ನವದೆಹಲಿ: ಕರ್ನಾಟಕದಲ್ಲಿ (Karnataka) ಜಾರಿಯಲ್ಲಿದ್ದ ಮುಸ್ಲಿಮರಿಗೆ ಶೇ.4 ಮೀಸಲು (Muslim Quota) ರದ್ದುಗೊಳಿಸಿದ್ದನ್ನು ಪ್ರಶ್ನಿಸಿ ದಾಖಲಾಗಿರುವ ಅರ್ಜಿಗಳ ವಿಚಾರಣೆಗೆ ಸುಪ್ರೀಂ ಕೋರ್ಟ್ (Supreme Court) ಒಪ್ಪಿಕೊಂಡಿದೆ. ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಹಾಗೂ ಜಸ್ಟೀಸ್ ಪಿ ಎಸ್ ನರಸಿಂಹ, ಜಸ್ಟೀಸ್ ಜೆ ಬಿ ಪರ್ದಿವಾಲಾ ಅವರಿದ್ದ ಪೀಠವು, ಹಿರಿಯ ನ್ಯಾಯವಾದಿ ಕಪಿಲ್ ಸಿಬಲ್ ಅವರ ಸಲ್ಲಿಸಿದ್ದ ಅರ್ಜಿ ವಿಚಾರಣೆಗೆ ಸಮ್ಮತಿಸಿದೆ. ಶೀಘ್ರವೇ ಅರ್ಜಿಯನ್ನು ಲಿಸ್ಟ್ ಮಾಡಲಾಗುವುದು ಎಂದು ಪೀಠ ಹೇಳಿದೆ.
ಕರ್ನಾಟಕದಲ್ಲಿ ಮುಸ್ಲಿಮ್ ಸಮುದಾಯಕ್ಕೆ ನೀಡಲಾಗಿದ್ದ ಶೇ.4 ಮೀಸಲಾತಿ ರದ್ದು ಕುರಿತು ಸಂಬಂಧಿಸಿದ ಅರ್ಜಿ ಇದಾಗಿದ್ದು, ನ್ಯಾಯಾಲಯಕ್ಕೆ ಸಲ್ಲಿಸುತ್ತಿದ್ದೇನೆ ಎಂದು ಕಪಿಲ್ ಸಿಬಲ್ ಪೀಠದ ಮುಂದೆ ಹೇಳಿದರು. ಆಗ ಸಿಜೆಐ ಡಿ ವೈ ಚಂದ್ರಚೂಡ್ ಅವರು ಈ ಅರ್ಜಿಯಲ್ಲಿರುವ ನ್ಯೂನ್ಯತೆಗಳನ್ನು ಸರಿಪಡಿಸಿಲ್ಲ ಎಂದರು. ಇದಕ್ಕೆ ಉತ್ತರಿಸಿದ ಕಪಿಲ್ ಸಿಬಲ್, ಎಲ್ಲ ದೋಷಗಳನ್ನು ಸರಿಪಡಿಸಲಾಗಿದೆ ಎಂದು ಹೇಳಿದರು. ಕೂಡಲೇ ಪೀಠವು, ಹಾಗಾದರೆ, ವಿಚಾರಣೆಗೆ ದಿನ ನಿಗದಿ ಮಾಡಲಾಗುವುದು ಎಂದು ಹೇಳಿತು.
ಇತ್ತೀಚೆಗಷ್ಟೇ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರವು, ಮುಸ್ಲಿಮ್ ಸಮುದಾಯಕ್ಕೆ ನೀಡಲಾಗಿದ್ದ ಶೇ.4 ಮೀಸಲಾತಿಯನ್ನು ರದ್ದುಗೊಳಿಸುವ ತೀರ್ಮಾನ ಕೈಗೊಂಡಿತ್ತು.
ಕರ್ನಾಟಕ ಸರ್ಕಾರವು ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿಗಾಗಿ ಎರಡು ಹೊಸ ವರ್ಗಗಳನ್ನು ಘೋಷಿಸಿತು. ಅಲ್ಲದೇ, ಇತರ ಹಿಂದುಳಿದ ವರ್ಗಗಳ (OBC) ಮುಸ್ಲಿಮರಿಗೆ ನೀಡಲಾಗಿದ್ದ ಶೇ4. ಮೀಸಲಾತಿಯನ್ನು ರದ್ದುಗೊಳಿಸಿತ್ತು. ಬಳಿಕ, ಇದೇ ಶೇ.4 ಮೀಸಲಾತಿಯನ್ನು ವಿಭಾಗಿಸಿ, ಶೇ.2 ಮೀಸಲಾತಿಯನ್ನು ಲಿಂಗಾಯತರು ಮತ್ತು ಶೇ.2 ಮೀಸಲಾತಿಯನ್ನು ಒಕ್ಕಲಿಗರಿಗೆ ಹಂಚಿದ್ದರು. ಮೀಸಲಾತಿ ವಂಚಿತ ಮುಸ್ಲಿಮ್ ಸಮುದಾಯವನ್ನು ಇಡಬ್ಲ್ಯೂಎಸ್ ಕೆಟಗರಿಗೆ ಸೇರಿಸಿ, ತೀರ್ಮಾನ ಕೈಗೊಂಡಿದ್ದರು.
ಇದನ್ನೂ ಓದಿ: Muslim Reservation: ಕ್ರೈಸ್ತ, ಜೈನರಿಗೆ ಮೀಸಲಾತಿ ಮುಂದುವರಿಕೆ; ಮುಸ್ಲಿಮರು ಮಾತ್ರ ಹೊರಕ್ಕೆ: ವರ್ಗೀಕರಣದ ಕುರಿತು ಚರ್ಚೆ
ರಾಜ್ಯ ಸರ್ಕಾರದ ಈ ನಿರ್ಧಾರವನ್ನು ಪ್ರಶ್ನಿಸಿ ಕೆಲವರು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಈಗ ನ್ಯಾಯಾಲಯವು ಅರ್ಜಿ ವಿಚಾರಣೆಗೆ ಒಪ್ಪಿಗೆ ನೀಡಿದ್ದರಿಂದ, ಈ ಬಗ್ಗೆ ಕುತೂಹಲ ಹೆಚ್ಚಾಗಿದೆ.