ನವದೆಹಲಿ: ಕ್ರಿಮಿನಲ್ ಮೊಕದ್ದಮೆಯಿಂದ ರಾಜ್ಯಪಾಲರಿಗೆ ಸಂಪೂರ್ಣ ವಿನಾಯಿತಿ ನೀಡುವ ಸಾಂವಿಧಾನಿಕ ನಿಬಂಧನೆಯನ್ನು (Blanket immunity) ಪರಿಶೀಲಿಸಲು ಸುಪ್ರೀಂ ಕೋರ್ಟ್ (Supreme Court) ಶುಕ್ರವಾರ ಒಪ್ಪಿಕೊಂಡಿದೆ. ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್, ನ್ಯಾಯಮೂರ್ತಿಗಳಾದ ಜೆ.ಬಿ.ಪರ್ಡಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ನ್ಯಾಯಪೀಠವು ಪಶ್ಚಿಮ ಬಂಗಾಳ ರಾಜ್ಯಪಾಲ ಸಿ.ವಿ.ಆನಂದ ಬೋಸ್ (CV Ananda Bose) ವಿರುದ್ಧ ರಾಜಭವನದ ಮಾಜಿ ಮಹಿಳಾ ಉದ್ಯೋಗಿಯೊಬ್ಬರು ಸಲ್ಲಿಸಿದ್ದ ಅರ್ಜಿಯ ವಿಚಾರದಲ್ಲಿ ಭಾರತದ ಅಟಾರ್ನಿ ಜನರಲ್ ಆರ್.ವೆಂಕಟರಮಣಿ ಅವರ ಸಹಾಯವನ್ನು ಕೋರಿತು.
ಮಹಿಳೆ ತನ್ನ ವಿರುದ್ಧ ನೀಡಿದ ಲೈಂಗಿಕ ಕಿರುಕುಳ ದೂರಿಗೆ ಸಂಬಂಧಿಸಿದಂತೆ ರಾಜ್ಯಪಾಲ ಬೋಸ್ ಅವರು ಕೋರಿರುವ ವಿನಾಯಿತಿಯನ್ನು ಅರ್ಜಿಯು ಪ್ರಶ್ನಿಸಿದೆ. ಮಹಿಳೆಯ ಪರವಾಗಿ ಹಾಜರಾದ ಹಿರಿಯ ವಕೀಲ ಶ್ಯಾಮ್ ದಿವಾನ್, “ತನಿಖೆ ನಡೆಸುವುದಿಲ್ಲ ಎಂದು ಹೇಳಲು ಸಾಧ್ಯವಿಲ್ಲ. ಆರೋಪಕ್ಕೆ ಸಂಬಂಧಿಸಿದಂತೆ ಈಗಲೇ ಪುರಾವೆಗಳನ್ನು ಸಂಗ್ರಹಿಸಬೇಕು. ರಾಜ್ಯಪಾಲರು ಅಧಿಕಾರದಿಂದ ಕೆಳಗಿಳಿಯುವವರೆಗೂ ವಿಚಾರಣೆ ಅನಿರ್ದಿಷ್ಟವಾಗಿ ಮುಂದೂಡಲು ಸಾಧ್ಯವಿಲ್ಲ. 361ನೇ ವಿಧಿಯ ಕಲಂ 2ರ ಅಡಿಯಲ್ಲಿ ರಾಜ್ಯಪಾಲರಿಗೆ ನೀಡಲಾದ ವಿನಾಯಿತಿಯಿಂದ ತನಿಖೆಯನ್ನು ತಪ್ಪಿಸಲು ಸಾಧ್ಯವಿಲ್ಲʼʼ ಎಂದು ವಾದಿಸಿದರು.
ಹೆಚ್ಚುವರಿಯಾಗಿ ಕ್ರಿಮಿನಲ್ ಮೊಕದ್ದಮೆಯಿಂದ ರಾಜ್ಯಪಾಲರಿಗೆ ನೀಡಬಹುದಾದ ವಿನಾಯಿತಿಗೆ ಸಂಬಂಧಿಸಿದಂತೆ ನಿರ್ದಿಷ್ಟ ಮಾರ್ಗಸೂಚಿಗಳನ್ನು ರೂಪಿಸಲು ನಿರ್ದೇಶನಗಳನ್ನು ನೀಡುವಂತೆ ಅರ್ಜಿದಾರರು ನ್ಯಾಯಾಲಯವನ್ನು ಕೋರಿದರು.
“ಸಂವಿಧಾನದ 361ನೇ ವಿಧಿಯ ಕಲಂ (2)ರ ಅಡಿಯಲ್ಲಿ ರಾಜ್ಯಪಾಲರಿಗೆ ನೀಡಲಾಗುವ ರಕ್ಷಣೆಯ ವ್ಯಾಪ್ತಿಗೆ ಸಂಬಂಧಿಸಿದ ವಿಷಯವನ್ನು ಅರ್ಜಿಯು ಪ್ರಶ್ನಿಸುತ್ತದೆ” ಎಂದು ನ್ಯಾಯಪೀಠವು ರಾಜ್ಯ ಸರ್ಕಾರ ಮತ್ತು ಇತರರಿಗೆ ನೀಡಿದ ನೋಟಿಸ್‌ನಲ್ಲಿ ತಿಳಿಸಿದೆ.
ರಾಷ್ಟ್ರಪತಿ ಮತ್ತು ರಾಜ್ಯಪಾಲರಿಗೆ ವಿನಾಯಿತಿ ನೀಡುವ 361ನೇ ವಿಧಿಯ ಪ್ರಕಾರ, ಅವರ ವಿರುದ್ಧ ಯಾವುದೇ ನ್ಯಾಯಾಲಯದಲ್ಲಿ, ಯಾವುದೇ ಕ್ರಿಮಿನಲ್ ವಿಚಾರಣೆಯನ್ನು ಪ್ರಾರಂಭಿಸಬಾರದು ಅಥವಾ ಮುಂದುವರಿಸಬಾರದು. ರಾಷ್ಟ್ರಪತಿ ಅಥವಾ ರಾಜ್ಯಪಾಲರ ಬಂಧನಕ್ಕೆ ಯಾವುದೇ ನ್ಯಾಯಾಲಯದಿಂದ ಹೊರಡಿಸುವಂತಿಲ್ಲ.
ರಕ್ಷಣೆ ಒದಗಿಸಿ
ಈ ಪ್ರಕರಣದ ಬಗ್ಗೆ ಪಶ್ಚಿಮ ಬಂಗಾಳ ಪೊಲೀಸರು ತನಿಖೆ ನಡೆಸಬೇಕು ಮತ್ತು ಮಹಿಳೆ ಮತ್ತು ಆಕೆಯ ಕುಟುಂಬಕ್ಕೆ ರಕ್ಷಣೆ ನೀಡಬೇಕು ಎಂದು ಮನವಿಯಲ್ಲಿ ಕೋರಲಾಗಿದೆ. ಏಪ್ರಿಲ್ 24 ಮತ್ತು ಮೇ 2ರಂದು ರಾಜ್ಯಪಾಲರ ನಿವಾಸದಲ್ಲಿ ಆನಂದ ಬೋಸ್ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ರಾಜಭವನದ ಗುತ್ತಿಗೆ ಉದ್ಯೋಗಿಯಾಗಿದ್ದ ಮಹಿಳೆ ಕೋಲ್ಕತಾ ಪೊಲೀಸರಿಗೆ ದೂರು ನೀಡಿದ್ದರು.
ಇದನ್ನೂ ಓದಿ: West Bengal Governor: ರಾಜ್ಯಪಾಲರ ವಿರುದ್ಧ ಲೈಂಗಿಕ ಕಿರುಕುಳದ ಆರೋಪ; TMC ಆಕ್ರೋಶ
ಆರೋಪಗಳನ್ನು ತಳ್ಳಿ ಹಾಕಿದ ರಾಜ್ಯಪಾಲ
ರಾಜ್ಯಪಾಲ ಸಿ.ವಿ.ಆನಂದ್ ಬೋಸ್ ತಮ್ಮ ವಿರುದ್ಧ ಕೇಳಿ ಬಂದಿರುವ ಆರೋಪಗಳನ್ನು ಅಂದೇ ತಳ್ಳಿ ಹಾಕಿದ್ದರು. ಈ ಕುರಿತು ಪ್ರತಿಕ್ರಿಯಿಸಿದ್ದ ಅವರು, ʼʼಸತ್ಯ ಎಂದಿಗೂ ಗೆದ್ದೇ ಗೆಲ್ಲುತ್ತದೆ. ಇಂತಹ ಕಟ್ಟು ಕಥೆಗಳನ್ನು ನಿಜ ಎಂದು ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ. ನನ್ನ ಗೌರವಕ್ಕೆ ಚ್ಯುತಿ ತಂದು ತೇಜೋವಧೆ ಮಾಡುವ ಉದ್ದೇಶದಿಂದ ಈ ರೀತಿ ಮಾಡಲಾಗುತ್ತಿದೆ. ಬಂಗಾಳದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ವಿರುದ್ಧ ನನ್ನ ಹೋರಾಟ ನಿಲ್ಲಿಸಲು ಇದೊಂದು ಪಿತೂರಿ ಅಷ್ಟೇ. ಆದರೆ ನನ್ನ ಈ ಹೋರಾಟ ಎಂದಿಗೂ ನಿಲ್ಲುವುದಿಲ್ಲ. ನನ್ನ ವಿರುದ್ಧ ಆರೋಪ ಮಾಡಿರುವ ಮಹಿಳೆ ಕಾಂಗ್ರೆಸ್‌ನ ಏಜೆಂಟ್ʼʼ ಎಂದು ಅವರು ತಿರುಗೇಟು ಕೊಟ್ಟಿದ್ದರು.