Site icon Vistara News

Akbar Nagar: ಉತ್ತರ ಪ್ರದೇಶದ ಅಕ್ಬರ್‌ ನಗರದ ಅಕ್ರಮ ಮನೆಗಳ ಧ್ವಂಸಕ್ಕೆ ಸುಪ್ರೀಂ ಕೋರ್ಟ್‌ ಅಸ್ತು!

lok sabha election 2024 supreme court

ಲಖನೌ: ಉತ್ತರ ಪ್ರದೇಶದ (Uttar Pradesh) ಲಖನೌನಲ್ಲಿರುವ ಅಕ್ಬರ್‌ ನಗರದಲ್ಲಿ (Akbar Nagar) ಅಕ್ರಮವಾಗಿ ನಿರ್ಮಿಸಲಾಗಿರುವ ಎಲ್ಲ ಮನೆಗಳನ್ನು ನೆಲಸಮಗೊಳಿಸಲು ಸುಪ್ರೀಂ ಕೋರ್ಟ್‌ (Supreme Court) ಗ್ರೀನ್‌ ಸಿಗ್ನಲ್‌ ನೀಡಿದೆ. ಇದರೊಂದಿಗೆ ಅಕ್ಬರ್‌ ನಗರದಲ್ಲಿ ಕಟ್ಟಡಗಳ ನೆಲಸಮಗೊಳಿಸುವ ಕುರಿತು ಲಖನೌ ಅಭಿವೃದ್ಧಿ ಪ್ರಾಧಿಕಾರ (LDA) ತೆಗೆದುಕೊಂಡ ನಿರ್ಧಾರಕ್ಕೆ ಭಾರಿ ಮುನ್ನಡೆ ಸಿಕ್ಕಂತಾಗಿದೆ. ಶೀಘ್ರದಲ್ಲಿಯೇ ಅಕ್ಬರ್‌ ನಗರದಲ್ಲಿರುವ ಎಲ್ಲ ಮನೆಗಳನ್ನು ನೆಲಸಮಗೊಳಿಸಲಾಗುತ್ತದೆ ಎಂದು ತಿಳಿದುಬಂದಿದೆ.

ಅಕ್ಬರ್‌ ನಗರದಲ್ಲಿ ನೆಲಸಮ ಕಾರ್ಯಾಚರಣೆ ಕೈಗೊಳ್ಳಲು ಅನುಮತಿ ನೀಡಿದ ಅಲಹಾಬಾದ್‌ ಹೈಕೋರ್ಟ್‌ ಆದೇಶ ಪ್ರಶ್ನಿಸಿ ಸಲ್ಲಿಕೆಯಾದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಸಂಜೀವ್‌ ಖನ್ನಾ ಹಾಗೂ ದೀಪಾಂಕರ್‌ ದತ್ತಾ ನೇತೃತ್ವದ ನ್ಯಾಯಪೀಠವು, ಲಖನೌ ಅಭಿವೃದ್ಧಿ ಪ್ರಾಧಿಕಾರಕ್ಕೆ ನೆಲಸಮ ಕಾರ್ಯಾಚರಣೆ ಕೈಗೊಳ್ಳಲು ಅನುಮತಿ ನೀಡಿತು. “ಕಟ್ಟಡಗಳನ್ನು ನೆಲಸಮಗೊಳಿಸುವ ಕುರಿತು ಅಲಹಾಬಾದ್‌ ಹೈಕೋರ್ಟ್‌ ಸೂಚನೆಗಳು, ನಿರ್ದೇಶನಗಳು ಸರಿಯಾಗಿವೆ” ಎಂದು ಸ್ಪಷ್ಟಪಡಿಸಿತು.

ಏಕೆ ಕಟ್ಟಡಗಳ ನೆಲಸಮ?

ಅಕ್ಬರ್‌ ನಗರದಲ್ಲಿ ಕಾನೂನುಬಾಹಿರವಾಗಿ ಕಟ್ಟಡಗಳನ್ನು ನಿರ್ಮಿಸಲಾಗಿದೆ. ಅದರಲ್ಲೂ, ಪ್ರವಾಹದ ಭೀತಿ ಜಾಸ್ತಿ ಇರುವ ಪ್ರದೇಶದಲ್ಲಿ (Floodplain) ಇಡೀ ನಗರದ ಕಟ್ಟಡಗಳು ನಿರ್ಮಾಣಗೊಂಡಿವೆ. ಕುಕ್ರೈಲ್‌ ನದಿ ತೀರದಲ್ಲಿ ಸುಮಾರು 15 ಸಾವಿರ ಜನ ವಾಸಿಸುತ್ತಿದ್ದು, ಸಾವಿರಾರು ಕಟ್ಟಡಗಳು ತಲೆಎತ್ತಿವೆ. ಇಲ್ಲಿ ಸರ್ಕಾರದ ಜಾಗವನ್ನು ಅತಿಕ್ರಮಣ ಮಾಡಿಕೊಂಡು, ಸ್ಲಮ್‌ಗಳನ್ನು ನಿರ್ಮಾಣ ಮಾಡಿಕೊಂಡು, ದೊಡ್ಡ ಊರನ್ನೇ ನಿರ್ಮಿಸಲಾಗಿದೆ. ಆದರೆ, ಈ ಊರು ನದಿ ತೀರದಲ್ಲಿರುವುದರಿಂದ ಪ್ರವಾಹದ ಭೀತಿ ಜಾಸ್ತಿ ಇದೆ. ಇದನ್ನು ಪ್ರಮುಖವಾಗಿ ಗಮನದಲ್ಲಿಟ್ಟುಕೊಂಡು ನ್ಯಾಯಾಲಯವು ನೆಲಸಮಕ್ಕೆ ಆದೇಶ ನೀಡಿದೆ ಎಂದು ತಿಳಿದುಬಂದಿದೆ.

15 ಸಾವಿರ ಜನರ ಸ್ಥಿತಿ ಏನು?

ಕಟ್ಟಡಗಳು, ಸ್ಲಮ್‌ಗಳಲ್ಲಿರುವ ಜೋಪಡಿಗಳನ್ನು ನೆಲಸಮಗೊಳಿಸುವುದರಿಂದ ಸುಮಾರು 15 ಸಾವಿರ ಜನರಿಗೆ ತೊಂದರೆಯಾಗಲಿದೆ ಎಂದು ತಿಳಿದುಬಂದಿದೆ. ಇದನ್ನು ಕೂಡ ಗಮನದಲ್ಲಿಟ್ಟುಕೊಂಡಿರುವ ಸುಪ್ರೀಂ ಕೋರ್ಟ್‌, “ನೀವು ಯಾರನ್ನು ಸ್ಥಳಾಂತರ ಮಾಡಬೇಕು ಎಂದಿದ್ದೀರೋ, ಅವರಿಗೆ ಬೇರೆ ಜಾಗದಲ್ಲಿ ಮನೆ ನಿರ್ಮಿಸಿಕೊಡಿ. ಅವರಿಗೆ ಬದಲಿ ಮನೆಯ ವ್ಯವಸ್ಥೆ ಆಗುವವರೆಗೆ ಅಲ್ಲಿಂದ ಸ್ಥಳಾಂತರ ಮಾಡುವ ಹಾಗಿಲ್ಲ” ಎಂದು ಸುಪ್ರೀಂ ಕೋರ್ಟ್‌ ಸ್ಪಷ್ಟಪಡಿಸಿದೆ. ಹಾಗಾಗಿ, ಅಕ್ಬರ್‌ ನಗರದ ನಿವಾಸಿಗಳು ನಿರಾಶ್ರಿತರಾಗುವುದಿಲ್ಲ ಎನ್ನಲಾಗಿದೆ.

ಇದನ್ನೂ ಓದಿ: Bulldozer Justice Video: ಅತ್ಯಾಚಾರ ಎಸಗಿ ಕ್ರೂರಹಿಂಸೆ; ಆರೋಪಿ ಅಯಾನ್‌ ಪಠಾಣ್‌ ಮನೆ ಧ್ವಂಸಗೊಳಿಸಿದ ಬುಲ್ಡೋಜರ್‌!

Exit mobile version