಅಂತಿಮ ವಿಚಾರಣೆ ನಡೆಸಲಿದೆ ಎಂದು ಮಾಹಿತಿ ನೀಡಿದೆ.
ನಾಲ್ಕು ಸಲಿಂಗಿಗಳ ಜೋಡಿ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ಮೂವರು ನ್ಯಾಯಮೂರ್ತಿಗಳ ನೇತೃತ್ವದ ಪೀಠವು, “ಸಲಿಂಗಿಗಳ ಮದುವೆ ಕುರಿತ ತೀರ್ಪು ಸಮಾಜದ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ. ಇದು ಸಂತಾನೋತ್ಪತ್ತಿ ಪ್ರಮುಖ್ಯತೆಯ ವಿಷಯವಾಗಿದೆ. ಹಾಗಾಗಿ, ಅರ್ಜಿಗಳನ್ನು ಐವರು ಜಡ್ಜ್‌ಗಳ ಸಾಂವಿಧಾನಿಕ ಪೀಠಕ್ಕೆ ನೀಡಲಾಗುತ್ತಿದೆ” ಎಂದು ಸ್ಪಷ್ಟಪಡಿಸಿತು.
ಏಪ್ರಿಲ್ 18ರಂದು ನಡೆಯುವ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ವೆಬ್‌ಸೈಟ್ ಹಾಗೂ ಯುಟ್ಯೂಬ್‌ನಲ್ಲಿ ಲೈವ್ ಸ್ಟ್ರೀಮ್ ಮಾಡಲಾಗುವುದು ಎಂದು ಕೂಡ ಕೋರ್ಟ್ ತಿಳಿಸಿದೆ. ದೇಶದಲ್ಲಿ ಸಲಿಂಗಿಗಳ ಮದುವೆಗೆ ಮಾನ್ಯತೆ ನೀಡುವ ಕುರಿತು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ವಿರೋಧ ವ್ಯಕ್ತಪಡಿಸಿದೆ. “ಇದು ದೇಶದ ಕುಟುಂಬ ಕಲ್ಪನೆಗೆ ವಿರುದ್ಧವಾಗಿದೆ” ಎಂದು ಸರ್ಕಾರ ತನ್ನ ನಿಲುವು ತಿಳಿಸಿದೆ.
ಇದನ್ನೂ ಓದಿ: Same Sex Marriage: ಸಲಿಂಗಿಗಳ ಮದುವೆಗೆ ಕೇಂದ್ರ ವಿರೋಧ, ಕುಟುಂಬ ಕಲ್ಪನೆಗೆ ಧಕ್ಕೆ ಎಂದು ಸುಪ್ರೀಂಗೆ ಸ್ಪಷ್ಟನೆ