Site icon Vistara News

ಬಿಲ್ಕಿಸ್‌ ಬಾನೊ ಕೇಸ್; ಅಪರಾಧಿಗಳ ಶರಣಾಗತಿಗೆ ಹೆಚ್ಚಿನ ಕಾಲಾವಕಾಶ ಕೊಡದ ಕೋರ್ಟ್

Supreme Court On Bilkis Bano Convicts

Supreme Court refuses to extend deadline for surrender of 11 Bilkis Bano gangrape convicts

ನವದೆಹಲಿ: 2002ರ ಗೋದ್ರಾ ಹತ್ಯಾಕಾಂಡದ ವೇಳೆ ಬಿಲ್ಕಿಸ್‌ ಬಾನೊ (Bilkis Bano) ಅವರ ಮೇಲೆ ಸಾಮೂಹಿಕವಾಗಿ ಅತ್ಯಾಚಾರಗೈದು, ಅವರ ಕುಟುಂಬಸ್ಥರನ್ನು ಹತ್ಯೆಗೈದ ಪ್ರಕರಣದಲ್ಲಿ ಶರಣಾಗಲು ಹೆಚ್ಚಿನ ಅವಕಾಶ ಬೇಕು ಎಂದು ಕೋರಿದ್ದ ಮೂವರು ಅಪರಾಧಿಗಳ ಅರ್ಜಿಯನ್ನು ಸುಪ್ರೀಂ ಕೋರ್ಟ್‌ (Supreme Court) ನಿರಾಕರಿಸಿದೆ. ಎಲ್ಲ 10 ಅಪರಾಧಿಗಳು ಜನವರಿ 21ರೊಳಗೆ ಶರಣಾಗಬೇಕು ಎಂದು ಆದೇಶಿಸಿದೆ. ಮೂವರು ಅಪರಾಧಿಗಳಾದ ಗೋವಿಂದಭಾಯಿ ನಾಯ್, ರಮೇಶ್ ರೂಪಾಭಾಯ್ ಚಂದನಾ ಮತ್ತು ಮಿತೇಶ್ ಚಿಮನ್ ಲಾಲ್ ಭಟ್ ಶರಣಾಗಲು ಸಮಯವನ್ನು ವಿಸ್ತರಿಸುವಂತೆ ಕೋರಿದ್ದರು. ಈ ಪೈಕಿ ಗೋವಿಂದಭಾಯಿ ನಾಯ್ ಶರಣಾಗಲು 4 ವಾರಗಳ ಸಮಯಾವಕಾಶ ಕೇಳಿದರೆ, ಮಿತೇಶ್‌ ಮತ್ತು ರಮೇಶ್‌ ರೂಪಭಾಯಿ 6 ವಾರಗಳ ಹೆಚ್ಚುವರಿ ಸಮಯ ನೀಡುವಂತೆ ಮನವಿ ಮಾಡಿದ್ದರು.

ಸನ್ನಡತೆ ಆಧಾರದ ಮೇಲೆ 11 ಅಪರಾಧಿಗಳನ್ನು ಬಿಡುಗಡೆ ಮಾಡಿದ್ದ ಗುಜರಾತ್‌ ಸರ್ಕಾರದ ಆದೇಶ ಪ್ರಶ್ನಿಸಿ ಬಿಲ್ಕಿಸ್‌ ಬಾನೊ ಅವರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅದರಂತೆ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್‌, ಜನವರಿ 8ರಂದು ಗುಜರಾತ್‌ ಸರ್ಕಾರದ ಆದೇಶವನ್ನು ರದ್ದುಗೊಳಿಸಿದೆ. “ಅತ್ಯಾಚಾರದ ಅಪರಾಧಿಗಳಿಗೆ ಕ್ಷಮಾದಾನ ನೀಡುವ ವಿಧಾನದಲ್ಲಿ ಗುಜರಾತ್‌ ಸರ್ಕಾರ ಸಮರ್ಪಕವಾಗಿ ನಿಯಮ ಪಾಲಿಸಿಲ್ಲ. ಬಿಲ್ಕಿಸ್‌ ಬಾನೊ ಸಲ್ಲಿಸಿದ ಅರ್ಜಿಯು ವಿಚಾರಣೆಗೆ ಅರ್ಹವಾಗಿದೆ. ಹಾಗಾಗಿ, ಗುಜರಾತ್‌ ಸರ್ಕಾರದ ಆದೇಶವನ್ನು ರದ್ದುಗೊಳಿಸಲಾಗುತ್ತಿದೆ” ಎಂದು ಸುಪ್ರೀಂ ಕೋರ್ಟ್‌ ಐತಿಹಾಸಿಕ ತೀರ್ಪು ನೀಡಿದೆ.

ಗುಜರಾತ್​ ಸರ್ಕಾರ ಆರೋಪಿಗಳನ್ನು 1992ರ ಕ್ಷಮಾದಾನ ನೀತಿಯ ಅನ್ವಯ ಬಿಡುಗಡೆಗೊಳಿಸಿತ್ತು. ಅಂದರೆ ಹಲವು ವರ್ಷಗಳ ಕಾಲ ಜೈಲು ಶಿಕ್ಷೆ ಅನುಭವಿಸಿ, ಸನ್ನಡತೆ ತೋರಿದ್ದನ್ನೇ ಮುಖ್ಯ ಆಧಾರವನ್ನಿಟ್ಟುಕೊಂಡು ಅವರಿಗೆ ಜೈಲಿನಿಂದ ಮುಕ್ತಿ ಕೊಟ್ಟಿತ್ತು. ಆದರೆ, ಗುಜರಾತ್‌ ಸರ್ಕಾರದ ತೀರ್ಪು ಪ್ರಶ್ನಿಸಿ ಬಿಲ್ಕಿಸ್‌ ಬಾನೊ ಅವರು ನ್ಯಾಯಾಂಗ ಹೋರಾಟ ಮುಂದುವರಿಸಿದ್ದರು. ಬಿಲ್ಕಿಸ್‌ ಬಾನೊ ಸೇರಿ ಹಲವು ಸಾಮಾಜಿಕ ಹೋರಾಟಗಾರರು ಕೂಡ ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದರು. ಈಗ ಕೊನೆಗೂ ನ್ಯಾಯಾಂಗ ಹೋರಾಟದಲ್ಲಿ ಬಿಲ್ಕಿಸ್‌ ಬಾನೊ ಗೆದ್ದಿದ್ದಾರೆ.

ಬಿಲ್ಕಿಸ್‌ ಬಾನೊ ಪ್ರಕರಣದ ಅಪರಾಧಿಗಳು

ಇದನ್ನೂ ಓದಿ: Bilkis Bano: ಕಾನೂನು ಹೋರಾಟದಲ್ಲಿ ಗೆದ್ದ ಬಿಲ್ಕಿಸ್‌ ಬಾನೊ; ಇವರಿಗಾದ ಅನ್ಯಾಯ ಎಂಥಾದ್ದು?

ಏನಿದು ಪ್ರಕರಣ?

2002ರ ಫೆಬ್ರವರಿ 27ರಂದು ಗುಜರಾತ್​​ನಲ್ಲಿ ಸಬರಮತಿ ಎಕ್ಸ್​ಪ್ರೆಸ್​ ರೈಲಿಗೆ ಗೋದ್ರಾ ರೈಲು ನಿಲ್ದಾಣದಲ್ಲಿ ಬೆಂಕಿ ಹಚ್ಚಲಾಗಿತ್ತು. ಇದರಲ್ಲಿ 59 ಕರಸೇವಕರು ಸಜೀವ ದಹನಗೊಂಡಿದ್ದರು. ಇವರೆಲ್ಲ ಉತ್ತರ ಪ್ರದೇಶದ ಅಯೋಧ್ಯೆಯಿಂದ ಬರುತ್ತಿದ್ದರು. ಗೋದ್ರಾದಲ್ಲಿ ಗಲಾಟೆ-ಹಿಂಸಾಚಾರ ಹೆಚ್ಚಾದ ಬೆನ್ನಲ್ಲೇ ಅಲ್ಲಿನ ಅನೇಕರು ಊರು ತೊರೆಯಲು ಪ್ರಾರಂಭಿಸಿದರು. ಅಂತೆಯೇ 20 ವರ್ಷದ ಬಿಲ್ಕಿಸ್​ ಬಾನೊ ಕೂಡ ಮಾರ್ಚ್​ 3ರಂದು ತನ್ನ ಪತಿ, ಪುಟ್ಟ ಮಗಳು ಮತ್ತು ಕುಟುಂಬದ ಇತರ 15 ಸದಸ್ಯರೊಂದಿಗೆ ಹಳ್ಳಿಯನ್ನು ಬಿಟ್ಟು ಹೊರಡುತ್ತಿದ್ದರು. ಆಗವರು ಐದು ತಿಂಗಳ ಗರ್ಭಿಣಿ. ಆಗಲೇ ದಾಳಿ ನಡೆಸಿದ 20-30 ಮಂದಿ ಶಸ್ತ್ರಾಸ್ತ್ರಧಾರಿಗಳನ್ನು ಅವರನ್ನು ಮಾರ್ಗ ಮಧ್ಯೆಯೇ ತಡೆದರು. ಬಿಲ್ಕಿಸ್​ ಬಾನೊ ಮೇಲೆ ಅತ್ಯಾಚಾರ ಮಾಡಿದ್ದಲ್ಲದೆ, ಆಕೆಯ ಕುಟುಂಬದ ಏಳುಮಂದಿಯನ್ನು ಕೊಂದು ಹಾಕಿದರು.  2004ರಲ್ಲಿ ಸುಪ್ರೀಂಕೋರ್ಟ್​ ಈ ಕೇಸ್​​ನ ತನಿಖೆಯನ್ನು ಸಿಬಿಐಗೆ ವಹಿಸಿ ಆದೇಶ ನೀಡಿತು. 2004ರಲ್ಲಿ ಎಲ್ಲ ಆರೋಪಿಗಳೂ ಬಂಧಿತರಾದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version