ನವದೆಹಲಿ: ದಿಲ್ಲಿ ವಿಮಾನ ನಿಲ್ದಾಣದಲ್ಲಿ ಅಸ್ಸಾಮ್ ಪೊಲೀಸರಿಂದ ಬಂಧನಕ್ಕೀಡಾಗಿದ್ದ ಕಾಂಗ್ರೆಸ್ ವಕ್ತಾರ ಪವನ್ ಖೇರಾ (Pawan Khera) ಅವರಿಗೆ ಸುಪ್ರೀಂ ಕೋರ್ಟ್ ರಿಲೀಫ್ ನೀಡಿದೆ. ಗುರುವಾರ ಸಂಜೆಯೊಳಗೆ ದಿಲ್ಲಿ ಕೋರ್ಟ್ ಬೇಲ್ ಮೂಲಕ ಖೇರಾ ಅವರನ್ನು ಬಿಡುಗಡೆ ಮಾಡಬೇಕೆಂದು ಸುಪ್ರೀಂ ಕೋರ್ಟ್ ಹೇಳಿದೆ. ಪವನ್ ಖೇರಾ ಅವರು ಗುರುವಾರ ಬೆಳಗ್ಗೆ ದಿಲ್ಲಿಯ ವಿಮಾನ ನಿಲ್ದಾಣದಿಂದ ಛತ್ತೀಸ್‌ಗಢದ ರಾಯಪುರಕ್ಕೆ ತೆರಳುತ್ತಿದ್ದರು. ಈ ವೇಳೆ, ಅಸ್ಸಾಮ್ ಪೊಲೀಸರು, ವಿಮಾನದಲ್ಲಿದ್ದ ಖೇರಾವನ್ನು ಹೊರ ತಂದು ಬಂಧಿಸಿದ್ದರು. ಬಳಿಕ, ಅವರ ಜತೆಗಿದ್ದ ಕಾಂಗ್ರೆಸ್ ನಾಯಕರು ತೀವ್ರ ಪ್ರತಿಭಟನೆ ನಡೆಸಿದ್ದರು. ಈ ಬಂಧನ ಖಂಡಿಸಿ, ಸುಪ್ರೀಂ ಕೋರ್ಟ್‌ಗೂ ಅರ್ಜಿ ದಾಖಲಿಸಲಾಗಿತ್ತು.
ಪವನ್ ಖೇರಾ ಅವರ ಪರವಾಗಿ ಸುಪ್ರೀಂ ಕೋರ್ಟ್‌ನಲ್ಲಿ ವಾದ ಮಂಡಿಸಿದ ಅಭಿಷೇಕ್ ಮನು ಸಿಂಘ್ವಿ ಅವರು, ದೇಶಾದ್ಯಂತ ದಾಖಲಾಗಿರುವ ಎಲ್ಲ ಎಫ್ಐಆರ್‌ಗಳನ್ನು ಒಂದೇ ಎಂದು ಪರಿಗಣಿಸಲು ಮತ್ತು ಖೇರಾ ಅವರಿಗೆ ಮಧ್ಯಂತರ ರಿಲೀಫ್ ನೀಡುವಂತೆ ನ್ಯಾಯಾಲಯವನ್ನು ಕೇಳಿಕೊಂಡಿರು. ಅಲ್ಲದೇ, ಬಾಯಿತಪ್ಪಿ ಆಡಿದ ಮಾತಿಗೆ ಪವನ್ ಖೇರಾ ಅವರು ಈಗಾಗಲೇ ಕ್ಷಮೆ ಕೋರಿದ್ದಾರೆಂಬ ಎಂಬ ಮಾಹಿತಿಯ್ನು ಕೋರ್ಟ್ ಗಮನಕ್ಕೆ ತಂದರು.
ಇದೇ ವೇಳೆ, ಅಸ್ಸಾಮ್ ಪೊಲೀಸ್ ಪರವಾಗಿ ವಾದ ಮಂಡಿಸಿದ ವಕೀಲರು, ಪವನ್ ಖೇರಾವನ್ನು ಬಂಧಿಸಲಾಗಿದ್ದು, ಅವರ ವರ್ಗಾವಣೆಗೆ ಕೋರ್ಟ್‌ಗೆ ಕೇಳಿಕೊಳ್ಳಲಾಗುವುದು ಎಂದು ತಿಳಿಸಿದರು. ವಾದವನ್ನು ಆಲಿಸಿದ ಸುಪ್ರೀಂ ಕೋರ್ಟ್, ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಅವರು, ನಾವು ನಿಮ್ಮನ್ನು ರಕ್ಷಿಸುತ್ತಿದ್ದೇವೆ ಎಂದು ಹೇಳಿದರು. ಅಲ್ಲದೇ, ಗುರುವಾರ ಸಂಜೆಯೊಳೆಗ ಬೇಲ್ ಮೇಲೆ ಪವನ್ ಖೇರಾವನ್ನು ಬಿಡುಗಡೆ ಮಾಡುವಂತೆ ದಿಲ್ಲಿ ಸ್ಥಳೀಯ ಕೋರ್ಟ್‌ಗೆ ಸೂಚಿಸಿತು.
ಏನಿದು ಪ್ರಕರಣ?
ರಾಯಪುರಕ್ಕೆ ಹೊರಟಿದ್ದ ಕಾಂಗ್ರೆಸ್ ಮುಖಂಡರ ನಿಯೋಗ, ದೆಹಲಿ ಏರ್ಪೋರ್ಟ್ನಲ್ಲಿ ಇಂಡಿಗೊ ವಿಮಾನದ ಎದುರಲ್ಲಿ ಕುಳಿತು ಪ್ರತಿಭಟನೆ (Congress Protest) ನಡೆಸಿದೆ. ಕಾಂಗ್ರೆಸ್ ನಾಯಕರಾದ ಪವನ್ ಖೇರಾ, ಕೆ.ಸಿ.ವೇಣುಗೋಪಾಲ್, ರಣದೀಪ್ ಸಿಂಗ್ ಸುರ್ಜೇವಾಲಾ, ಸುಪ್ರಿಯಾ ಶ್ರೀನೇತ್ ಮತ್ತು ಇತರರು ಇಂದು ರಾಯ್ಪುರಕ್ಕೆ ಹೊರಟಿದ್ದರು. ಇಂಡಿಗೊ ವಿಮಾನವನ್ನೂ ಹತ್ತಿದ್ದರು. ಆದರೆ ದೆಹಲಿ ಪೊಲೀಸರ ಸೂಚನೆ ಇದೆ ಎಂಬ ಕಾರಣ ನೀಡಿ, ಕಾಂಗ್ರೆಸ್ ಮುಖಂಡ ಪವನ್ ಖೇರಾ ಅವರನ್ನು ವಿಮಾನದಿಂದ ಕೆಳಗಿಳಿಸಲಾಯಿತು. ಪವನ್ ಖೇರಾರನ್ನು ವಿಮಾನದಿಂದ ಕೆಳಗೆ ಇಳಿಸುತ್ತಿದ್ದಂತೆ ಕಾಂಗ್ರೆಸ್ನ ಉಳಿದ ಮುಖಂಡರೂ ಕೆಳಗೆ ಇಳಿದು, ಅಲ್ಲೇ ಕುಳಿತು ಬಿಜೆಪಿ ವಿರುದ್ಧ ಪ್ರತಿಭಟನೆ ನಡೆಸಲು ಶುರು ಮಾಡಿದರು.
ಗೌತಮ್ ಅದಾನಿ ಷೇರು ಕುಸಿತಕ್ಕೆ ಸಂಬಂಧಪಟ್ಟಂತೆ ಇತ್ತೀಚೆಗೆ ಸುದ್ದಿಗೋಷ್ಠಿ ನಡೆಸಿದ್ದ ಪವನ್ ಖೇರಾ, ಗೌತಮ್ ಅದಾನಿಯವರನ್ನು ನರೇಂದ್ರ ಮೋದಿಯವರೇ ಕಾಪಾಡಿಕೊಂಡು ಬರುತ್ತಿದ್ದಾರೆ ಎಂದು ಆರೋಪಿಸಿದ್ದರು. ಅಷ್ಟೇ ಅಲ್ಲ, ನರೇಂದ್ರ ದಾಮೋದರ್ದಾಸ್ ಮೋದಿ ಅಲ್ಲ, ನರೇಂದ್ರ ಗೌತಮ್ದಾಸ್ ಮೋದಿ ಎಂದು ವ್ಯಂಗ್ಯ ಮಾಡಿದ್ದರು. ಅದೇ ಕಾರಣಕ್ಕೆ ಬಿಜೆಪಿ ಈಗ ಪವನ್ ಖೇರಾ ಅವರು ವಿಮಾನ ಹತ್ತಲು ಬಿಡುತ್ತಿಲ್ಲ. ಬಿಜೆಪಿಯದ್ದು ಸರ್ವಾಧಿಕಾರಿ ಧೋರಣೆ ಎಂಬುದು ಕಾಂಗ್ರೆಸ್ ಆರೋಪ.