Site icon Vistara News

Hemant Soren: ಹೇಮಂತ್‌ ಸೊರೆನ್‌ ಬಂಧನಕ್ಕಿಲ್ಲ ತಡೆ, 5 ದಿನ ಕಸ್ಟಡಿಗೆ; ಚಂಪಯಿ ಪದಗ್ರಹಣ

Hemant Soren

Supreme Court rejects Hemant Soren's plea against arrest, says Go to High Court

ನವದೆಹಲಿ: ‌ಜಾರ್ಖಂಡ್‌ ಮಾಜಿ ಮುಖ್ಯಮಂತ್ರಿ, ಜಾರ್ಖಂಡ್‌ ಮುಕ್ತಿ ಮೋರ್ಚಾ ಪಕ್ಷದ ಮುಖ್ಯಸ್ಥ ಹೇಮಂತ್‌ (Hemant Soren) ಸೊರೆನ್‌ ಅವರಿಗೆ ಸುಪ್ರೀಂ ಕೋರ್ಟ್‌ನಲ್ಲೂ (Supreme Court) ಭಾರಿ ಹಿನ್ನಡೆಯಾಗಿದೆ. ಅಕ್ರಮವಾಗಿ ಹಣ ವರ್ಗಾವಣೆ, ಭೂ ವ್ಯವಹಾರ ಸೇರಿ ಹಲವು ಪ್ರಕರಣಗಳಲ್ಲಿ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ಅವರನ್ನು ಬಂಧಿಸಿದ್ದು, ಇದನ್ನು ಪ್ರಶ್ನಿಸಿ ಅವರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಆದರೆ, ವಿಚಾರಣೆ ನಡೆಸಲು ಒಪ್ಪದ ನ್ಯಾಯಾಲಯವು, ಹೈಕೋರ್ಟ್‌ಗೆ (High Court) ಅರ್ಜಿ ಸಲ್ಲಿಸಿ ಎಂದು ಸೂಚಿಸಿದೆ. ಇನ್ನು ಹೇಮಂತ್‌ ಸೊರೆನ್‌ ಅವರನ್ನು ಐದು ದಿನ ಇ.ಡಿ ನೀಡಲಾಗಿದೆ.

ಹೇಮಂತ್‌ ಸೊರೆನ್‌ ಅವರನ್ನು ಬಂಧಿಸಿದ ಇ.ಡಿ ಅಧಿಕಾರಿಗಳು ರಾಂಚಿಯಲ್ಲಿರುವ ಪಿಎಂಎಲ್‌ಎ ಕೋರ್ಟ್‌ಗೆ ಹಾಜರುಪಡಿಸಿದ್ದು, ಒಂದು ದಿನ ನ್ಯಾಯಾಂಗ ಬಂಧನಕ್ಕೆ ವಹಿಸಲಾಗಿತ್ತು. ಶುಕ್ರವಾರ (ಫೆಬ್ರವರಿ 2) ನ್ಯಾಯಾಂಗ ಬಂಧನದ ಅವಧಿ ಮುಗಿದ ಕಾರಣ ಮತ್ತೆ ಹೇಮಂತ್‌ ಸೊರೆನ್‌ ಅವರನ್ನು ಕೋರ್ಟ್‌ಗೆ ಹಾಜರುಪಡಿಸಲಾಯಿತು. ವಿಚಾರಣೆ ಹಿನ್ನೆಲೆಯಲ್ಲಿ 10 ದಿನ ಕಸ್ಟಡಿಗೆ ನೀಡಬೇಕು ಎಂಬುದಾಗಿ ಇ.ಡಿ ಅಧಿಕಾರಿಗಳು ಮನವಿ ಮಾಡಿದ್ದರು. ನ್ಯಾಯಾಲಯವು ಕೊನೆಗೆ ಐದು ದಿನ ನ್ಯಾಯಾಂಗ ಬಂಧನಕ್ಕೆ ವಹಿಸಲಾಗಿದೆ.

ಅಕ್ರಮವಾಗಿ ಹಣ ವರ್ಗಾವಣೆ, ಭೂ ಅವ್ಯವಹಾರ ಪ್ರಕರಣ ಕೇಳಿಬಂದ ಹಿನ್ನೆಲೆಯಲ್ಲಿ ಇ.ಡಿ ಅಧಿಕಾರಿಗಳು ಹೇಮಂತ್‌ ಸೊರೆನ್‌ ಅವರಿಗೆ 9 ಬಾರಿ ಸಮನ್ಸ್‌ ಜಾರಿಗೊಳಿಸಿದ್ದರು. ಆದರೆ, ಹೇಮಂತ್‌ ಸೊರೆನ್‌ ಅವರು ಪ್ರತಿ ಬಾರಿ ಸಮನ್ಸ್‌ ನೀಡಿದಾಗಲೂ ವಿಚಾರಣೆಯಿಂದ ತಪ್ಪಿಸಿಕೊಂಡಿದ್ದರು. ಕೊನೆಗೆ, ಇ.ಡಿ ಅಧಿಕಾರಿಗಳು ಮನೆಗೆ ಲಗ್ಗೆ ಇಡುತ್ತಾರೆ ಎಂಬುದನ್ನು ಅರಿತಿದ್ದ ಅವರು ದೆಹಲಿಗೆ ತೆರಳಿ, ಗೌಪ್ಯ ಸ್ಥಳದಲ್ಲಿದ್ದರು. ಆದರೆ, ಇ.ಡಿ ಅಧಿಕಾರಿಗಳು ಕೊನೆಗೂ ಹೇಮಂತ್‌ ಸೊರೆನ್‌ ಅವರನ್ನು ಬಂಧಿಸಿದ್ದರು. ನಂತರ ಮುಖ್ಯಮಂತ್ರಿ ಸ್ಥಾನಕ್ಕೆ ಹೇಮಂತ್‌ ಸೊರೆನ್‌ ಅವರು ರಾಜೀನಾಮೆ ನೀಡಿದ್ದರು.

ಇದನ್ನೂ ಓದಿ: Hemant Soren: ಜಾರ್ಖಂಡ್‌ ಮಾಜಿ ಸಿಎಂ ಹೇಮಂತ್ ಸೋರೆನ್​​​ಗೆ ಒಂದು ದಿನದ ನ್ಯಾಯಾಂಗ ಬಂಧನ

ಚಂಪಯಿ ಸೊರೆನ್ ಪದಗ್ರಹಣ

ಸಾಕಷ್ಟು ಹೈಡ್ರಾಮಾ ನಡುವೆ ಜಾರ್ಖಂಡ್ ಮುಖ್ಯಮಂತ್ರಿಯಾಗಿ ಜಾರ್ಖಂಡ್ ಮುಕ್ತಿ ಮೋರ್ಚಾ ನಾಯಕ ಹಾಗೂ ಸಿಬು ಸೋರೆನ್ ಅವರ ನಿಷ್ಠ ಚಂಪಯಿ ಸೊರೆನ್ ಅವರು ಶುಕ್ರವಾರ(ಫೆ.2) ಅಧಿಕಾರ ಸ್ವೀಕರಿಸಿದ್ದಾರೆ. ಬಹುಮತ ಸಾಬೀತುಪಡಿಸಲು ಅವರಿಗೆ 10 ದಿನಗಳ ಕಾಲಾವಕಾಶ ನೀಡಲಾಗಿದೆ. ಗುರುವಾರ ತಡ ರಾತ್ರಿ ಜಾರ್ಖಂಡ್ ರಾಜ್ಯಪಾಲರು ಅವರನ್ನು ನಿಯೋಜಿತ ಸಿಎಂ ಘೋಷಣೆ ಮಾಡಿ, ಸರ್ಕಾರ ರಚಿಸಲು ಆಹ್ವಾನಿಸಿದರು. ಸರ್ಕಾರ ರಚಿಸಲು ಅಗತ್ಯ ಶಾಸಕರ ಬೆಂಬಲ ಇದ್ದರೂ ರಾಜ್ಯಪಾಲರು ಆಹ್ವಾನ ನೀಡುತ್ತಿಲ್ಲ ಎಂಬ ಆರೋಪ ಕೇಳಿ ಬಂದಿತ್ತು. ಇದಾದ ಬಳಿಕ ಚಂಪಯಿ ಸೊರೆನ್‌ ಅವರು ಸಿಎಂ ಆಗಿ ಅಧಿಕಾರ ವಹಿಸಿಕೊಂಡಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version