ನವದೆಹಲಿ: ಅಗ್ನಿಪಥ ಯೋಜನೆಯ (Agnipath scheme) ಸಿಂಧುತ್ವವನ್ನು ಎತ್ತಿ ಹಿಡಿದಿದ್ದ ದೆಹಲಿ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ದಾಖಲಾಗಿದ್ದ ಅರ್ಜಿಗಳನ್ನು ಸುಪ್ರೀಂ ಕೋರ್ಟ್ (Supreme Court) ಸೋಮವಾರ ವಜಾ ಮಾಡಿದೆ. ಈ ಕುರಿತು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಅಗ್ನಿಪಥವು ಸಿಂಧುತ್ವವನ್ನು ಹೊಂದಿದ್ದು, ನಿರಂಕುಶವಾಗಿಲ್ಲ ಎಂದು ಹೇಳಿದೆ. ಅಲ್ಲದೇ, ಅಗ್ನಿಪಥ್ ಯೋಜನೆಯನ್ನು ಪರಿಚಯಿಸುವ ಮೊದಲು ರಕ್ಷಣಾ ನೇಮಕಾತಿ ಪ್ರಕ್ರಿಯೆಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ನೇಮಕಾತಿಯ ಹಕ್ಕನ್ನು ಹೊಂದಿಲ್ಲ ಎಂದು ನ್ಯಾಯಾಲಯವು ಹೇಳಿತು.
ಹಾಗೆಯೇ, ಭಾರತೀಯ ವಾಯು ಪಡೆಯಲ್ಲಿ ಅಗ್ನಿಪಥ ಯೋಜನೆಯನ್ನು ಪರಿಚಯಿಸುವ ಮುಂಚಿನ ನೇಮಕಾತಿಗೆ ಸಂಬಂಧಿಸಿದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಏಪ್ರಿಲ್ 17ಕ್ಕೆ ನಿಗದಿ ಮಾಡಿದೆ.
ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್, ಜಸ್ಟೀಸ್ ಪಿ ಎಸ್ ನರಸಿಂಹ ಮತ್ತು ಜಸ್ಟೀಸ್ ಜೆ ಬಿ ಪರ್ದಿವಾಲಾ ಅವರಿದ್ದ ಪೀಠವು ದಿಲ್ಲಿ ಹೈಕೋರ್ಟ್ ನೀಡಿದ್ದ ಆದೇಶವನ್ನು ಪ್ರಶ್ನಿಸಿ ದಾಖಲಾಗಿದ್ದ ಎರಡು ಅರ್ಜಿಗಳ ವಿಚಾರಣೆಯನ್ನು ನಡೆಸಿತು. ಈ ವಿಷಯದಲ್ಲಿ ನಾವು(ಕೋರ್ಟ್) ಮಧ್ಯಪ್ರವೇಶಿಸಬೇಕಾದ ಅಗತ್ಯವಿಲ್ಲ. ಇದು ಸಾರ್ವಜನಿಕ ಉದ್ಯೋಗಕ್ಕೆ ಸಂಬಂಧಿಸಿದ ವಿಷಯವಾಗಿ ಹೊರತು ಒಪ್ಪಂದದಲ್ಲ ಎಂದು ಸಿಜೆಐ ಹೇಳಿದರು.
ಈ ಮೊದಲು ಆರಂಭವಾದ ನೇಮಕಾತಿ ಪ್ರಕ್ರಿಯೆಗೆ ಸಂಬಂಧಿಸಿದಂತೆ, ದೈಹಿಕ ಮತ್ತು ವೈದ್ಯಕೀಯ ಪರೀಕ್ಷೆ ನಡೆದಿದೆ. ಆದರೆ ಪ್ರವೇಶ ಪರೀಕ್ಷೆ ನಡೆಯಲಿಲ್ಲ. ಹೊಸ ಯೋಜನೆ ಜಾರಿಯಾದಾಗ, ಈ ಹಿಂದಿನ ಪ್ರಕ್ರಿಯೆ ಮುಂದುವರಿಸಲು ಹೋಗಲಿಲ್ಲ. ಹಾಗಾಗಿ, ಇದರಲ್ಲಿ ಯಾವುದೇ ಸ್ಥಾಪಿತ ಆಸಕ್ತಿಗಳು ಇಲ್ಲ ಎಂದು ಸಿಜೆಐ ಹೇಳಿದರು. ಅಗ್ನಿಪಥ್ ಯೋಜನೆಯನ್ನು ಪರಿಚಯಿಸುವ ಮೊದಲು ರ್ಯಾಲಿಗಳು, ದೈಹಿಕ ಮತ್ತು ವೈದ್ಯಕೀಯ ಪರೀಕ್ಷೆಗಳಂತಹ ನೇಮಕಾತಿ ಪ್ರಕ್ರಿಯೆಗಳ ಮೂಲಕ ಮೊದಲು ಆಯ್ಕೆಯಾದವರಿಗೆ ನೇಮಕಾತಿಯ ಹಕ್ಕನ್ನು ಹೊಂದಿಲ್ಲ ಎಂದು ಪೀಠ ಹೇಳಿದೆ.
ಗೋಪಾಲ್ ಕೃಷ್ಣನ್ ಅಡ್ವೋಕೆಟ್ ಎಂ ಎಲ್ ಶರ್ಮಾ ಅವರು ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಹಾಕಿದ್ದರು.
ಅಗ್ನಿಪಥ ಕುರಿತು ಸುಳ್ಳು ಮಾಹಿತಿ, ಯುಟ್ಯೂಬ್ ವಿಡಿಯೊ ಬ್ಲಾಕ್
ದೇಶದ ಭದ್ರತೆಗೆ ಧಕ್ಕೆ, ಧಾರ್ಮಿಕ ಭಾವನೆಗಳನ್ನು ಕೆರಳಿಸುವುದು, ಭಾರತೀಯ ಸೇನೆ ಕುರಿತು ಸುಳ್ಳು ಮಾಹಿತಿ ಹರಡುವುದು ಸೇರಿ ಹಲವು ಅಂಶಗಳು ಇರುವ ಕಾರಣ ಕೇಂದ್ರ ಸರ್ಕಾರವು 10 ಯುಟ್ಯೂಬ್ ಚಾನೆಲ್‌ಗಳ 45 ವಿಡಿಯೊಗಳನ್ನು ಕಳೆದ ವರ್ಷದ ಸೆಪ್ಟೆಂಬರ್ ತಿಂಗಳಲ್ಲಿ ಬ್ಲಾಕ್ (45 Videos Blocked) ಮಾಡಿತ್ತು.
“ದೇಶದ ಸೌಹಾರ್ದತೆಗೆ ಭಂಗ ಉಂಟು ಮಾಡುವುದು, ಅಗ್ನಿಪಥ, ಸೈನಿಕರ ಕುರಿತು ಸುಳ್ಳು ಮಾಹಿತಿ ಪಸರಿಸುವುದು, ಭದ್ರತೆಗೆ ಧಕ್ಕೆ ತರುವ ಅಂಶಗಳನ್ನು ಹರಡುವುದು, ಕೋಮುಗಲಭೆಗೆ ಧಕ್ಕೆ ತರುವ ವಿಷಯಗಳು ಇರುವ ೪೫ ವಿಡಿಯೊಗಳನ್ನು ಬ್ಲಾಕ್ ಮಾಡಲಾಗಿದೆ” ಎಂದು ಕೇಂದ್ರ ಸರ್ಕಾರ ತನ್ನ ಅಧಿಸೂಚನೆಯಲ್ಲಿ ತಿಳಿಸಿತ್ತು.
ಇದನ್ನೂ ಓದಿ: Agnipath scheme : ಅಗ್ನಿಪಥ್ ಯೋಜನೆಯ ಸಿಂಧುತ್ವ ಎತ್ತಿ ಹಿಡಿದ ದಿಲ್ಲಿ ಹೈಕೋರ್ಟ್, ನ್ಯಾಯಾಲಯ ಹೇಳಿದ್ದೇನು?
10 ಚಾನೆಲ್‌ಗಳ 45 ವಿಡಿಯೊಗಳನ್ನು 1.3 ಕೋಟಿ ಜನ ವೀಕ್ಷಿಸಿದ್ದಾರೆ. ಹಿಂಸೆಗೆ ಪ್ರಚೋದನೆ ಸೇರಿ ಹಲವು ಗಂಭೀರ ಅಂಶಗಳು ಇದ್ದ ಕಾರಣ ವಿಡಿಯೊಗಳನ್ನು ಬ್ಲಾಕ್ ಮಾಡಲಾಗಿದೆ ಎಂದು ಸರ್ಕಾರ ಮಾಹಿತಿ ನೀಡಿತ್ತು. “ಭಾರತ ವಿರೋಧಿ ಕೃತ್ಯಗಳನ್ನು ನಾವು ಯಾವುದೇ ಕಾರಣಕ್ಕೂ ಸಹಿಸಿಕೊಳ್ಳುವುದಿಲ್ಲ. ದೇಶದ ಸಾಮರಸ್ಯ, ಸೌಹಾರ್ದತೆ, ಭದ್ರತೆಗೆ ಧಕ್ಕೆ ತಂದ ಹಿನ್ನೆಲೆಯಲ್ಲಿ ಬ್ಲಾಕ್ ಮಾಡಲಾಗಿದೆ” ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ತಿಳಿಸಿದ್ದರು. ಇದೇ ಕಾರಣಕ್ಕೆ ಈಗಾಗಲೇ ಹಲವು ಯುಟ್ಯೂಬ್ ಚಾನೆಲ್, ಆ್ಯಪ್‌ಗಳನ್ನು ನಿಷೇಧಿಸಿದೆ.