Site icon Vistara News

Haldwani Demolition | ರೈಲ್ವೆ ಇಲಾಖೆ ಭೂಮಿ ಅತಿಕ್ರಮಣದಾರರಿಗೆ ಬಿಗ್​ ರಿಲೀಫ್​ ಕೊಟ್ಟ ಸುಪ್ರೀಂಕೋರ್ಟ್

Haldwani demolition

ಹಲ್ದ್ವಾನಿ: ಇನ್ನೇನು ನಮ್ಮ ಮನೆಗಳೆಲ್ಲ ನೆಲಸಮ ಆಗಿಯೇ ಬಿಡುತ್ತವೆ ಎಂಬ ಆತಂಕದಲ್ಲಿದ್ದ ಉತ್ತರಾಖಂಡ್​​ನ ಹಲ್ದ್ವಾನಿ ಜನರು, ಈಗ ಸುಪ್ರೀಂಕೋರ್ಟ್​​ನಿಂದಾಗಿ ನಿಟ್ಟುಸಿರುಬಿಡುವಂತಾಗಿದೆ. ಹಲ್ದ್ವಾನಿಯಲ್ಲಿ ರೈಲ್ವೆ ಇಲಾಖೆಗೆ ಸೇರಿದ 29 ಎಕರೆ ಭೂಮಿಯನ್ನು ಅತಿಕ್ರಮಣ ಮಾಡಿಕೊಂಡು ಕಟ್ಟಲಾದ 4,365 ಮನೆಗಳು, ಶಾಲೆಗಳು, ಖಾಸಗಿ ಬ್ಯಾಂಕ್​, ದೇವಾಲಯಗಳು, ಮಸೀದಿ, ವಾಣಿಜ್ಯ ಮಳಿಗೆಗಳನ್ನು ತೆರವುಗೊಳಿಸಬೇಕು ಎಂದು ಉತ್ತರಾಖಂಡ್​ ಹೈಕೋರ್ಟ್​ ನೀಡಿದ್ದ ತೀರ್ಪಿಗೆ ಸುಪ್ರೀಂಕೋರ್ಟ್​ ತಡೆ ನೀಡಿದೆ. ಹೀಗಾಗಿ ಆ ಸ್ಥಳದಲ್ಲಿರುವ 50 ಸಾವಿರಕ್ಕೂ ಹೆಚ್ಚಿನ ಹೆಚ್ಚು ಮಂದಿ ಸದ್ಯ ಬಚಾವ್​ ಆಗಿದ್ದಾರೆ.

ರಾಜ್ಯ ಸರ್ಕಾರದ ರೈಲ್ವೆ ಇಲಾಖೆಗೆ ಸೇರಿದ 29 ಎಕರೆ ಭೂಮಿಯನ್ನು ಅತಿಕ್ರಮಣ ಮಾಡಿದವರನ್ನು ಅಲ್ಲಿಂದ ತೆರವುಗೊಳಿಸಬೇಕು. ಆ ಭೂಮಿಯನ್ನು ವಾಪಸ್​ ಇಲಾಖೆಗೆ ಬಿಟ್ಟುಕೊಡಬೇಕು ಎಂದು ಹೈಕೋರ್ಟ್​​ಗೆ ಪಿಐಎಲ್​ ಸಲ್ಲಿಕೆಯಾಗಿತ್ತು. ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್​​ 2022ರ ಡಿಸೆಂಬರ್​ 20ರಂದು ಆದೇಶ ನೀಡಿ, ‘ಇನ್ನು 7 ದಿನಗಳಲ್ಲಿ ಹಲ್ದ್ವಾನಿಯಲ್ಲಿ ಒತ್ತುವರಿಯಾದ ಭೂಪ್ರದೇಶಗಳಲ್ಲಿ ತೆರವು ಕಾರ್ಯಾಚರಣೆ ಪ್ರಾರಂಭವಾಗಬೇಕು’ ಎಂದು ಹೇಳಿತ್ತು. ಅದರಂತೆ ಅಲ್ಲಿನ ನಿವಾಸಿಗಳಿಗೆ ಸ್ಥಳೀಯ ಅಧಿಕಾರಿಗಳು ನೋಟಿಸ್ ಕೂಡ ಕೊಟ್ಟಿದ್ದರು. ಜನವರಿ 10ರಿಂದ ಒತ್ತುವರಿ ತೆರವು ಕಾರ್ಯಾಚರಣೆಯೂ ನಡೆಯಬೇಕಿತ್ತು.

ಈ ಮಧ್ಯೆ ಸ್ಥಳೀಯರಿಂದ ವಿಪರೀತ ಪ್ರತಿಭಟನೆಯೂ ಪ್ರಾರಂಭವಾಗಿತ್ತು. ಆ ಪ್ರದೇಶದಲ್ಲಿ ಮುಸ್ಲಿಮರೂ ಹೆಚ್ಚಿನ ಸಂಖ್ಯೆಯಲ್ಲಿದ್ದು, ಅವರೂ ದೊಡ್ಡಮಟ್ಟದಲ್ಲೇ ಪ್ರತಿಭಟನೆ ಶುರು ಮಾಡಿದ್ದರು. ಹೈಕೋರ್ಟ್ ಆದೇಶದ ವಿರುದ್ಧ ಸುಪ್ರೀಂಕೋರ್ಟ್​​ಗೆ ಮೇಲ್ಮನವಿಯೂ ಸಲ್ಲಿಕೆಯಾಗಿತ್ತು. ಈ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್​ ನ್ಯಾಯಮೂರ್ತಿ ಎಸ್​.ಕೆ.ಕೌಲ್​ ಮತ್ತು ಅಭಯ್​​ ಎಸ್​. ಓಕಾ ಅವರು ಇಂದು ಮಧ್ಯಂತರ ಆದೇಶ ನೀಡಿದ್ದಾರೆ.

‘ಇದು ಮಾನವರ ಭಾವನೆ ಮತ್ತು ಮೂಲ ಸೌಕರ್ಯಕ್ಕೆ ಸಂಬಂಧಪಟ್ಟ ವಿಚಾರ. ಈಗ ಏಳು ದಿನಗಳ ಒಳಗೆ ಏಕಾಏಕಿ 50 ಸಾವಿರಕ್ಕೂ ಅಧಿಕ ಜನರನ್ನು ಸ್ಥಳಾಂತರ ಮಾಡಲು ಸಾಧ್ಯವೇ ಇಲ್ಲ’ ಎಂದು ನ್ಯಾಯಮೂರ್ತಿಗಳು ಹೇಳಿದ್ದಾರೆ.
‘ರೈಲ್ವೆ ಇಲಾಖೆಗೆ ಅಗತ್ಯವನ್ನು ಪರಿಗಣಿಸುವ ಜತೆ, ಈಗ ಅಲ್ಲಿರುವ ಜನರ ಪುನರ್ವಸತಿ ಮತ್ತು ಮೂಲಭೂತ ಹಕ್ಕು ರಕ್ಷಣೆಯ ಬಗ್ಗೆಯೂ ಸರ್ಕಾರ ಗಮನ ಕೊಟ್ಟು, ಅದಕ್ಕಾಗಿ ಯೋಜನೆಯನ್ನು ರೂಪಿಸಬೇಕು. ಅಗತ್ಯ ವ್ಯವಸ್ಥೆಗಳನ್ನು ಮಾಡಬೇಕು ಎಂದು ಹೇಳಿರುವ ಸುಪ್ರೀಂಕೋರ್ಟ್ ಪೀಠ, ಫೆಬ್ರವರಿ 7ಕ್ಕೆ ಮುಂದಿನ ವಿಚಾರಣೆಯನ್ನು ನಿಗದಿಪಡಿಸಿದೆ.

ಇದನ್ನೂ ಓದಿ: PM Modi | ಉತ್ತರಾಖಂಡ್​​ನಲ್ಲಿ ಪ್ರಧಾನಿ ಮೋದಿ; ಕೇದಾರನಾಥದಲ್ಲಿ ಪೂಜೆ, ವಿವಿಧ ಯೋಜನೆಗಳ ಉದ್ಘಾಟನೆ

Exit mobile version