ನವದೆಹಲಿ: ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ಎಸಗಿದ ಸಂತ್ರಸ್ತೆಗೆ ಕುಜದೋಷ ಇರುವ ಕಾರಣ ಮದುವೆಯಾಗುವುದಿಲ್ಲ ಎಂದು ಆರೋಪಿ ದೂರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಲಹಾಬಾದ್ ಹೈಕೋರ್ಟ್‌ನ ಲಖನೌ ಪೀಠ ನೀಡಿದ ತೀರ್ಪಿಗೆ ಸುಪ್ರೀಂ ಕೋರ್ಟ್ (Supreme Court) ತಡೆಯಾಜ್ಞೆ ನೀಡಿದೆ.
ಯುವತಿ ಮೇಲೆ ಅತ್ಯಾಚಾರ ಎಸಗಿದ ಆರೋಪಿಯ ಜಾಮೀನು ಅರ್ಜಿಯ ವಿಚಾರಣೆ ವೇಳೆ, ಆರೋಪಿಯು ಸಂತ್ರಸ್ತೆಗೆ ಕುಜದೋಷ ಇರುವ ಕಾರಣ ಮದುವೆಯಾಗುವುದಿಲ್ಲ ಎಂದು ತಿಳಿಸಿದ್ದ. ಆತನ ಪರ ವಕೀಲರು ಈ ಕುರಿತು ವಾದ ಮಂಡಿಸಿದ್ದರು. ಆಗ ನ್ಯಾಯಾಲಯವು ಅಲಹಾಬಾದ್ ಹೈಕೋರ್ಟ್‌ನ ಲಖನೌ ಪೀಠವು ಕುಜದೋಷದ ಕುರಿತು ಪರೀಕ್ಷೆ ಮಾಡುವಂತೆ ಲಖನೌ ವಿಶ್ವವಿದ್ಯಾಲಯದ ಜ್ಯೋತಿಷ ಶಾಸ್ತ್ರ ವಿಭಾಗಕ್ಕೆ ಸೂಚಿಸಿತ್ತು.
ಲಖನೌ ಪೀಠದ ಆದೇಶ ಬಳಿಕ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಸುಧಾಂಶು ಧುಲಿಯಾ ಹಾಗೂ ಪಂಕಜ್ ಮಿತ್ತಲ್ ಅವರ ನ್ಯಾಯಪೀಠವು ಸುಮೋಟೊ (ಸ್ವಯಂಪ್ರೇರಿತವಾಗಿ ಅರ್ಜಿಯ ವಿಚಾರಣೆ ಕೈಗೆತ್ತಿಕೊಳ್ಳುವುದು) ದಾಖಲಿಸಿಕೊಂಡಿತ್ತು. ಅದರಂತೆ, ಅಲಹಾಬಾದ್ ಹೈಕೋರ್ಟ್ ಆದೇಶಕ್ಕೆ ತಡೆಯಾಜ್ಞೆ ನೀಡಿದೆ. ಹಾಗೆಯೇ, ಹೈಕೋರ್ಟ್ ತನ್ನ ವಿವೇಚನೆ ಹಾಗೂ ನಿಯಮಗಳಂತೆ ತೀರ್ಪು ನೀಡಬೇಕು ಎಂದು ಸೂಚಿಸಿದೆ.
“ವ್ಯಕ್ತಿಯ ವೈಯಕ್ತಿಕ ವಿಷಯವಾದ ಜ್ಯೋತಿಷವನ್ನು ನ್ಯಾಯಾಲಯದಲ್ಲಿ ಪರಿಗಣಿಸುವಂತಿಲ್ಲ. ಹಾಗಾಗಿ, ಅಲಹಾಬಾದ್ ಹೈಕೋರ್ಟ್ ಪೀಠವು ನೀಡಿರುವ ತೀರ್ಪು ಅರ್ಹತೆಯ ಮಾನದಂಡದಲ್ಲಿ ಇಲ್ಲ” ಎಂದು ತಿಳಿಸಿದೆ. ಲಖನೌ ವಿಶ್ವವಿದ್ಯಾಲಯದ ಜ್ಯೋತಿಷ ಶಾಸ್ತ್ರ ವಿಭಾಗದ ಮುಖ್ಯಸ್ಥರಿಗೆ ಯುವತಿಯ ಕುಂಡಲಿಯನ್ನು ನೀಡಬೇಕು. ಇದರ ವರದಿಯನ್ನು ಕೋರ್ಟ್‌ಗೆ ಸಲ್ಲಿಸಬೇಕು ಎಂದು ಆದೇಶಿಸಲಾಗಿತ್ತು.
ಇದನ್ನೂ ಓದಿ: ಜೈಲಲ್ಲಿ ತಲೆಸುತ್ತಿ ಬಿದ್ದ ಆಪ್ ನಾಯಕ ಸತ್ಯೇಂದ್ರ ಜೈನ್; ಸುಪ್ರೀಂಕೋರ್ಟ್ನಿಂದ ಮಧ್ಯಂತರ ಜಾಮೀನು
ಹಿಂದು ಜ್ಯೋತಿಷ ಶಾಸ್ತ್ರದ ಪ್ರಕಾರ ಕುಜ ಅಂದರೆ ಮಂಗಳ ಗ್ರಹದ ಪ್ರಭಾವದಿಂದ ಜನಿಸಿದವರಿಗೆ ಕುಜದೋಷವಿದೆ ಎಂದು ಪರಿಗಣಿಸಲಾಗುತ್ತದೆ. ಅವರನ್ನು ಮದುವೆಯಾದವರ ಜೀವಕ್ಕೆ ಸಂಚಕಾರ ಎದುರಾಗುತ್ತದೆ ಎಂದು ಹೇಳಲಾಗುತ್ತದೆ. ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ಎಸಗಿದ್ದ ಗೋವಿಂದ ರಾಜು ಎಂಬಾತ, ಯುವತಿಗೆ ಕುಜದೋಷ ಇದೆ ಎಂದು ಕೋರ್ಟ್‌ಗೆ ತಿಳಿಸಿದ್ದ.