ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬಂದ ಮೇಲೆ ರಾಜಕೀಯ ಎದುರಾಳಿಗಳನ್ನು ಮಟ್ಟ ಹಾಕಲು ಕೇಂದ್ರೀಯ ತನಿಖಾ ಸಂಸ್ಥೆಗಳನ್ನು ದುರುಪಯೋಗ ಪಡಿಸಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿ 14 ಪಕ್ಷಗಳು ಸಲ್ಲಿಸಿದ್ದ ಅರ್ಜಿಯನ್ನು ಪರಿಗಣಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. 14 ರಾಜಕೀಯ ಪಕ್ಷಗಳ ಪರವಾಗಿ ಹಿರಿಯ ನ್ಯಾಯವಾದಿ ಅಭಿಷೇಕ್ ಮನು ಸಿಂಘ್ವಿ ಅವರು ಸುಪ್ರೀಂ ಕೋರ್ಟ್‌ಗೆ (Supreme Court) ಅರ್ಜಿ ಹಾಕಿದ್ದರು.
2014ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬಂದ ಮೇಲೆ ರಾಜಕೀಯ ಎದುರಾಳಿಗಳ ವಿರುದ್ಧ ಜಾರಿ ನಿರ್ದೇಶನಾಲಯ(ED), ಕೇಂದ್ರ ತನಿಖಾ ದಳ(CBI) ಸಂಸ್ಥೆಗಳು ದಾಖಲಿಸುತ್ತಿರುವ ಪ್ರಕರಣಗಳಲ್ಲಿ ಭಾರೀ ಹೆಚ್ಚಳವಾಗಿದೆ ಎಂದು ಕೋರ್ಟ್‌ಗೆ ಸಲ್ಲಿಸಿದ ತಮ್ಮ ಅರ್ಜಿಯಲ್ಲಿ ಸಿಂಘ್ವಿ ಆಪಾದಿಸಿದ್ದಾರೆ.
ಈ ಹಿಂದಿನ ದಶಕಕ್ಕೆ ಹೋಲಿಸಿದರೆ ಕಳೆದ ಏಳು ವರ್ಷದಲ್ಲಿ ಇ.ಡಿ ಏಳು ಪಟ್ಟು ಹೆಚ್ಚು ಪ್ರಕರಣಗಳನ್ನು ದಾಖಲಿಸಿದೆ. ಆದರೆ, ಶಿಕ್ಷೆಯ ಪ್ರಮಾಣ ಮಾತ್ರ ಕೇವಲ ಶೇ.23ರಷ್ಟಿದೆ. ಸಿಬಿಐ ಮತ್ತು ಇ.ಡಿ ದಾಖಲಿಸಿರುವ ದಾಖಲಿಸಿರುವ ಒಟ್ಟು ಪ್ರಕರಣಗಳ ಪೈಕಿ ಶೇ.95ರಷ್ಟು ಪ್ರಕರಣಗಳು ದೇಶಾದ್ಯಂದ ರಾಜಕೀಯ ಎದುರಾಳಿಗಳ ವಿರುದ್ಧವೇ ಆಗಿವೆ ಮಾಹಿತಿಯನ್ನು ಕೋರ್ಟ್ ಗಮನಕ್ಕೆ ಸಿಂಘ್ವಿ ತಂದರು.
ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರು ಅರ್ಜಿಯ ಸಿಂಧುತ್ವ ಮತ್ತು ಕಾರ್ಯಸಾಧ್ಯತೆಯ ಬಗ್ಗೆ ಅನುಮಾನ ವ್ಯಕ್ತಪಡಿಸಿದರು. ಅವರು ತನಿಖೆ ಮತ್ತು ಕಾನೂನು ಕ್ರಮದಿಂದ ಪ್ರತಿಪಕ್ಷಗಳಿಗೆ ವಿನಾಯಿತಿಯನ್ನು ಬಯಸುತ್ತೀರಾ ಮತ್ತು ನಾಗರಿಕರಾಗಿ ಅವರಿಗೆ ಯಾವುದೇ ವಿಶೇಷ ಹಕ್ಕುಗಳಿವೆಯೇ ಎಂದು ಸಿಂಘ್ವಿಯನ್ನು ಪ್ರಶ್ನಿಸಿದರು.
ಪ್ರತಿಪಕ್ಷದ ನಾಯಕರಿಗೆ ಯಾವುದೇ ರಕ್ಷಣೆ ಅಥವಾ ವಿಚಾರಣೆಯಿಂದ ವಿನಾಯ್ತಿಯನ್ನು ಕೇಳುತ್ತಿಲ್ಲ. ಆದರೆ ಕಾನೂನು ನಿಷ್ಪಕ್ಷಪಾತವಾಗಿ ಮತ್ತು ನ್ಯಾಯಯುತವಾಗಿ ಅನ್ವಯವಾಗಬೇಕು. ಪ್ರತಿಪಕ್ಷಗಳನ್ನು ಬಲಹೀನಗೊಳಿಸಲು ಅವರ ನಾಯಕರ ಮನೋಸ್ಥೈರ್ಯಗಳನ್ನು ಕುಂದಿಸುವುದಕ್ಕಾಗಿ ಸರ್ಕಾರ ತನ್ನ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ. ಇದರಿಂದ ಪ್ರಜಾಪ್ರಭುತ್ವ ಮತ್ತು ಕಾನೂನು ವ್ಯವಸ್ಥೆಗೆ ಧಕ್ಕೆಯಾಗುತ್ತಿದೆ ಎಂದು ಸಿಂಘ್ವಿ ತಿಳಿಸಿದರು.
ಇದನ್ನೂ ಓದಿ: ಕೇಂದ್ರ ಸರ್ಕಾರದ ವಿರುದ್ಧ ಸುಪ್ರೀಂಕೋರ್ಟ್ ಮೆಟ್ಟಿಲೇರಿದ 14 ಪ್ರತಿಪಕ್ಷಗಳು; ಪ್ರಧಾನಿಗೆ ಪತ್ರ ಬರೆದ ಬೆನ್ನಲ್ಲೇ ಈ ನಿರ್ಧಾರ
ಪ್ರತಿಪಕ್ಷಗಳ ಪರವಾಗಿ ಹಾಜರಾಗಿದ್ದ ಅಭಿಷೇಕ್ ಮನು ಸಿಂಘ್ವಿ ಅವರ ವಾದದಿಂದ ಸುಪ್ರೀಂ ಕೋರ್ಟ್ ಸಿಜೆಐ ಮನವರಿಕೆಯಾದಂತೆ ಕಾಣಲಿಲ್ಲ. ಅರ್ಜಿಯು ಅಗತ್ಯವಾಗಿ ರಾಜಕಾರಣಿಗಳ ಪರವಾಗಿಯೇ ಇದೆ. ಈ ಅರ್ಜಿಯ ಭ್ರಷ್ಟಾಚಾರ ಮತ್ತು ಅಪರಾಧದಿಂದ ಸಂತ್ರಸ್ತರಾದ ಪ್ರಜೆಗಳ ಹಿತಾಸಕ್ತಿಯನ್ನು ಒಳಗೊಂಡಿಲ್ಲ ಎಂದು ಜಸ್ಟೀಸ್ ಚಂದ್ರಚೂಡ್ ಅವರು ಹೇಳಿದರು.