ನವದೆಹಲಿ: ಹೂಡಿಕೆದಾರರ ಹಿತಾಸಕ್ತಿಯನ್ನು ಕಾಪಾಡವುದಕ್ಕಾಗಿ, ಅದಾನಿ ಗ್ರೂಪ್ ವಿರುದ್ಧ (Adani Group Row) ಕೇಳಿ ಬಂದಿರುವ ವಂಚನೆಯ ಆರೋಪಗಳನ್ನು ಪರೀಕ್ಷಿಸಲು ನ್ಯಾಯಮೂರ್ತಿ ಒಳಗೊಂಡ ತಜ್ಞರ ಸಮಿತಿಯನ್ನು ರಚಿಸುವ ಬಗ್ಗೆ ಸುಪ್ರೀಂ ಕೋರ್ಟ್ (Supreme Court) ಶುಕ್ರವಾರ ಸಲಹೆ ನೀಡಿದೆ. ಅದಾನಿ ಗ್ರೂಪ್ ಷೇರುಗಳು ದಿಢೀರ್ ಕುಸಿತದಿಂದಾಗಿ ಹೂಡಿಕೆದಾರರ ಕೋಟ್ಯಂತರ ರೂಪಾಯಿ ನಷ್ಟವಾಗಿದೆ. ಅಲ್ಲದೇ ರಾಜಕೀಯ ಮೇಲಾಟಕ್ಕೂ ಇದು ಪ್ರೇರಣೆ ನೀಡಿದೆ. ಕೋರ್ಟ್‌ನ ಸಲಹೆಯನ್ನು ಕೇಂದ್ರ ಸರ್ಕಾರ ಒಪ್ಪುವುದೇ ಕಾದು ನೋಡಬೇಕು.
ಅದಾನಿ ಗ್ರೂಪ್ ಷೇರುಗಳ ವಿಷಯದ ಪ್ರಕರಣದಲ್ಲಿ ಮಧ್ಯಪ್ರವೇಶಿಸಲು ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ದಾಖಲಾಗಿತ್ತು. ಈ ಕುರಿತು ಶುಕ್ರವಾರ ವಿಚಾರಣೆ ನಡೆಸಿದ ಸಿಜೆಐ ಡಿ. ವೈ. ಚಂದ್ರಚೂಡ ನೇತೃತ್ವದ ಪೀಠವು, ಈ ವಿಚಾರದಲ್ಲಿ ನಾವು ಮಧ್ಯಪ್ರವೇಶಿಸುಬಹುದೇ ಮತ್ತು ಇದು ಮತ್ತೆ ಸಂಭವಿಸದಂತೆ ನೋಡಿಕೊಳ್ಳಲು ಕಾರ್ಯವಿಧಾನವನ್ನು ಹೊಂದಿದ್ದೇವೆಯೇ ಎಂಬುದು ನೋಡಿಕೊಳ್ಳಬೇಕಾಗುತ್ತದೆ. ಹಾಗೆಯೇ ನಾವು ನೀತಿ ವಿಷಯಗಳಿಗೆ ಪ್ರವೇಶಿಸಲು ಬಯಸುವುದಿಲ್ಲ. ಅದು ಸರ್ಕಾರದ ಕೆಲಸ ಎಂದು ಹೇಳಿದರು.
ಒಂದು ವೇಳೆ ಭಾರತ ಸರ್ಕಾರವು ಈ ಕುರಿತು ಆಸಕ್ತಿಯನ್ನು ಹೊಂದಿದ್ದರೆ ಒಟ್ಟಾರೆ ಪರಿಸ್ಥಿತಿಯನ್ನು ಅವಲೋಕಿಸಲು ಮತ್ತು ಪರೀಕ್ಷಿಸಲು ಒಂದು ತಜ್ಞರ ಸಮಿತಿಗೆ ನಾವು ಸಲಹೆ ಮಾಡಬಹುದು ಎಂದು ಸಿಜೆಐ ಹೇಳಿದರು. ಅಲ್ಲದೇ, ಈ ಕಮಿಟಿಯಲ್ಲಿ ಜಡ್ಜ್ ಮತ್ತು ತಜ್ಞರು ಇರಬೇಕು ಎಂದು ಅವರು ತಿಳಿಸಿದರು.
ಈ ಘಟನೆ ಸಂಬಂಧ ಮಾರುಕಟ್ಟೆ ನಿಯಂತ್ರಕರು ಮತ್ತು ಭಾರತೀಯ ಹೂಡಿಕೆದಾರ ರಕ್ಷಣೆ ಪ್ರಕ್ರಿಯೆ ಕುರಿತು ನಾವು ಸಾಲಿಸಿಟರ್ ಜನರಲ್ ಅವರಿಗೆ ಸೂಚಿಸಿದ್ದೇವೆ ಎಂದು ಹೇಳಿದ ಸಿಜೆಐ, ಇಡೀ ಘಟನೆಯ ಕುರಿತಾದ ವಾಸ್ತವ ಮತ್ತು ನಿಯಂತ್ರಣ ಕುರಿತಾದ ಸಂಕ್ಷಿಪ್ತ ವಿವರಣೆ ನೀಡುವಂತೆ ಸರ್ಕಾರಕ್ಕೆ ಸೂಚಿಸಿದರು.
ಮಾರುಕಟ್ಟೆಯ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸೆಬಿ(Securities and Exchange Board of India) ಎಲ್ಲವನ್ನೂ ಮಾಡುತ್ತಿದೆ ಎಂದು ಸಾಲಿಸಿಟರ್ ಜನರಲ್ ಅವರು ಹೇಳಿದ್ದಾರೆ. ನಾವು ಯಾವುದೇ ನಿಯಂತ್ರಕ ಚೌಕಟ್ಟಿನ ಮೇಲೆ ಆಕಾಂಕ್ಷೆಗಳನ್ನು ಹೇರುತ್ತಿಲ್ಲ. ನಾವು ಈ ಅಂಶದ ಬಗ್ಗೆ ಮಾತುಕತೆ ನಡೆಸುತ್ತಿದ್ದೇವೆ ಎಂದು ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್ ಹೇಳಿದರು.
ಇದನ್ನೂ ಓದಿ: Adani Group : ಹಿಂಡೆನ್‌ಬರ್ಗ್ ವಿರುದ್ಧ ಕಾನೂನು ಹೋರಾಟಕ್ಕೆ ಅದಾನಿ ಸಜ್ಜು, ಅಮೆರಿಕದ ವಾಚ್‌ಟೆಲ್ ನೇಮಕ : ವರದಿ
ಸುಪ್ರೀಂ ಕೋರ್ಟ್‌ನ ಸಲಹೆಗೆ ಸಂಬಂಧಿಸಿದಂತೆ ಸೆಬಿ, ಹಣಕಾಸು ಮತ್ತು ಇತರ ಸಚಿವಾಲಯಗಳೊಂದಿಗೆ ಚರ್ಚಿಸಿ ಸುಪ್ರೀಂ ಕೋರ್ಟ್‌ಗೆ ಸೋಮವಾರ ತಿಳಿಸಲಾಗುವುದು. ನಿಯಂತ್ರಕ ವ್ಯಾಪ್ತಿಯಲ್ಲಿ ಸೆಬಿ ಈ ಪ್ರಕರಣವನ್ನು ನಿರ್ವಹಣೆ ಮಾಡುತ್ತಿದೆ ಎಂದು ಸಾಲಿಸಿಟರ ಜನರಲ್ ಅವರು ಪೀಠಕ್ಕೆ ತಿಳಿಸಿದರು.