Site icon Vistara News

Supreme Court: ಚಂಡೀಗಢ ಮೇಯರ್ ಚುನಾವಣಾಧಿಕಾರಿಗೆ ಸುಪ್ರೀಂ ಗುದ್ದು; ವಿಚಾರಣೆ ಎದುರಿಸಿ ಎಂದ ಕೋರ್ಟ್

Supreme Court Sadi that Chandigarh mayor Poll Officer Must Be Prosecuted

ನವದೆಹಲಿ: ಚಂಡೀಗಢ ಮೇಯರ್ ಚುನಾವಣೆಯನ್ನು (Chandigarh Mayor Election) ಪಕ್ಷಪಾತಿಯಾಗಿ ನಡೆಸಿದ ಚುನಾವಣಾಧಿಕಾರಿ ಅನಿಲ್ ಮಸಿಹ್ (Presiding Officer Anil Masih) ಅವರನ್ನು ವಿಚಾಣೆಗೊಳಪಡಿಸಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ(Supreme Court). ಚುನಾವಣೆಯ ಸಂದರ್ಭದಲ್ಲಿ ಮತ ಪತ್ರಗಳನ್ನು ವಿರೂಪಗೊಳಿಸಿರುವ ಆರೋಪದ ಕುರಿತು ಸುಪ್ರೀಂ ಕೋರ್ಟ್‌ ವ್ಯಗ್ರವಾಗಿದೆ. ಅಲ್ಲದೇ, ಅಧಿಕಾರಿಯನ್ನು ತೀವ್ರ ವಿಚಾರಣೆಗೊಳಪಡಿಸಬೇಕು ಎಂದು ಹೇಳಿದೆ.

ಮೇಯರ್ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ನ್ಯಾಯಾಲಯಕ್ಕೆ ಸಲ್ಲಿಕೆಯಾದ ಮನವಿ ಕುರಿತು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಕುದುರೆ ವ್ಯಾಪಾರ ನಡೆಯುತ್ತಿರುವುದು ಕೂಡ ಗಂಭೀರವಾಗಿ ಪರಿಗಣಿಸಬೇಕು ಎಂದು ಹೇಳಿದೆ. ಚುನಾವಣೆ ನಡೆದ ಮಾರನೇ ದಿನವೇ ಆಪ್‌ನ ಕೆಲವು ಕೌನ್ಸಿಲರ್‌ಗಳು ಬಿಜೆಪಿಗೆ ಜಿಗಿದಿದ್ದಾರೆ.

ಮತ ಪತ್ರಗಳನ್ನು ಮಂಗಳವಾರ ಪರೀಕ್ಷೆಗೆ ತರುವಂತೆ ನ್ಯಾಯಾಲಯ ತಿಳಿಸಿದ್ದು, ಹೊಸದಾಗಿ ಚುನಾವಣೆ ನಡೆಸುವ ಬದಲು ಹೊಸ ಚುನಾವಣಾಧಿಕಾರಿಯಿಂದ ಮತ ಎಣಿಕೆ ಮಾಡಬೇಕು ಎಂದು ಆರಂಭದಲ್ಲಿ ಪ್ರಸ್ತಾಪಿಸಿದ ನ್ಯಾಯಾಲಯ, ಮತ ಪತ್ರಗಳನ್ನು ಪರಿಶೀಲಿಸಿದ ನಂತರ ಈ ಬಗ್ಗೆ ನಿರ್ಧರಿಸುವುದಾಗಿ ಹೇಳಿದೆ.

3 ಆಪ್‌ ಸದಸ್ಯರು ಬಿಜೆಪಿಗೆ

ಮೇಯರ್ ಚುನಾವಣೆಯಲ್ಲಿ ಅಕ್ರಮ ಎಸಗಿದ ಆರೋಪದ ಕುರಿತು ಸುಪ್ರೀಂ ಕೋರ್ಟ್ ವಿಚಾರಣೆಗೆ ಒಂದು ದಿನ ಮುಂಚಿತವಾಗಿ ಬಿಜೆಪಿ ನಾಯಕ ಮನೋಜ್ ಸೋಂಕರ್ ಅವರು ನಿನ್ನೆ ಸಂಜೆ ಚಂಡೀಗಢ ಮೇಯರ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಒಂದು ತಿಂಗಳ ಹಿಂದೆ, ಜನವರಿ 30ರಂದು ಆಮ್ ಆದ್ಮಿ ಪಕ್ಷದ (ಎಎಪಿ) ಕುಲದೀಪ್ ಕುಮಾರ್ ಅವರನ್ನು ಸೋಲಿಸುವ ಮೂಲಕ ಅವರು ಚುನಾವಣೆ ಗೆದ್ದಿದ್ದರು. ಇದರ ನಡುವೆ, ಆಪ್‌ನ ಮೂವರು ಸದಸ್ಯರು ಬಿಜೆಪಿ ಸೇರಿದ್ದಾರೆ.

ಈ ಚುನಾವಣೆಯನ್ನು ಇಂಡಿಯಾ ಬ್ಲಾಕ್ ವಿರುದ್ಧದ ಬಿಜೆಪಿಯ ಮೊದಲ ಚುನಾವಣಾ ಯುದ್ಧವೆಂದು ಪರಿಗಣಿಸಲಾಗಿತ್ತು. ಇದರಲ್ಲಿ ಬಿಜೆಪಿ 16 ಮತಗಳನ್ನು ಗಳಿಸಿತ್ತು ಮತ್ತು ಕಾಂಗ್ರೆಸ್ ಮತ್ತು ಎಎಪಿ ಜಂಟಿ ಅಭ್ಯರ್ಥಿ ಕುಲದೀಪ್ ಸಿಂಗ್ 12 ಮತಗಳನ್ನು ಗಳಿಸಲು ಶಕ್ತರಾಗಿದ್ದರು. 8 ಮತಗಳನ್ನು ಅಸಿಂಧು ಎಂದು ಘೋಷಿಸಲಾಗಿತ್ತು. ಇದೇ ಈಗ ಬಿಜೆಪಿ ಮತ್ತು ಪ್ರತಿಪಕ್ಷಗಳ ನಡುವಿನ ಕದನದ ವಿಷಯವಾಗಿದೆ.

ಎಎಪಿಯ ಮೂವರು ಕೌನ್ಸಿಲರ್‌ಗಳಾದ ಪೂನಂ ದೇವಿ, ನೇಹಾ ಮತ್ತು ಗುರ್ಚರಣ್ ಕಲಾ ನಿನ್ನೆ ಬಿಜೆಪಿಗೆ ಸೇರ್ಪಡೆಗೊಂಡರು. 35 ಸದಸ್ಯರ ಚಂಡೀಗಢ ಮುನ್ಸಿಪಲ್ ಕಾರ್ಪೊರೇಶನ್‌ನಲ್ಲಿ ಬಿಜೆಪಿ 14 ಕೌನ್ಸಿಲರ್‌ಗಳನ್ನು ಹೊಂದಿತ್ತು. ನಿನ್ನೆಯ ಸೇರ್ಪಡೆಯ ನಂತರ ಅದರ ಸಂಖ್ಯೆ 17 ಆಗಿದೆ. ಬಿಜೆಪಿ, ಶಿರೋಮಣಿ ಅಕಾಲಿದಳದ ಕೌನ್ಸಿಲರ್‌ನ ಬೆಂಬಲವನ್ನೂ ಹೊಂದಿದೆ. ಬಿಜೆಪಿಯ ಚಂಡೀಗಢ ಸಂಸದ ಕಿರಣ್ ಖೇರ್ ಅವರು ಪದನಿಮಿತ್ತವಾಗಿ ಮತದಾನದ ಹಕ್ಕು ಹೊಂದಿದ್ದಾರೆ. ಇದು ಬಿಜೆಪಿಯನ್ನು ಅಧಿಕಾರಕ್ಕೆ ಏರಿಸುವ ಮ್ಯಾಜಿಕ್ ಸಂಖ್ಯೆ 19ನ್ನು ತರುತ್ತದೆ. ಎಎಪಿ ಈಗ 10 ಕೌನ್ಸಿಲರ್‌ಗಳನ್ನು ಹೊಂದಿದ್ದರೆ, ಅದರ ಮಿತ್ರಪಕ್ಷ ಕಾಂಗ್ರೆಸ್ ಏಳು ಸದಸ್ಯರನ್ನು ಹೊಂದಿದೆ.

ಜನವರಿ 30ರಂದು ಫಲಿತಾಂಶಗಳು ಪ್ರಕಟವಾದ ಕೂಡಲೇ, ಕಾಂಗ್ರೆಸ್ ಮತ್ತು ಎಎಪಿ ಕೌನ್ಸಿಲರ್‌ಗಳು ಬಿಜೆಪಿ ಮೋಸ ಮಾಡಿದೆ ಮತ್ತು ಸರಿಯಾದ ಚುನಾವಣಾ ಪ್ರಕ್ರಿಯೆಯನ್ನು ಅನುಸರಿಸುತ್ತಿಲ್ಲ ಎಂದು ಆರೋಪಿಸಿದ್ದರು. ಸದನದಲ್ಲಿ ಗೊಂದಲ ಉಂಟಾಗಿತ್ತು. ನಂತರ ಸುಪ್ರೀಂ ಕೋರ್ಟ್‌ಗೆ ದೂರು ಸಲ್ಲಿಸಿದ್ದರು. ಅದರಲ್ಲಿ ಸಲ್ಲಿಸಿದ ಒಂದು ವೀಡಿಯೊದಲ್ಲಿ, ಅಧ್ಯಕ್ಷರಾದ ಅನಿಲ್ ಮಸಿಹ್ ಮತಪತ್ರಗಳನ್ನು ತಿರುಚುತ್ತಿದ್ದಾರೆ ಎಂದು ಆರೋಪಿಸಿದ್ದರು. ಈ ಆರೋಪವನ್ನು ಬಿಜೆಪಿ ತಳ್ಳಿಹಾಕಿತು.

ಮತಪತ್ರಗಳನ್ನು ವಿರೂಪಗೊಳಿಸಿರುವ ಆರೋಪದ ಕುರಿತು ಸಿಟ್ಟಾಗಿದ್ದ ಸುಪ್ರೀಂ ಕೋರ್ಟ್, ಇದು ಪ್ರಜಾಪ್ರಭುತ್ವದ ಅಣಕ ಎಂದು ಹೇಳಿತ್ತು. ಮತಪತ್ರಗಳು ಮತ್ತು ಚುನಾವಣಾ ಪ್ರಕ್ರಿಯೆಯ ವೀಡಿಯೊವನ್ನು ಸಂರಕ್ಷಿಸಿ ನೀಡುವಂತೆ ಆದೇಶಿಸಿತ್ತು. “ಇದು ಚುನಾವಣಾಧಿಕಾರಿಯ ವರ್ತನೆಯೇ? ವಿಡಿಯೋದಲ್ಲಿ ಅವರು ಕ್ಯಾಮೆರಾವನ್ನು ನೋಡುತ್ತಿದ್ದಾರೆ ಮತ್ತು ಮತಪತ್ರವನ್ನು ವಿರೂಪಗೊಳಿಸುತ್ತಿರುವುದು ಸ್ಪಷ್ಟವಾಗಿದೆ” ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಎಣಿಕೆಯ ವೀಡಿಯೊವನ್ನು ವೀಕ್ಷಿಸಿದ ನಂತರ ಹೇಳಿದರು.

ನಿಯೋಜಿತ ಕೌನ್ಸಿಲ್ ಸದಸ್ಯ ಮಸಿಹ್ ಫೆಬ್ರವರಿ 19ರಂದು ತನ್ನ ಮುಂದೆ ಹಾಜರಾಗಬೇಕು ಎಂದು ನ್ಯಾಯಾಲಯ ಕೇಳಿದೆ. ಎಎಪಿ ಮತ್ತು ಕಾಂಗ್ರೆಸ್ ನ್ಯಾಯಾಲಯದ ಅವಲೋಕನಗಳನ್ನು ಬಿಜೆಪಿಗೆ “ಬಿಗಿಯಾದ ಹೊಡೆತ” ಎಂದು ಬಣ್ಣಿಸಿದೆ. ಮೂಲತಃ ಜನವರಿ 18ರಂದು ನಿಗದಿಯಾಗಿದ್ದ ಮೇಯರ್ ಚುನಾವಣೆಯನ್ನು ಚಂಡೀಗಢ ಆಡಳಿತವು ಫೆಬ್ರುವರಿ 6ಕ್ಕೆ ಮುಂದೂಡಿತ್ತು.

ಜನವರಿ 30ರಂದು ಬೆಳಿಗ್ಗೆ 10 ಗಂಟೆಗೆ ಮೇಯರ್ ಚುನಾವಣೆಯನ್ನು ನಡೆಸುವಂತೆ ಜನವರಿ 24ರಂದು ಹೈಕೋರ್ಟ್ ಆಡಳಿತಕ್ಕೆ ನಿರ್ದೇಶನ ನೀಡಿತು. ಚುನಾವಣೆಯನ್ನು ಮುಂದೂಡಿದ ಆದೇಶವನ್ನು ವಜಾಗೊಳಿಸಿದ ನ್ಯಾಯಾಲಯವು “ಅಸಮಂಜಸ, ನ್ಯಾಯಸಮ್ಮತವಲ್ಲ ಮತ್ತು ಅನಿಯಂತ್ರಿತ” ಎಂದು ಕರೆದಿದೆ.

ಎಎಪಿ ಮೊದಲು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ಗೆ ಮೊರೆ ಹೋಗಿತ್ತು. ನಿವೃತ್ತ ನ್ಯಾಯಾಧೀಶರ ಮೇಲ್ವಿಚಾರಣೆಯಲ್ಲಿ ಹೊಸ ಚುನಾವಣೆಯನ್ನು ಕೋರಿತ್ತು. ಆದರೆ ನ್ಯಾಯಾಲಯವು ಯಾವುದೇ ಮಧ್ಯಂತರ ಆದೇಶ ನೀಡಲು ನಿರಾಕರಿಸಿತ್ತು. ಚಂಡೀಗಢ ಮೇಯರ್ ಚುನಾವಣೆಯಲ್ಲಿ ಸೋತಿದ್ದ ಕುಲದೀಪ್ ಕುಮಾರ್ ನಂತರ ಹೈಕೋರ್ಟ್ ಆದೇಶದ ವಿರುದ್ಧ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು.

ಈ ಸುದ್ದಿಯನ್ನೂ ಓದಿ: ಚಂಡೀಗಢ ಮೇಯರ್ ಎಲೆಕ್ಷನ್ ಗೆದ್ದ ಬಿಜೆಪಿ, ಇಂಡಿಯಾ ಕೂಟಕ್ಕೆ ಸೋಲು! ಹೈಕೋರ್ಟ್ ಮೊರೆ ಹೋದ ಆಪ್

Exit mobile version