Site icon Vistara News

Supreme Court: ಬೆರಳ ತುದಿಯಲ್ಲಿ ಕೇಸ್‌ ಮಾಹಿತಿ; ಜುಡಿಷಿಯಲ್‌ ಡೇಟಾ ಗ್ರಿಡ್‌ ವ್ಯಾಪ್ತಿಗೆ ಸುಪ್ರೀಂ, ಏನಿದು?

8 votes cast in Chandigarh mayoral election were Valid Says Supreme Court

ನವದೆಹಲಿ: ದೇಶದ ನ್ಯಾಯಾಂಗ ವ್ಯವಸ್ಥೆಯಲ್ಲಿ ಡಿಜಿಟಲ್‌ ತಂತ್ರಜ್ಞಾನದ ಅಳವಡಿಕೆ ಸೇರಿ ಹಲವು ಸುಧಾರಣೆಗಳಿಗಾಗಿ ಕೇಂದ್ರ ಸರ್ಕಾರವು ಮೂರನೇ ಹಂತದ ಇ-ಕೋರ್ಟ್ಸ್‌ ಯೋಜನೆಗೆ (eCourts Project Phase III) 7,210 ಕೋಟಿ ರೂಪಾಯಿ ವಿನಿಯೋಗಿಸಲು ಸಮ್ಮತಿ ಸೂಚಿಸಿದ ಬೆನ್ನಲ್ಲೇ ಸುಪ್ರೀಂ ಕೋರ್ಟ್‌ ಮತ್ತೊಂದು ಐತಿಹಾಸಿಕ ಹೆಜ್ಜೆ ಇರಿಸಿದೆ. “ಕೆಲವೇ ದಿನಗಳಲ್ಲಿ ಸುಪ್ರೀಂ ಕೋರ್ಟ್‌ (Supreme Court) ರಾಷ್ಟ್ರೀಯ ನ್ಯಾಯಾಂಗ ದತ್ತಾಂಶ ಗ್ರಿಡ್‌ (National Judicial Data Grid Platform-NJDG) ವೇದಿಕೆ ವ್ಯಾಪ್ತಿಗೆ ಬರಲಿದೆ” ಎಂದು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ಘೋಷಿಸಿದ್ದಾರೆ.

“ಸುಪ್ರೀಂ ಕೋರ್ಟ್‌ ಪಾಲಿಗೆ ಇದೊಂದು ಐತಿಹಾಸಿಕ ದಿನ. ಶೀಘ್ರದಲ್ಲೇ ನ್ಯಾಷನಲ್‌ ಜುಡಿಷಿಯಲ್‌ ಡೇಟಾ ಗ್ರಿಡ್‌ ಪ್ಲಾಟ್‌ಫಾರ್ಮ್‌ ವ್ಯಾಪ್ತಿಗೆ ಸುಪ್ರೀಂ ಕೋರ್ಟ್‌ ಬರಲಿದೆ. ಇದೊಂದು ವಿಶಿಷ್ಟ ವೇದಿಕೆಯಾಗಿದ್ದು, ನ್ಯಾಷನಲ್‌ ಇನ್ಫಾರ್ಮೇಟಿಕ್ಸ್‌ ಸೆಂಟರ್‌ (NIC) ಇದನ್ನು ಅಭಿವೃದ್ಧಿಪಡಿಸಿದೆ. ಇದರಿಂದ ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇರುವ ಕೇಸ್‌ಗಳನ್ನು ಜನ ಒಂದೇ ಕ್ಲಿಕ್‌ನಲ್ಲಿ ತಿಳಿಯಬಹುದಾಗಿದೆ” ಎಂದು ಸಿಜೆಐ ಡಿ.ವೈ.ಚಂದ್ರಚೂಡ್‌ ತಿಳಿಸಿದ್ದಾರೆ.

ಏನಿದು ಗ್ರಿಡ್‌?

ನ್ಯಾಷನಲ್‌ ಜುಡಿಷಿಯಲ್‌ ಡೇಟಾ ಗ್ರಿಡ್‌ ಎಂಬುದು ನ್ಯಾಯಾಂಗ ವ್ಯವಸ್ಥೆಯ ಮಾಹಿತಿ ನೀಡುವ ಪೋರ್ಟಲ್‌ ಆಗಿದೆ. ದೇಶದ ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳು, ಇತ್ಯರ್ಥವಾದ ಪ್ರಕರಣಗಳು, ಕ್ರಿಮಿನಲ್‌ ಪ್ರಕರಣಗಳು, ಸಿವಿಲ್‌ ಪ್ರಕರಣಗಳು ಸೇರಿ ಹಲವು ಮಾಹಿತಿಯನ್ನು ಒದಗಿಸುತ್ತದೆ. ಇದುವರೆಗೆ ದೇಶದ ಜಿಲ್ಲೆಗಳು ಹಾಗೂ ತಾಲೂಕುಗಳ ನ್ಯಾಯಾಲಯಗಳಲ್ಲಿರುವ ಬಾಕಿ ಇರುವ ಪ್ರಕರಣಗಳನ್ನು ಮಾತ್ರ ಪೋರ್ಟಲ್‌ನಲ್ಲಿ ಬಹಿರಂಗಪಡಿಸಲಾಗುತ್ತಿತ್ತು. ಆದರೆ, ಕೆಲವೇ ದಿನಗಳಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇರುವ ಪ್ರಕರಣಗಳು, ಇತ್ಯರ್ಥವಾದ ಪ್ರಕರಣಗಳು ಸೇರಿ ಯಾವುದೇ ಮಾಹಿತಿಯನ್ನು ಬೆರಳ ತುದಿಯಲ್ಲಿ ಪಡೆಯಬಹುದಾಗಿದೆ.

ಇದನ್ನೂ ಓದಿ: Union Cabinet: ಇ-ಕೋರ್ಟ್ಸ್ 3ನೇ ಹಂತದ ಪ್ರಾಜೆಕ್ಟ್‌ ಜಾರಿಗೆ ಕೇಂದ್ರ ಒಪ್ಪಿಗೆ, ಇದಕ್ಕಾಗಿ 7210 ಕೋಟಿ ರೂಪಾಯಿ ವೆಚ್ಚ

80 ಸಾವಿರ ಕೇಸ್‌ ಬಾಕಿ

ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಉಳಿದಿರುವ ಪ್ರಕರಣಗಳ ಕುರಿತು ಸಿಜೆಐ ಡಿ.ವೈ.ಚಂದ್ರಚೂಡ್‌ ಮಾಹಿತಿ ನೀಡಿದರು. “ಸುಪ್ರೀಂ ಕೋರ್ಟ್‌ನಲ್ಲಿ ಈಗ 80 ಸಾವಿರ ಪ್ರಕರಣಗಳು ಬಾಕಿ ಉಳಿದಿವೆ. ಇನ್ನೂ 15 ಸಾವಿರ ಪ್ರಕರಣಗಳು ನೋಂದಣಿಯಾಗದ ಕಾರಣ ಅವುಗಳನ್ನು ಬಾಕಿ ಪ್ರಕರಣಗಳ ಪಟ್ಟಿಗೆ ಸೇರಿಸಿಲ್ಲ. ಕ್ಷಿಪ್ರವಾಗಿ ಪ್ರಕರಣಗಳ ಇತ್ಯರ್ಥಕ್ಕೆ ನ್ಯಾಯಾಲಯ ಆದ್ಯತೆ ನೀಡುತ್ತಿದೆ. ಜುಲೈ ತಿಂಗಳಲ್ಲಿ 5 ಸಾವಿರ ಕೇಸ್‌ಗಳನ್ನು ಇತ್ಯರ್ಥಗೊಳಿಸಲಾಗಿದೆ” ಎಂದು ತಿಳಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಬುಧವಾರ (ಸೆಪ್ಟೆಂಬರ್‌ 13) ನಡೆದ ಕೇಂದ್ರ ಸಚಿವ ಸಂಪುಟವು ಮೂರನೇ ಹಂತದ ಇ-ಕೋರ್ಟ್ಸ್ ಯೋಜನೆಗೆ ನಾಲ್ಕು ವರ್ಷಗಳವರೆಗೆ 7,210 ರೂಪಾಯಿ ಕೋಟಿಗಳ ಆರ್ಥಿಕ ವೆಚ್ಚದೊಂದಿಗೆ ಕೇಂದ್ರ ವಲಯದ ಯೋಜನೆಯಾಗಿ ಅನುಮೋದಿಸಿದೆ. ಇ-ಕೋರ್ಟ್ಸ್‌ನ ಒಂದು ಮತ್ತು ಎರಡು ಹಂತಗಳು ಈಗಾಗಲೇ ಪೂರ್ಣಗೊಂಡಿವೆ. ಇದೀಗ ಮೂರನೇ ಹಂತದ ಜಾರಿಗೆ ಕೇಂದ್ರ ಸರ್ಕಾರವು ಒಪ್ಪಿಗೆ ನೀಡಿದೆ.

Exit mobile version