ನವ ದೆಹಲಿ: ಕೇಂದ್ರ ಸರ್ಕಾರ 2016ರಲ್ಲಿ 1000 ರೂ. ಮತ್ತು 500 ರೂ.ಮುಖಬೆಲೆಯ ನೋಟುಗಳನ್ನು ನಿಷೇಧಿಸಿ ಆದೇಶ ನೀಡಿದ್ದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ಗೆ ಸಲ್ಲಿಕೆಯಾಗಿದ್ದ 58 ಅರ್ಜಿಗಳ ವಿಚಾರಣೆ ಪೂರ್ಣಗೊಂಡಿದ್ದು, ಇಂದು (ಜನವರಿ 2) ಮಹತ್ವದ ತೀರ್ಪು ಹೊರಬೀಳಲಿದೆ. 2016ರ ನವೆಂಬರ್ನಲ್ಲಿ ಕೇಂದ್ರ ಸರ್ಕಾರ ರಾತ್ರೋರಾತ್ರಿ 1000 ರೂ. ಮತ್ತು 500 ರೂ.ಮುಖಬೆಲೆಯ ನೋಟುಗಳನ್ನು ನಿರ್ಬಂಧಿಸಿದಾಗ ಇಡೀ ದೇಶದಲ್ಲಿ ಸಂಚಲನ ಸೃಷ್ಟಿಯಾಗಿತ್ತು. ಸುಮಾರು 10 ಲಕ್ಷ ಕೋಟಿ ರೂಪಾಯಿಗಳ ಚಲಾವಣೆ ಒಂದು ರಾತ್ರಿಯಲ್ಲಿ ನಿಂತುಹೋಗಿತ್ತು. ಅದೆಷ್ಟೋ ಜನ ಬದುಕಲ್ಲಿ ಕತ್ತಲು ಆವರಿಸಿದಂತೆ ಕಂಗಾಲಾಗಿಬಿಟ್ಟಿದ್ದರು. ಸಾಮಾನ್ಯ ಜನರಿಂದ ಹಿಡಿದು, ಉದ್ಯಮಿಗಳವರೆಗೆ ಕೈಕಾಲು ಆಡದಂತೆ ಕುಳಿತುಬಿಟ್ಟಿದ್ದರು.
ಬಳಿಕ ಅನೇಕರು ಕೋರ್ಟ್ಮೆಟ್ಟಿಲೇರಿದರು. ಸುಮಾರು 58 ಅರ್ಜಿಗಳನ್ನು ಸುಪ್ರೀಂಕೋರ್ಟ್ನ ಐವರು ನ್ಯಾಯಮೂರ್ತಿಗಳನ್ನೊಳಗೊಂಡ ಸಾಂವಿಧಾನಿಕ ಪೀಠ ವಿಚಾರಣೆ ನಡೆಸುತ್ತ ಬಂದಿತ್ತು. ಡಿಸೆಂಬರ್ 7ರಂದು ಅಂತಿಮ ವಿಚಾರಣೆ ನಡೆಸಿ ತೀರ್ಪು ಕಾಯ್ದಿರಿಸಿತ್ತು. ನ್ಯಾಯಮೂರ್ತಿ ಎಸ್.ಎ.ನಜೀರ್, ನ್ಯಾ. ಬಿ.ಆರ್. ಗವಾಯಿ, ಬಿ.ವಿ. ನಾಗರತ್ನ, ಎ.ಎಸ್. ಬೋಪಣ್ಣ ಮತ್ತು ವಿ. ರಾಮಸುಬ್ರಮಣಿಯನ್ ಅವರನ್ನೊಳಗೊಂಡ ಪೀಠ ಇಂದು ತೀರ್ಪು ನೀಡಲಿದೆ. ಇದರಲ್ಲಿ ಒಂದು ಮಹತ್ವದ ವಿಷಯವೆಂದರೆ, ಈ ನೋಟು ಅಪನಗದೀಕರಣಕ್ಕೆ ಸಂಬಂಧಪಟ್ಟಂತೆ ನ್ಯಾ. ಬಿ.ಆರ್.ನಾಗರತ್ನಾ ಮತ್ತು ಮತ್ತು ಬಿ.ಆರ್. ಗವಾಯಿ ಅವರು ಎರಡು ಪ್ರತ್ಯೇಕ ತೀರ್ಪು ಓದಲಿದ್ದಾರೆ ಎನ್ನಲಾಗಿದೆ. ಹೀಗಾಗಿ ಇನ್ನಷ್ಟು ಕುತೂಹಲ ಮೂಡಿಸಿದೆ.
1000 ರೂ. ಮತ್ತು 500 ರೂ.ಮುಖಬೆಲೆಯ ನೋಟು ನಿಷೇಧ ವಾಪಸ್ ಪಡೆಯಬೇಕು ಎಂಬುದು ಅರ್ಜಿದಾರರ ಆಗ್ರಹವಾಗಿದ್ದರೆ, ಈ ವಿಚಾರದಲ್ಲಿ ಕೋರ್ಟ್ ಹಸ್ತಕ್ಷೇಪ ಸರಿಯಲ್ಲ. ಈಗೇನಾದರೂ ವ್ಯತಿರಕ್ತವಾಗಿ ತೀರ್ಪು ಕೊಟ್ಟರೆ ಅದು ಗಡಿಯಾರದ ಮುಳ್ಳನ್ನು ಹಿಮ್ಮುಖವಾಗಿ ಚಲಿಸುವಂತೆ ಮಾಡಿದಂತೆ ಎಂದು ಕೇಂದ್ರ ಸರ್ಕಾರ ಹೇಳಿದೆ.
ಇದನ್ನೂ ಓದಿ: Old notes | ಅಮಾನ್ಯವಾಗಿರುವ ಹಳೆಯ ನೋಟು ಚಲಾವಣೆಗೆ ಯತ್ನಿಸುತ್ತಿದ್ದ ಮೂವರ ಬಂಧನ