Site icon Vistara News

ಇಂದು ಆರ್ಟಿಕಲ್ 370 ರದ್ದು ತೀರ್ಪು; ಅದಕ್ಕೂ ಮೊದಲು ಈ ಸಂಗತಿ ತಿಳಿದುಕೊಂಡಿರಿ

Supreme Court verdict on Article 370 and Know about this article

ನವದೆಹಲಿ: ಜಮ್ಮು ಮತ್ತು ಕಾಶ್ಮೀರಕ್ಕೆ (Jammu and Kashmir) ವಿಶೇಷ ಸ್ಥಾನಮಾನ (Special Status) ಕಲ್ಪಿಸುವ ಆರ್ಟಿಕಲ್ 370 ರದ್ದು (Article 370) ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆಯನ್ನು ಪೂರ್ಣಗೊಳಿಸಿರುವ ಸುಪ್ರೀಂ ಕೋರ್ಟ್ (Supreme Court) ಡಿ.11, ಸೋಮವಾರ ತೀರ್ಪು ಪ್ರಕಟಿಸಲಿದೆ(Judgment Day). ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ ನೇತೃತ್ವದ ಸಾಂವಿಧಾನಿಕ ಪೀಠವು ದೀರ್ಘ ಅವಧಿಯಿಂದ ಈ ಅರ್ಜಿಗಳ ವಿಚಾರಣೆ ನಡೆಸಿದೆ.

ಸೆಪ್ಟೆಂಬರ್ 5 ರಂದು ಸುಪ್ರೀಂ ಕೋರ್ಟ್ ತೀರ್ಪು ಕಾಯ್ದಿರಿಸಿತ್ತು. 16 ದಿನಗಳ ಕಾಲ ಸಮಗ್ರ ವಿಚಾರಣೆಗೆ ಸಾಕ್ಷಿಯಾಯಿತು. ಅರ್ಜಿದಾರರು ಮತ್ತು ಸರ್ಕಾರ ಇಬ್ಬರೂ ತಮ್ಮ ವಾದಗಳನ್ನು ಮಂಡಿಸಿದರು, ಆರ್ಟಿಕಲ್ 370 ಅನ್ನು ರದ್ದುಗೊಳಿಸಲು ಬಳಸಿದ ಕಾರ್ಯವಿಧಾನದ ಸಾಂವಿಧಾನಿಕತೆಯನ್ನು ಮತ್ತು ಜಮ್ಮು ಮತ್ತು ಕಾಶ್ಮೀರದ ರಾಜ್ಯತ್ವವನ್ನು ನಂತರದ ರದ್ದತಿಯನ್ನು ಪರಿಶೀಲಿಸಲಾಯಿತು. ಅಂತಿಮವಾಗಿ ಸೋಮವಾರ ತೀರ್ಪು ಹೊರ ಬೀಳಲಿದೆ. ಈ ಆರ್ಟಿಕಲ್ 370 ಬಗ್ಗೆ ತಿಳಿದುಕೊಳ್ಳೋಣ ಬನ್ನಿ.

ಏನಿದು ಆರ್ಟಿಕಲ್ 370?

ಆರ್ಟಿಕಲ್ 370 ಭಾರತೀಯ ಸಂವಿಧಾನದಲ್ಲಿ ಅವಿಭಜಿತ ಜಮ್ಮು ಮತ್ತು ಕಾಶ್ಮೀರ ರಾಜ್ಯಕ್ಕೆ ವಿಶೇಷ ಸ್ಥಾನಮಾನವನ್ನು ನೀಡುವ ಪ್ರಮುಖ ನಿಬಂಧನೆಯಾಗಿದೆ. 1949 ಜುಲೈ ತಿಂಗಳಲ್ಲಿ ಜಮ್ಮು ಮತ್ತು ಕಾಶ್ಮೀರ ಮಧ್ಯಂತರ ಪ್ರಧಾನ ಮಂತ್ರಿ ಶೇಖ್ ಅಬ್ದುಲ್ಲಾ ಅವರು ಭಾರತೀಯ ಸಂವಿಧಾನ ಸಭೆಯೊಂದಿಗೆ ಮಾತುಕತೆಗಳನ್ನು ನಡೆಸಿ, ಅಂತಿಮವಾಗಿ 370 ನೇ ವಿಧಿಯನ್ನು ಅಳವಡಿಸಲಾಯಿತು. ಆ ವಿಧಿಯ ಮೂಲಕ ಜಮ್ಮು ಮತ್ತು ಕಾಶ್ಮೀರಕ್ಕೆ ಕೆಲವು ಸ್ವಾಯತ್ತತೆಯನ್ನು ನೀಡಲಾಯಿತು. ಉದಾಹರಣೆಗೆ ರಾಜ್ಯವು ತನ್ನದೇ ಆದ ಸಂವಿಧಾನವನ್ನು ಹೊಂದಲು ಅವಕಾಶ ನೀಡಿತು, ಪ್ರತ್ಯೇಕ ಧ್ವಜ ಮತ್ತು ಭಾರತ ಸರ್ಕಾರದ ಸೀಮಿತ ನ್ಯಾಯವ್ಯಾಪ್ತಿಯನ್ನು ಕಲ್ಪಿಸಿತು.

ಭಾರತೀಯ ಸಂವಿಧಾನ ಆರ್ಟಿಕಲ್ 1, ಜಮ್ಮು ಕಾಶ್ಮೀರಕ್ಕೆ ಆರ್ಟಿಕಲ್ 370 ರ ಮೂಲಕ ಜಾರಿ ಮಾಡಲು ಅವಕಾಶ ಕಲ್ಪಿಸುತ್ತಿದೆ ಎಂದು ಆರ್ಟಿಕಲ್ 370(1)(ಸಿ)ನಲ್ಲಿ ತಿಳಿಸಲಾಗಿದೆ. ಆರ್ಟಿಕಲ್ 1 ಒಕ್ಕೂಟ ಎಂದು ಹೇಳುತ್ತದೆ. ಅದರರ್ಥ ಜಮ್ಮು ಮತ್ತು ಕಾಶ್ಮೀರ ರಾಜ್ಯವನ್ನು ಭಾರತೀಯ ಒಕ್ಕೂಟಕ್ಕೆ ಬಂಧಿಸುವ ವಿಧಿ 370 ಆಗಿದೆ. ರಾಷ್ಟ್ರಪತಿಗಳ ಆದೇಶದ ಮೂಲಕ 370 ನೇ ವಿಧಿಯನ್ನು ತೆಗೆದುಹಾಕಬಹುದಾದರೂ, ಹೊಸ ಕಾನೂನುಗಳನ್ನು ಮಾಡದ ಹೊರತು ಅದು ರಾಜ್ಯವನ್ನು ಭಾರತದಿಂದ ಸ್ವತಂತ್ರವಾಗಿರುವಂತೆ ನೋಡಿಕೊಳ್ಳುತ್ತದೆ.

370ನೇ ವಿಧಿ ರದ್ದು

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಭಾರತ ಸರ್ಕಾರವು ರಾಷ್ಟ್ರಪತಿ ಆದೇಶದ ಮೂಲಕ ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನದ 370 ನೇ ವಿಧಿಯನ್ನು 2019 ಆಗಸ್ಟ್ 5ರಂದು ರದ್ದು ಮಾಡಿತು. ಅಲ್ಲದೇ, ಜಮ್ಮು ಮತ್ತು ಕಾಶ್ಮೀರವನ್ನು ವಿಭಜಿಸಿ, ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಎಂಬ ಕೇಂದ್ರಾಡಳಿತ ಪ್ರದೇಶಗಳನ್ನು ಮಾಡಲಾಯಿತು. ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ರಾಜ್ಯವು ಜಮ್ಮು ಮತ್ತು ಕಾಶ್ಮೀರದ ಕೇಂದ್ರಾಡಳಿತ ಪ್ರದೇಶವು ಶಾಸಕಾಂಗವನ್ನು ಹೊಂದಿದ್ದರೆ, ಲಡಾಖ್ ಶಾಸಕಾಂಗವನ್ನು ಹೊಂದಿರುವುದಿಲ್ಲ.

ಅರ್ಜಿದಾರರ ವಾದವೇನು?

ಆರ್ಟಿಕಲ್ 370 ರದ್ಧತಿ ನಿರ್ಧಾರವು ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ಮತ್ತು ಗುರುತಿನ ಮೇಲೆ ಪ್ರಭಾರ ಬೀರಲಿದೆ. ಜೊತೆಗೆ ಈ ಪ್ರದೇಶದ ಪ್ರದೇಶದ ಸ್ವಾಯತ್ತತೆ ಮತ್ತು ಜನಸಂಖ್ಯಾ ಸಂಯೋಜನೆಗೆ ಅದರ ಸಂಭಾವ್ಯ ಪರಿಣಾಮಗಳ ಬಗ್ಗೆ ಅರ್ಜಿದಾರರು ಆತಂಕ ವ್ಯಕ್ತಪಡಿಸಿದ್ದಾರೆ. ಈ ನೆಲೆಯಲ್ಲೇ ಅರ್ಜಿದಾರರು ಆರ್ಟಿಕಲ್ 370 ರದ್ಧತಿಯು ಸಂವಿಧಾನಬಾಹಿರವಾಗಿದೆ ಎಂದು ವಾದಿಸಿದರು.

ಪೂರ್ಣ ಪ್ರಮಾಣದ ರಾಜ್ಯವನ್ನು ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್ ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಲು ಕೇಂದ್ರ ಸರ್ಕಾರವು ತನಗಿರುವ ಅಖಂಡ ಬಹುಮತ ಮತ್ತು ಕಾರ್ಯನಿರ್ವಾಹಕ ಆದೇಶಗಳನ್ನು ದುರುಪಯೋಗ ಮಾಡಿಕೊಂಡಿದೆ. ಇದು ಒಕ್ಕೂಟ ವ್ಯವಸ್ಥೆ ಮತ್ತು ಸಾಂವಿಧಾನಿಕ ತತ್ವಗಳಿಗೆ ವಿರುದ್ಧವಾದ ನಡೆಯಾಗಿದೆ ಎಂದು ಅರ್ಜಿದಾರರು ವಾದಿಸಿದ್ದಾರೆ.

ಮತ್ತೊಂದೆಡೆ, ಹಿರಿಯ ವಕೀಲ ಕಪಿಲ್ ಸಿಬಲ್, 1957ರಲ್ಲಿ ಜಮ್ಮು ಮತ್ತು ಕಾಶ್ಮೀರ ಸಂವಿಧಾನ ಸಭೆಯನ್ನು ವಿಸರ್ಜನೆ ಮಾಡಿದ ಬಳಿಕ, ಆರ್ಟಿಕಲ್ 370ಗೆ ಶಾಶ್ವತ ಸ್ವರೂಪವನ್ನು ಪಡೆದುಕೊಂಡಿದೆ ಎಂಬ ಅಂಶವನ್ನು ಕೋರ್ಟ್ ಗಮನಕ್ಕೆ ತಂದರು. ಹಾಗಾಗಿಯೇ, ಸಂವಿಧಾನ ತಿದ್ದುಪಡಿಗೆ ಸಂಸತ್ತಿಗೆ ಅಧಿಕಾರ ನೀಡುವ ಆರ್ಟಿಕಲ್ 368 ಅನ್ನು, 370 ವಿಧಿ ರದ್ಧತಿಗೆ ಬಳಸಿದ ಕ್ರಮವನ್ನು ಅರ್ಜಿದಾರರು ಪ್ರಶ್ನಿಸಿದ್ದಾರೆ.

ಕೇಂದ್ರ ಸರ್ಕಾರದ ವಾದವೇನು?

ಆರ್ಟಿಕಲ್ 370 ಜಮ್ಮು ಮತ್ತು ಕಾಶ್ಮೀರವನ್ನು ಭಾರತದ ಉಳಿದ ಭಾಗಗಳೊಂದಿಗೆ ಏಕೀಕರಣಕ್ಕೆ ಅಡ್ಡಿಪಡಿಸುತ್ತದೆ. ಈ ಪ್ರದೇಶದ ಅಭಿವೃದ್ಧಿಯನ್ನು ಸೀಮಿತಗೊಳಿಸುತ್ತದೆ ಎಂಬ ಕಾರಣಕ್ಕಾಗಿ ರದ್ದುಗೊಳಿಸಲಾಯಿತು ಎಂದು ಕೇಂದ್ರ ಸರಕಾರವು ತನ್ನ ವಾದವನ್ನು ಮಂಡಿಸಿತು. ರದ್ಧು ನಿರ್ಧಾರವು ಸಾಮಾಜಿಕ-ಆರ್ಥಿಕ ಅಭಿವೃದ್ಧಿಗೆ, ಸಮಾನ ಹಕ್ಕುಗಳು ಮತ್ತು ಅವಕಾಶಗಳನ್ನು ಉತ್ತೇಜಿಸಲು ಮತ್ತು ಪ್ರದೇಶದಲ್ಲಿ ಉತ್ತಮ ಆಡಳಿತವನ್ನು ಖಚಿತಪಡಿಸಿಕೊಳ್ಳಲು ಸಹಾಯ ಮಾಡುತ್ತದೆ ಎಂದು ವಾದಿಸಲಾಯಿತು. ಈ ಹಿಂದೆ ಜಮ್ಮು ಮತ್ತು ಕಾಶ್ಮೀರದಲ್ಲಿ ಸಂಪೂರ್ಣವಾಗಿ ಅನ್ವಯವಾಗದ ರಾಷ್ಟ್ರೀಯ ಕಾನೂನುಗಳು ಮತ್ತು ಕಾರ್ಯಕ್ರಮಗಳ ಅನ್ವಯಕ್ಕೆ ಇದು ಅನುಕೂಲವಾಗುತ್ತದೆ.

ಜಮ್ಮು ಮತ್ತು ಕಾಶ್ಮೀರವನ್ನು ಭಾರತದ ಏಕತೆಯ ಭಾಗವಾಗಿ ಮಾಡಲು 370 ಆರ್ಟಿಕಲ್ ರದ್ದು ಅಗತ್ಯವಾಗಿತ್ತು. ವಿಶೇಷ ಸ್ಥಾನಮಾನವನ್ನು ವಾಪಸ್ ಪಡೆದುಕೊಂಡು ಬಳಿಕ ಅಂದರೆ, 2019ರ ಬಳಿಕ ಜಮ್ಮು ಮತ್ತು ಕಾಶ್ಮೀರದಲ್ಲಿ ಅಭಿವೃದ್ಧಿ ಸಾಧ್ಯವಾಗುತ್ತದೆ. ಈ ಭಾಗದಲ್ಲಿ ಚುನಾವಣೆ ನಡೆಸುವುದು ಬಾಕಿ ಇದೆ. ಪರಿಸ್ಥಿತಿ ಸುಧಾರಿಸಿದ ನಂತರ ಚುನಾವಣೆಯನ್ನು ನಡೆಸಲಾಗುವುದು ಮತ್ತು ರಾಜ್ಯದ ಸ್ಥಾನಮಾನಗಳನ್ನು ನೀಡಲಾಗುತ್ತದೆ ಎಂದು ವಾದಿಸಿತು.

370 ರದ್ದತಿ ಬಳಿಕ ಕಾಶ್ಮೀರದಲ್ಲಿ ಭಯೋತ್ಪಾದನೆ (ಶೇ. 45.2), ಒಳನುಸುಳುವಿಕೆ (ಶೇ. 90.2), ಕಲ್ಲು ತೂರಾಟದ ಘಟನೆಗಳು (ಶೇ. 97.2), ಮತ್ತು ಭದ್ರತಾ ಸಿಬ್ಬಂದಿ ಸಾವು (ಶೇ. 65.9) ಕಡಿಮೆಯಾಗಿವೆ ಅಂಶವನ್ನು ಕೇಂದ್ರ ಸರ್ಕಾರವು ಕೋರ್ಟ್‌ ಗಮನಕ್ಕೆ ತಂದಿದೆ.

ಸಂವಿಧಾನ ಪೀಠದ ಪರಿಶೀಲನೆ ಏನು?

ಆರ್ಟಿಲ್ 370 ರದ್ಧತಿಯ ಕುರಿತಾದ ಎಲ್ಲ ಆಯಾಮಗಳನ್ನು, ಸಾಂವಿಧಾನಿಕ ನಿಲುವುಗಳನ್ನು ಪೀಠ ಪರಿಶೀಲಿಸಿದೆ. ಅಂದರೆ, ಜಮ್ಮು ಮತ್ತು ಕಾಶ್ಮೀರದ ಮೇಲೆ ರಾಷ್ಟ್ರಪತಿ ಆಡಳಿತ, ಸಂಸತ್ತಿನ ಒಪ್ಪಿಗೆ, ರಾಜ್ಯ ಮರು ಸಂಘಟನೆಯಂಥ ಘಟನೆಗಳನ್ನು ಸಂವಿಧಾನ ಪೀಠವು ಪರಿಶೀಲಿಸಿದೆ.

ಡಿ.11ಕ್ಕೆ ತೀರ್ಪು ಪ್ರಕಟ

ಆರ್ಟಿಕಲ್ 370 ರದ್ದುಗೊಳಿಸುವ ಕೇಂದ್ರ ಸರ್ಕಾರದ ಕ್ರಮವನ್ನು ಪ್ರಶ್ನಿಸಿ 23 ಅರ್ಜಿಗಳನ್ನು ದಾಖಲಾಗಿದ್ದವು. ದೂರಗಾಮಿ ಪರಿಣಾಮಗಳನ್ನು ಬೀರು ಮತ್ತು ಹೆಗ್ಗುರಾತಾಗಬಹುದಾದ ಪ್ರಕರಣದ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ದೀರ್ಘ ಸಮಯದಿಂದ ನಡೆಸುತ್ತಾ ಬಂದಿದೆ. 16 ಮ್ಯಾರಥಾನ್ ದಿನಗಳ ವಿಚಾರಣೆಗಳು ಮತ್ತು ಎರಡೂ ಕಡೆಯವರು ಮಂಡಿಸಿದ ವಾದಗಳ ನಂತರ, ನ್ಯಾಯಾಲಯವು ಸೆಪ್ಟೆಂಬರ್ 5 ರಂದು ತನ್ನ ತೀರ್ಪನ್ನು ಕಾಯ್ದಿರಿಸಿತ್ತು.

ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ನೇತೃತ್ವದ ಮತ್ತು ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್, ಸಂಜೀವ್ ಖನ್ನಾ, ಬಿಆರ್ ಗವಾಯಿ ಮತ್ತು ಸೂರ್ಯಕಾಂತ್ ಅವರನ್ನೊಳಗೊಂಡ ಐದು ನ್ಯಾಯಾಧೀಶರ ಸಂವಿಧಾನ ಪೀಠವು ಸೋಮವಾರ ತೀರ್ಪು ಪ್ರಕಟಿಸಲಿದೆ. 370 ನೇ ವಿಧಿಯ ರದ್ದತಿಯನ್ನು ಸಂವಿಧಾನ ಮತ್ತು ಕಾನೂನು ತತ್ವಗಳಿಗೆ ಅನುಗುಣವಾಗಿ ನಡೆಸಲಾಗಿದೆಯೇ ಎಂದು ನಿರ್ಧರಿಸುವ ಅವರ ಈ ತೀರ್ಮಾನವು ಭಾರೀ ಮಹತ್ವವನ್ನು ಪಡೆದುಕೊಳ್ಳಲಿದೆ.

ಕಪಿಲ್ ಸಿಬಲ್, ಗೋಪಾಲ್ ಸುಬ್ರಮಣ್ಯಂ, ದುಶ್ಯಂತ್ ದವೆ ಮತ್ತು ರಾಜೀವ್ ಧವನ್ ಸೇರಿದಂತೆ 18 ವಕೀಲರು ಕೇಂದ್ರದ ನಿರ್ಧಾರದ ಸಿಂಧುತ್ವವನ್ನು ಪ್ರಶ್ನಿಸಿ ವಾದ ಮಂಡಿಸಿದರೆ, ಅಟಾರ್ನಿ ಜನರಲ್ ಆರ್ ವೆಂಕಟರಮಣಿ, ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಮತ್ತು ಇತರ ಕಾನೂನು ತಜ್ಞರು ಕೇಂದ್ರವನ್ನು ಪ್ರತಿನಿಧಿಸಿ, ಕೇಂದ್ರದ ನಿರ್ಧಾರವು ಸಂಪೂರ್ಣವಾಗಿ ತಾರ್ಕಿಕ ಮತ್ತು ಸೂಕ್ತವಾಗಿದೆ ಎಂದು ವಾದ ಮಂಡಿಸಿದ್ದರು.

ಈ ಸುದ್ದಿಯನ್ನೂ ಓದಿ: Article 370: ರಾಷ್ಟ್ರಪತಿಯವರೇ ರಾಜ್ಯದ ಸ್ಥಾನ ನೀಡಬಹುದು; ಕಾಶ್ಮೀರ ವಿಷಯದಲ್ಲಿ ಸುಪ್ರೀಂ ಮಹತ್ವದ ಪ್ರಸ್ತಾಪ

Exit mobile version