ನವದೆಹಲಿ: ಕೇಂದ್ರ ಸರ್ಕಾರದ ಶೇ.10 ಆರ್ಥಿಕವಾಗಿ ಹಿಂದುಳಿದ ವರ್ಗ(ಇಡಬ್ಲ್ಯೂಎಸ್) ಮೀಸಲು (EWS Quota) ಸಿಂಧುತ್ವಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ (Supreme Court) ಸೋಮವಾರ ಎರಡು ಪ್ರತ್ಯೇಕ ತೀರ್ಪುಗಳನ್ನು ಪ್ರಕಟಿಸಲಿದೆ. ನ.7ರಂದು ಬೆಳಗ್ಗೆ 10.30ಕ್ಕೆ ತೀರ್ಪು ಹೊರ ಬೀಳುವ ಸಾಧ್ಯತೆಗಳಿವೆ. ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಯು ಯು ಲಲಿತ್ ಮತ್ತು ಜಸ್ಟೀಸ್ ಎಸ್ ರವೀಂದ್ರ ಭಟ್ ಅವರು ಪ್ರತ್ಯೇಕ ತೀರ್ಪುಗಳನ್ನು ನೀಡಲಿದ್ದಾರೆ.
ಆರ್ಥಿಕವಾಗಿ ಹಿಂದುಳಿದ ವರ್ಗ(EWS)ಕ್ಕಾಗಿ ಕೇಂದ್ರ ಸರ್ಕಾರವು ಶೇ.10 ಮೀಸಲು ಜಾರಿ ಮಾಡಿತ್ತು. ಕೇಂದ್ರ ಸರ್ಕಾರದ ಈ ನಿರ್ಧಾರವನ್ನು ಪ್ರಶ್ನಿಸಿ ಅನೇಕ ಅರ್ಜಿಗಳು ಸುಪ್ರೀಂ ಕೋರ್ಟ್‌ಗೆ ದಾಖಲಾಗಿದ್ದವು. ಈ ಎಲ್ಲ ಅರ್ಜಿಗಳನ್ನು ಒಂದುಗೂಡಿಸಿ, ಸತತವಾಗಿ ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಿತ್ತು. ಇದೀಗ ಸೋಮವಾರ ತನ್ನ ತೀರ್ಪು ಪ್ರಕಟಿಸಲಿದೆ.
ಮುಖ್ಯ ನ್ಯಾಯಮೂರ್ತಿ ಯು ಯು ಲಲಿತ್ ಅವರನ್ನು ಒಳಗೊಂಡಂತೆ ಒಟ್ಟು ಐದು ನ್ಯಾಯಮೂರ್ತಿಗಳ ಪೀಠ EWS ಮೀಸಲು ಸಿಂಧತ್ವದ ವಿಚಾರಣೆ ನಡೆಸಿದೆ. ಈ ಪೀಠದಲ್ಲಿ ನ್ಯಾಯಮೂರ್ತಿಗಳಾದ ದಿನೇಶ್ ಮಹೇಶ್ವರಿ, ಎಸ್ ರವೀಂದ್ರ ಭಟ್, ಬೇಲಾ ಎಂ ತ್ರಿವೇದಿ ಮತ್ತು ಜೆ ಬಿ ಪರ್ದಿವಾಲಾ ಅವರಿದ್ದರು. ವಿಶೇಷ ಎಂದರೆ, ಮುಖ್ಯ ನ್ಯಾಯಮೂರ್ತಿ ಲಲಿತ್ ಅವರು ನವೆಂಬರ್ 8 ಅಂದರೆ ಮಂಗಳವಾರ ನಿವೃತ್ತರಾಗಲಿದ್ದಾರೆ. ಅವರು ನೀಡುವ ಪ್ರಮುಖ ಕೊನೆಯ ತೀರ್ಪು ಇದಾಗಲಿದೆ.
ಇದನ್ನೂ ಓದಿ | Umesh Reddy | ವಿಕೃತ ಕಾಮಿ ಉಮೇಶ್ ರೆಡ್ಡಿ ಗಲ್ಲು ಶಿಕ್ಷೆ ರದ್ದುಗೊಳಿಸಿದ ಸುಪ್ರೀಂ ಕೋರ್ಟ್