ನವ ದೆಹಲಿ: ಕೊಲಿಜಿಯಂ ವ್ಯವಸ್ಥೆ ಈ ನೆಲದ ಕಾನೂನಿಗೆ ಸಂಬಂಧಿಸಿದ್ದು. ಅದನ್ನು ಅನುಸರಿಸಬೇಕು ಎಂದು ಸುಪ್ರೀಂಕೋರ್ಟ್ (Supreme Court) ಕೇಂದ್ರ ಸರ್ಕಾರಕ್ಕೆ ತಿಳಿಸಿದೆ.
ಸಮಾಜದ ಕೆಲವು ವರ್ಗ ಭಿನ್ನ ನಿಲುವನ್ನು ಹೊಂದಿದೆ ಎಂದ ಮಾತ್ರಕ್ಕೆ ಕೊಲಿಜಿಯಂ ವ್ಯವಸ್ಥೆಯನ್ನು ಅನುಸರಿಸದಿರುವುದು ಸಮಂಜಸವಲ್ಲ. ಸಾಂವಿಧಾನಿಕ ಪೀಠದ ತೀರ್ಪಿನ ಮೇರೆಗೆ ನ್ಯಾಯಾಧೀಶರ ನೇಮಕಕ್ಕೆ ಕೊಲಿಜಿಯಂ ಅನ್ನು ರಚಿಸಲಾಗಿದೆ ಎಂದು ಸುಪ್ರೀಂಕೋರ್ಟ್ ಪ್ರತಿಪಾದಿಸಿದೆ.
” ಸಂಸತ್ತಿನಲ್ಲಿ ರಚನೆಯಾದ ಕಾನೂನುಗಳನ್ನು ಸಮಾಜದ ಕೆಲ ವರ್ಗಗಳು ಒಪ್ಪದಿರಬಹುದು. ಹಾಗಂತ ಆ ಕಾನೂನುಗಳನ್ನು ಸುಪ್ರೀಂಕೋರ್ಟ್ ರದ್ದುಪಡಿಸಲು ಸಾಧ್ಯವೇ?ʼʼ ಎಂದು ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್ ನೇತೃತ್ವದ ಪೀಠವು ಅಟಾರ್ನಿ ಜನರಲ್ ಆರ್. ವೆಂಕಟರಮಣಿ ಅವರಿಗೆ ತಿಳಿಸಿತು.
ಸಮಾಜದಲ್ಲಿರುವ ಪ್ರತಿಯೊಬ್ಬರೂ ಇಂಥ ಕಾನೂನು ಬೇಕು ಅಥವಾ ಬೇಡ ಎಂದು ನಿರ್ಧರಿಸಿದರೆ, ವ್ಯವಸ್ಥೆ ಕುಸಿಯುತ್ತದೆ ಎಂದು ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್ ಎಚ್ಚರಿಸಿದರು.
ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್, ಅಭಯ್ ಎಸ್ ಓಕಾ ಮತ್ತು ವಿಕ್ರಮ್ ನಾಥ್ ಅವರನ್ನು ಒಳಗೊಂಡಿದ್ದ ಪೀಠವು, ಬೆಂಗಳೂರಿನ ವಕೀಲರ ಸಂಘವು, ಕೇಂದ್ರ ಸರ್ಕಾರದ ವಿರುದ್ಧ ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿಯ ವಿಚಾರಣೆ ನಡೆಸುತ್ತಿದೆ. ನ್ಯಾಯಾಧೀಶರ ನೇಮಕಾತಿಯಲ್ಲಿ ವಿಳಂಬವಾಗಿರುವ ಹಿನ್ನೆಲೆಯಲ್ಲಿ ನ್ಯಾಯಾಂಗ ನಿಂದನೆ ಪ್ರಕರಣ ಅರ್ಜಿ ಸಲ್ಲಿಸಲಾಗಿತ್ತು.