ನವದೆಹಲಿ: ಪದವಿಪೂರ್ವ ವೈದ್ಯಕೀಯ ಕೋರ್ಸ್ ಪ್ರವೇಶಕ್ಕಾಗಿ ನಡೆದ ರಾಷ್ಟ್ರೀಯ ಪ್ರವೇಶ ಮತ್ತು ಅರ್ಹತಾ ಪರೀಕ್ಷೆ (NEET UG)ಯಲ್ಲಿ ಅಕ್ರಮ ನಡೆದಿರುವ ಬಗ್ಗೆ ಆರೋಪ ಕೇಳಿ ಬಂದಿದ್ದು, ಹೊಸದಾಗಿ ಪರೀಕ್ಷೆ ನಡೆಸುವಂತೆ ಹಲವು ಅಭ್ಯರ್ಥಿಗಳು ಸುಪ್ರೀಂ ಕೋರ್ಟ್ (Supreme Court) ಕದ ತಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಮಂಗಳವಾರ, ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA)ಗೆ ನೋಟಿಸ್ ಜಾರಿ ಮಾಡಿದೆ. ಇದೇ ವೇಳೆ ಪರೀಕ್ಷೆಯಲ್ಲಿ ತೇರ್ಗಡೆಯಾಗಿರುವ ವಿದ್ಯಾರ್ಥಿಗಳ ಕೌನ್ಸೆಲಿಂಗ್ ತಡೆಯಲು ನಿರಾಕರಿಸಿದೆ.
Supreme Court issues notice to National Testing Agency (NTA) on pleas seeking fresh NEET-UG, 2024 examination amid allegations of paper leak. pic.twitter.com/CNS8tur9QS
— ANI (@ANI) June 11, 2024
ಪ್ರಶ್ನೆ ಪತ್ರಿಕೆ ಸೋರಿಕೆ ಹಾಗೂ ನ್ಯೂನತೆಗಳ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ಎನ್‌ಟಿಎಗೆ ಸೂಚಿಸಿದೆ. ಅಲ್ಲದೆ ಈ ಪ್ರಕರಣ ಪರೀಕ್ಷೆಯ ಪಾವಿತ್ರ್ಯತೆಯ ಬಗ್ಗೆಯೂ ಅನುಮಾನ ಮೂಡಿಸಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ನಡೆಸುವ ನೀಟ್ ಪರೀಕ್ಷೆಗೆ ಈ ವರ್ಷ ದೇಶಾದ್ಯಂತ 24 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಹೆಸರು ನೋಂದಾಯಿಸಿದ್ದರು. ಅದರಲ್ಲಿ 23,33,297 ಪರೀಕ್ಷೆ ಹಾಜರಾಗಿದ್ದು, 72,782 ಮಂದಿ ಗೈರಾಗಿದ್ದರು. ಇನ್ನು 10,29,154 ಬಾಲಕರು 13,76,831 ಬಾಲಕಿಯರು ಹಾಗೂ 18 ಮಂದಿ ತೃತೀಯ ಲಿಂಗಿಗಳು ಪರೀಕ್ಷೆ ಬರೆದಿದ್ದರು.
ದೇಶಾದ್ಯಂತ 571 ನಗರ ಮತ್ತು ದೇಶದ ಹೊರಗಿನ 14 ನಗರಗಳು ಸೇರಿದಂತೆ 4,750 ವಿವಿಧ ಕೇಂದ್ರಗಳಲ್ಲಿ ಮೇ 5ರ ಮಧ್ಯಾಹ್ನ 2ರಿಂದ 5:20ರ ವರೆಗೆ ಪರೀಕ್ಷೆ ನಡೆದಿತ್ತು. ಪರೀಕ್ಷೆಯನ್ನು 13 ಭಾಷೆಗಳಲ್ಲಿ (ಅಸ್ಸಾಮಿ, ಬಂಗಾಳಿ, ಇಂಗ್ಲಿಷ್, ಗುಜರಾತಿ, ಹಿಂದಿ, ಕನ್ನಡ, ಮಲಯಾಳಂ, ಮರಾಠಿ, ಒಡಿಯಾ, ಪಂಜಾಬಿ, ತಮಿಳು, ತೆಲುಗು, ಮತ್ತು ಉರ್ದು) ನಡೆಸಲಾಗಿತ್ತು. ಜೂನ್ 4ರಂದು ನೀಟ್ ಫಲಿತಾಂಶ ಪ್ರಕಟವಾಗಿತ್ತು.
ಆರೋಪ ಏನು?
ನೀಟ್ ಪರೀಕ್ಷೆಯಲ್ಲಿ ರ‍್ಯಾಂಕ್ ಪಡೆದ 67 ವಿದ್ಯಾರ್ಥಿಗಳಲ್ಲಿ 44 ವಿದ್ಯಾರ್ಥಿಗಳು ಗ್ರೇಸ್ ಮಾರ್ಕ್ಸ್ ಆಧಾರದ ಮೇಲೆ ಟಾಪರ್‌ಗಳಾಗಿದ್ದಾರೆ. ಇನ್ನು ಹರಿಯಾಣದಲ್ಲಿ ಒಂದೇ ಕೇಂದ್ರದಲ್ಲಿ ಪರೀಕ್ಷೆ ಬರೆದ ಆರು ವಿದ್ಯಾರ್ಥಿಗಳು ಜಂಟಿಯಾಗಿ ಟಾಪ್ ಸ್ಥಾನ ಪಡೆದಿದ್ದಾರೆ. ಇದರಿಂದಾಗಿ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ, ಪ್ರಶ್ನೆಪತ್ರಿಕೆ ಸೋರಿಕೆ ಮಾಡಲಾಗಿದೆ ಎಂದು ಕೆಲವು ಪೋಷಕರು ಆರೋಪಿಸಿದ್ದಾರೆ. ಹೀಗಾಗಿ ಮರು ಪರೀಕ್ಷೆ ನಡೆಸಬೇಕು ಎಂದು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ.
ಇದನ್ನೂ ಓದಿ: NEET UG 2024: ನೀಟ್‌ನಲ್ಲಿ ಹೆಚ್ಚು ಅಂಕ ಗಳಿಸಲು ಏನು ಮಾಡಬೇಕು? ಈ ಟಾಪರ್ ಹೇಳೋದು ಕೇಳಿ
1,500 ವಿದ್ಯಾರ್ಥಿಗಳ ಪತ್ರಿಕೆ ಮರು ಮೌಲ್ಯಮಾಪನಕ್ಕೆ ಸಮಿತಿ ರಚನೆ
ವೈದ್ಯಕೀಯ ಕೋರ್ಸ್‌ಗಳ ಪ್ರವೇಶಾತಿಗಾಗಿ ನಡೆದ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಗ್ರೇಸ್ ಮಾರ್ಕ್ಸ್ ಪಡೆದ 1,500 ವಿದ್ಯಾರ್ಥಿಗಳ ಫಲಿತಾಂಶವನ್ನು ಮರು ಮೌಲ್ಯಮಾಪನ ಮಾಡಲು ಸಮಿತಿಯೊಂದನ್ನು ರಚಿಸಿದೆ ಎಂದು ಎನ್‌ಟಿಎ ಜೂನ್ 8ರಂದು ಮಾಹಿತಿ ನೀಡಿತ್ತು.
“ನೀಟ್ ಬರೆದ ಅಭ್ಯರ್ಥಿಗಳಿಗೆ ರ‍್ಯಾಂಕ್ ನೀಡುವ ಮಾನದಂಡಕ್ಕೆ ಗ್ರೇಸ್ ಮಾರ್ಕ್ಸ್ ನೀಡಿರುವುದರಿಂದ ಯಾವುದೇ ಪರಿಣಾಮ ಉಂಟಾಗಿಲ್ಲ. ಆದರೂ ಗ್ರೇಸ್ ಮಾರ್ಕ್ಸ್ ಪಡೆದವರ ಉತ್ತರ ಪತ್ರಿಕೆಗಳನ್ನು ಮತ್ತೆ ಮೌಲ್ಯಮಾಪನ ಮಾಡಲಾಗುತ್ತದೆ. ಕೇಂದ್ರ ಶಿಕ್ಷಣ ಸಚಿವಾಲಯವು ಈ ಕುರಿತು ಸಮಿತಿಯೊಂದನ್ನು ರಚಿಸಿದೆ. ಮರು ಮೌಲ್ಯಮಾಪನದಿಂದ ವಿದ್ಯಾರ್ಥಿಗಳು ಕೋರ್ಸ್‌ಗಳಿಗೆ ಪ್ರವೇಶಾತಿ ಪಡೆಯಲು ಯಾವುದೇ ಪರಿಣಾಮ ಉಂಟಾಗುವುದಿಲ್ಲ” ಎಂಬುದಾಗಿ ಎನ್‌ಟಿಎ ಮಹಾ ನಿರ್ದೇಶಕ ಸುಬೋಧ್ ಸಿಂಗ್ ಮಾಹಿತಿ ನೀಡಿದ್ದರು. ಹಾಗೆಯೇ ಪರೀಕ್ಷೆಯಲ್ಲಿ ಅಕ್ರಮ ನಡೆದಿಲ್ಲ, ಪ್ರಶ್ನೆಪತ್ರಿಕೆಗಳ ಸೋರಿಕೆಯಾಗಿಲ್ಲ ಎಂದು ಸ್ಪಷ್ಟಪಡಿಸಿದ್ದರು.