ನವದೆಹಲಿ: 2002ರಲ್ಲಿ ಗುಜರಾತ್‌ನಲ್ಲಿ ನಡೆದ ಗುಜರಾತ್ ಹತ್ಯಾಕಾಂಡದ ವೇಳೆ ಬಿಲ್ಕಿಸ್ ಬಾನೊ (Bilkis Bano Case) ಮೇಲೆ ಸಾಮೂಹಿಕವಾಗಿ ಅತ್ಯಾಚಾರ ಎಸಗಿದ ಅಪರಾಧಿಗಳನ್ನು ಬಿಡುಗಡೆಗೊಳಿಸಿದ್ದ ಗುಜರಾತ್ ಸರ್ಕಾರಕ್ಕೆ ತೀವ್ರ ಹಿನ್ನಡೆಯಾಗಿದೆ. ಅತ್ಯಾಚಾರ ಎಸಗಿದ 11 ಅಪರಾಧಿಗಳ (Bilkis Bano Convicts) ಬಿಡುಗಡೆಗೊಳಿಸಿದ್ದ ಗುಜರಾತ್ ಸರ್ಕಾರದ ಆದೇಶವನ್ನು ಸುಪ್ರೀಂ ಕೋರ್ಟ್ (Supreme Court) ಸೋಮವಾರ (ಜನವರಿ 8) ರದ್ದುಗೊಳಿಸಿದೆ. ಹಾಗಾಗಿ, ಕ್ಷಮಾದಾನದ ಆಧಾರದ ಮೇಲೆ ಬಿಡುಗಡೆಯಾಗಿದ್ದ 11 ಅಪರಾಧಿಗಳಿಗೆ ಈಗ ಜೈಲೇ ಗತಿಯಾಗಿದೆ.
ಸನ್ನಡತೆ ಆಧಾರದ ಮೇಲೆ 11 ಅಪರಾಧಿಗಳನ್ನು ಬಿಡುಗಡೆ ಮಾಡಿದ್ದ ಗುಜರಾತ್ ಸರ್ಕಾರದ ಆದೇಶ ಪ್ರಶ್ನಿಸಿ ಬಿಲ್ಕಿಸ್ ಬಾನೊ ಅವರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅದರಂತೆ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್ ತೀರ್ಪು ಕಾಯ್ದಿರಿಸಿತ್ತು. ಈಗ ಗುಜರಾತ್ ಸರ್ಕಾರದ ಆದೇಶವನ್ನು ರದ್ದುಗೊಳಿಸಿದೆ. “ಅತ್ಯಾಚಾರದ ಅಪರಾಧಿಗಳಿಗೆ ಕ್ಷಮಾದಾನ ನೀಡುವ ವಿಧಾನದಲ್ಲಿ ಗುಜರಾತ್ ಸರ್ಕಾರ ಸಮರ್ಪಕವಾಗಿ ನಿಯಮ ಪಾಲಿಸಿಲ್ಲ. ಬಿಲ್ಕಿಸ್ ಬಾನೊ ಸಲ್ಲಿಸಿದ ಅರ್ಜಿಯು ವಿಚಾರಣೆಗೆ ಅರ್ಹವಾಗಿದೆ. ಹಾಗಾಗಿ, ಗುಜರಾತ್ ಸರ್ಕಾರದ ಆದೇಶವನ್ನು ರದ್ದುಗೊಳಿಸಲಾಗುತ್ತಿದೆ” ಎಂದು ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು ನೀಡಿದೆ.
Supreme Court holds that the petition filed by Bilkis Bano challenging the remission of 11 convicts is maintainable. pic.twitter.com/JdidDuTvy4
— ANI (@ANI) January 8, 2024
ಎರಡು ವಾರದಲ್ಲಿ ಶರಣಾಗಿ
ಸನ್ನಡತೆ ಆಧಾರದ ಮೇಲೆ ಬಿಡುಗಡೆಯಾಗಿರುವ 11 ಅಪರಾಧಿಗಳು ಎರಡು ವಾರದಲ್ಲಿ ಶರಣಾಗಬೇಕು ಎಂದು ಸುಪ್ರೀಂ ಕೋರ್ಟ್ ಸೂಚಿಸಿದೆ. “ಬಿಡುಗಡೆಯಾಗಿರುವವರು ಕಾನೂನಿಗೆ ಗೌರವ ನೀಡಬೇಕು. ಅವರು 2 ವಾರದೊಳಗೆ ಮತ್ತೆ ಜೈಲು ಸೇರಬೇಕು” ಎಂದು ಸುಪ್ರೀಂ ಕೋರ್ಟ್ ಆದೇಶಿಸಿದೆ.
ಏನಿದು ‘ಬಿಡುಗಡೆ’ ಪ್ರಕರಣ?
ಬಿಲ್ಕಿಸ್ ಬಾನೊ ಮೇಲೆ ಅತ್ಯಾಚಾರ, ಅವರ ಮಗಳು ಸೇರಿ ಏಳು ಕುಟುಂಬಸ್ಥರ ಹತ್ಯೆ ಪ್ರಕರಣದ 11 ಅಪರಾಧಿಗಳನ್ನು ಗುಜರಾತ್ ಸರ್ಕಾರವು 1992ರ ನೀತಿ ಅನ್ವಯ 2022ರ ಆಗಸ್ಟ್‌ನಲ್ಲಿ ಬಿಡುಗಡೆ ಮಾಡಿತ್ತು. ಹಾಗಾಗಿ, ಗುಜರಾತ್ ಸರ್ಕಾರದ ತೀರ್ಮಾನದ ವಿರುದ್ಧ ದೇಶಾದ್ಯಂತ ಆಕ್ರೋಶ ವ್ಯಕ್ತವಾಗಿತ್ತು. ಗುಜರಾತ್ ಸರ್ಕಾರದ ಕ್ರಮ ಪ್ರಶ್ನಿಸಿ ಬಿಲ್ಕಿಸ್ ಬಾನೊ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದು, ಇವರ ಪರ ವಕೀಲೆ ಶೋಭಾ ಗುಪ್ತಾ ಅವರು ನವೆಂಬರ್ 30ರಂದು ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ ಅವರ ಎದುರು ಅರ್ಜಿ ಪ್ರಸ್ತಾಪಿಸಿದ್ದರು. ಬಳಿಕ ವಿಚಾರಣೆ ನಡೆಸಿದ್ದ ನ್ಯಾಯಾಲಯವು ತೀರ್ಪು ಕಾಯ್ದಿರಿಸಿತ್ತು.
2002ರಲ್ಲೇನಾಯಿತು?
2002ನೇ ಇಸ್ವಿಯ ಫೆಬ್ರವರಿ 27ರಂದು ಗುಜರಾತ್‌ನಲ್ಲಿ ಸಾಬರಮತಿ ಎಕ್ಸ್ಪ್ರೆಸ್ ರೈಲಿಗೆ ಗೋದ್ರಾ ರೈಲು ನಿಲ್ದಾಣದಲ್ಲಿ ಬೆಂಕಿ ಹಚ್ಚಲಾಗಿತ್ತು. ಇದರಲ್ಲಿ 59 ಕರಸೇವಕರು ಸಜೀವದಹನಗೊಂಡಿದ್ದರು. ಇವರೆಲ್ಲ ಉತ್ತರ ಪ್ರದೇಶದ ಅಯೋಧ್ಯೆಯಿಂದ ಬರುತ್ತಿದ್ದರು. ಗೋದ್ರಾದಲ್ಲಿ ಗಲಾಟೆ-ಹಿಂಸಾಚಾರ ಹೆಚ್ಚಾದ ಬೆನ್ನಲ್ಲೇ ಅಲ್ಲಿನ ಅನೇಕರು ಊರು ತೊರೆಯಲು ಪ್ರಾರಂಭ ಮಾಡಿದರು. ಅಂತೆಯೇ 20 ವರ್ಷದ ಬಿಲ್ಕಿಸ್ ಬಾನೊ ಕೂಡ ಮಾರ್ಚ್ 3ರಂದು ತನ್ನ ಪತಿ, ಪುಟ್ಟ ಮಗಳು ಮತ್ತು ಕುಟುಂಬದ ಇತರ 15 ಸದಸ್ಯರೊಂದಿಗೆ ಹಳ್ಳಿಯನ್ನು ಬಿಟ್ಟು ಹೊರಡುತ್ತಿದ್ದರು. ಆಗವರು ಐದು ತಿಂಗಳ ಗರ್ಭಿಣಿ ಕೂಡ. ಆದರೆ ಅದೇ ಹೊತ್ತಲ್ಲಿ ದುರ್ದೈವ ಅವರ ಬೆನ್ನತ್ತಿತ್ತು. 20-30 ಮಂದಿ ಶಸ್ತ್ರಾಸ್ತ್ರಧಾರಿಗಳನ್ನು ಅವರನ್ನು ಮಾರ್ಗ ಮಧ್ಯೆಯೇ ತಡೆದರು. ಗರ್ಭಿಣಿ ಬಿಲ್ಕಿಸ್ ಬಾನೊ ಮೇಲೆ ಅತ್ಯಾಚಾರ ಮಾಡಿದ್ದಲ್ಲದೆ, ಆಕೆಯ ಕುಟುಂಬದ ಏಳುಮಂದಿಯನ್ನು ಕೊಂದು ಹಾಕಿದರು. ಉಳಿದವರು ಬಿಲ್ಕಿಸ್ ಬಾನೊ ಮಗಳೂ ಜೀವ ಕಳೆದುಕೊಂಡಳು. ಉಳಿದವರು ಹೇಗೋ ಪಾರಾಗಿ ಓಡಿಹೋದರು.
ಬಿಲ್ಕಿಸ್ ಬಾನೊ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಬಹುದೊಡ್ಡ ಸುದ್ದಿಯಾಯಿತು. ಎಲ್ಲೆಡೆಯಿಂದ ಆಕ್ರೋಶ ವ್ಯಕ್ತವಾಯಿತು. 2004ರಲ್ಲಿ ಸುಪ್ರೀಂಕೋರ್ಟ್ ಈ ಕೇಸ್ನ ತನಿಖೆಯನ್ನು ಸಿಬಿಐಗೆ ವಹಿಸಿ ಆದೇಶ ನೀಡಿತು. 2004ರಲ್ಲಿ ಎಲ್ಲ ಆರೋಪಿಗಳೂ ಬಂಧಿತರಾದರು. ಅಹ್ಮದಾಬಾದ್ ಕೋರ್ಟ್ನಲ್ಲಿ ವಿಚಾರಣೆಯೂ ಪ್ರಾರಂಭವಾಯಿತು. ಆದರೆ, ಮತ್ತೆ ಬಿಲ್ಕಿಸ್ ಬಾನೊ ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿ ‘ಸಿಬಿಐನಿಂದ ಸಂಗ್ರಹಿಸಲ್ಪಟ್ಟ ಸಾಕ್ಷಿಗಳನ್ನು ತಿರುಚುವ ಸಾಧ್ಯತೆ ಇದೆ. ಪುರಾವೆಗಳು ನಾಶವಾಗುವ ಆತಂಕ ನನಗೆ ಕಾಡುತ್ತಿದೆ’ ಎಂದು ಹೇಳಿದರು. ಈ ಮೂಲಕ ಗುಜರಾತ್ನ ಅಹ್ಮದಾಬಾದ್ ಕೋರ್ಟ್ನಲ್ಲಿ ಈ ಕೇಸ್ನ ವಿಚಾರಣೆ ಬೇಡ ಎಂದೂ ಮನವಿ ಮಾಡಿದರು. ಹೀಗಾಗಿ 2004ರ ಆಗಸ್ಟ್‌ನಲ್ಲಿ ಸುಪ್ರೀಂಕೋರ್ಟ್, ವಿಚಾರಣೆಯನ್ನು ಮುಂಬೈ ಕೋರ್ಟ್‌ಗೆ ವರ್ಗಾಯಿಸಿತು.
ತಲೆಬುರುಡೆಗಳೇ ಇರಲಿಲ್ಲ !
ಆರೋಪಿಗಳು ಅರೆಸ್ಟ್ ಆಗಿದ್ದರೂ ತನಿಖೆ ಮುಂದುವರಿದಿತ್ತು. ಹತ್ಯೆಯಾದ ಏಳುಮಂದಿಯ (ಬಿಲ್ಕಿಸ್ ಬಾನೊ ಕುಟುಂಬದವರು) ಪೋಸ್ಟ್ಮಾರ್ಟಮ್ ರಿಪೋರ್ಟ್ ಸರಿಯಾಗಿಲ್ಲ. ಆರೋಪಿಗಳನ್ನು ರಕ್ಷಿಸುವ ಉದ್ದೇಶದಿಂದ ಪೋಸ್ಟ್ ಮಾರ್ಟಮ್ನ್ನು ಸೂಕ್ತವಾಗಿ ನಡೆಸಲಿಲ್ಲ ಎಂದು ಸಿಬಿಐ ಅಧಿಕಾರಿಗಳು ಹೇಳಿದರು. ಅಷ್ಟೇ ಅಲ್ಲ, ಹೂಳಲಾಗಿದ್ದ ಅವರ ಮೃತದೇಹವನ್ನು ಮತ್ತೆ ಹೊರತೆಗೆಸಿದರು. ಹೀಗೆ ತೆಗೆಸಿದಾಗ ಆ ಶವಗಳಲ್ಲಿ ಒಂದಕ್ಕೂ ತಲೆ ಇರಲಿಲ್ಲ. ‘ಶವಪರೀಕ್ಷೆಯ ಬಳಿಕ ಅವುಗಳ ತಲೆ ಕತ್ತರಿಸಲಾಗಿದೆ. ಮೃತರ ಗುರುತು ಸಿಗಬಾರದು ಎಂಬ ಕಾರಣಕ್ಕೇ ಹೀಗೆ ಮಾಡಲಾಗಿದೆ. ಇಂಥ ಪ್ರಯತ್ನಗಳ ಮೂಲಕ ತನಿಖೆಯ ದಾರಿ ತಪ್ಪಿಸಿ, ಆರೋಪಿಗಳನ್ನು ಬಚಾವ್ ಮಾಡುವ ಪ್ರಯತ್ನ ನಡೆದಿತ್ತು’ ಎಂದು ವರದಿ ಕೊಟ್ಟರು.
ಇದನ್ನೂ ಓದಿ: Bilkis Bano Case | ಅತ್ಯಾಚಾರಿಗಳ ಬಿಡುಗಡೆ ನಾಚಿಕೆಗೇಡು, ಈ ಕುರಿತು ಮೋದಿಗೆ ಮನವಿ ಮಾಡುವೆ ಎಂದ ಬಿಜೆಪಿ ನಾಯಕ
2008ರಲ್ಲಿ ಜೈಲು ಶಿಕ್ಷೆ
2004ರಿಂದ 2008ರವರೆಗೆ ಸಿಬಿಐ ನಿರಂತರವಾಗಿ ವಿಚಾರಣೆ-ತನಿಖೆ ನಡೆಸಿ, 2008ರ ಜನವರಿ 1ರಂದು ಅದಕ್ಕೊಂದು ತಾರ್ಕಿಕ ಅಂತ್ಯ ನೀಡಿತು. ಬಂಧಿತರಾಗಿದ್ದ 19 ಆರೋಪಿಗಳಲ್ಲಿ 11 ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಿ ಮುಂಬೈನ ಸಿಬಿಐ ವಿಶೇಷ ನ್ಯಾಯಾಲಯ ತೀರ್ಪು ನೀಡಿತು. ಸರಿಯಾದ ಸಾಕ್ಷಿ ಇಲ್ಲದ ಕಾರಣ ಏಳು ಜನರಿಗೆ ಬಿಡಗಡೆ ಭಾಗ್ಯ ದೊರೆಯಿತು. ಹಾಗೇ, ಕೋರ್ಟ್ನಲ್ಲಿ ವಿಚಾರಣೆ ನಡೆಯುತ್ತಿದ್ದಾಗಲೇ ಒಬ್ಬಾತ ಮೃತಪಟ್ಟಿದ್ದ. ಬಿಲ್ಕಿಸ್ ಬಾನೊ ಅವರಿಗೆ ಒಂದು ಮನೆ, 50 ಲಕ್ಷ ರೂಪಾಯಿ ಪರಿಹಾರ, ಅವರ ಮನೆಯಲ್ಲಿ ಒಬ್ಬರಿಗೆ ಉದ್ಯೋಗ ಕೊಡುವಂತೆ ಸುಪ್ರೀಂಕೋರ್ಟ್ 2019ರಲ್ಲಿ ಗುಜರಾತ್ ಸರ್ಕಾರಕ್ಕೆ ಸೂಚನೆಯನ್ನೂ ನೀಡಿತ್ತು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ